Asianet Suvarna News Asianet Suvarna News

2014ರಷ್ಟೇ ತೆರಿ​ಗೆ ಇದ್ದರೆ ಪೆಟ್ರೋಲ್‌ 66 ರೂ, ಡೀಸೆಲ್‌ 55 ರೂ. ಇರುತ್ತಿತ್ತು!

* 7 ವರ್ಷ​ದ​ಲ್ಲಿ ತೆರಿಗೆಯಿಂದ ಬೆಲೆ ಭಾರಿ ಏರಿ​ಕೆ

* 2014ರಷ್ಟೇ ತೆರಿ​ಗೆ ಇದ್ದರೆ ಪೆಟ್ರೋಲ್‌ 66ರೂ, ಡೀಸೆಲ್‌ 55 ರೂ!

Tax collection on petrol diesel up 459pc in 7 years pod
Author
Bangalore, First Published Oct 18, 2021, 9:31 AM IST

ನವದೆಹಲಿ(ಅ.18): ದೇಶ​ದಲ್ಲಿ ಪೆಟ್ರೋಲ್‌(Petrol) ಮತ್ತು ಡೀಸೆಲ್‌(Diesel) ದರಗಳು 100 ರು. ಗಡಿ ದಾಟಿ ಶರವೇಗದಲ್ಲಿ ಏರಿಕೆಯಾಗು​ತ್ತಿ​ದ್ದು, ಜನ​ರಿಗೆ ತಲೆ​ಬಿಸಿ ಸೃಷ್ಟಿ​ಸಿವೆ. ಆದರೆ ಒಂದು ವೇಳೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳವಾಗದೇ 2014ರ ತೆರಿಗೆ ದರವೇ ಇಂದೂ ಜಾರಿ​ಯ​ಲ್ಲಿ​ದ್ದರೆ, ಈಗ ಪೆಟ್ರೋಲ್‌ ದರವು 66 ರು. ಮತ್ತು ಡೀಸೆಲ್‌ ಬೆಲೆ 55 ರು. ಇರುತ್ತಿತ್ತು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

2014ರ ಜೂನ್‌ನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಅನ್ನು ಲೀ.ಗೆ 49 ರು.ನಂತೆ ಡೀಲರ್‌ಗಳಿಗೆ ಮಾರಾಟ ಮಾಡುತ್ತಿ​ದ್ದ​ವು. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಹಾಗೂ ಡೀಲರ್‌ಗಳ ಕಮಿಷನ್‌ ಸೇರಿಸಿ ಲೀ. ಪೆಟ್ರೋಲ್‌ ಬೆಲೆ 74 ರು. ತಲುಪುತ್ತಿತ್ತು. ಇದರಲ್ಲಿ ತೈಲ ಮಾರುಕಟ್ಟೆಕಂಪನಿಗಳು ಶೇ.66ರಷ್ಟುಹಾಗೂ ಉಳಿದ ಶೇ.34ರಲ್ಲಿ ಡೀಲರ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲು ಪಡೆಯುತ್ತಿದ್ದವು.

ಆದ​ರೆ ಇದೀಗ ತೈಲ ಕಂಪನಿಗಳ ಪಾಲು ಶೇ.42ರಷ್ಟುಇಳಿಕೆಯಾಗಿದ್ದು, ಕೇಂದ್ರ, ರಾಜ್ಯಗಳ ತೆರಿ​ಗೆ ಮತ್ತು ಡೀಲರ್‌ಗಳ ಕಮಿಷನ್‌ ಪಾಲು ಶೇ.58ಕ್ಕೆ ಏರಿ​ದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಕೇಂದ್ರದ ತೆರಿಗೆ ಶೇ.14ರಿಂದ 32ಕ್ಕೆ ಜಿಗಿದಿದ್ದರೆ, ರಾಜ್ಯಗಳ ತೆರಿಗೆ ಪಾಲು ಶೇ.17ರಿಂದ ಶೇ.23ಕ್ಕೆ ಏರಿಕೆಯಾಗಿದೆ.

ಒಂದು ವೇಳೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಗಳು 2014ರ ಬಳಿ​ಕ ಏರಿಕೆಯಾಗದಿದ್ದರೆ ಇಂದು ಪೆಟ್ರೋಲ್‌ 66 ರು. ಮತ್ತು ಡೀಸೆಲ್‌ ದರ 55 ರು. ಗಡಿ ದಾಟುತ್ತಿರಲಿಲ್ಲ ಎಂದು ವ್ಯಾಖ್ಯಾ​ನಿ​ಸ​ಲಾ​ಗಿ​ದೆ.

ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌(Petrol) ಮತ್ತು ಡೀಸೆಲ್‌(Diesel) ದರವನ್ನು ಭಾನು​ವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿವೆ. ತನ್ಮೂಲಕ ವಿಮಾನಗಳ(Flight) ಇಂಧ​ನ​ವಾದ ಏವಿಯೇಷನ್‌ ಟರ್ಬೈನ್‌ ಇಂಧನ (Aviation Turbine Fuel) ಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌ಗೆ ಶೇ.33ರಷ್ಟು ಹೆಚ್ಚು ದರ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಮಾನದ ಇಂಧನ ಎಟಿಎಫ್‌ಗೆ(ATF) ಒಂದು ಲೀಟ​ರ್‌ಗೆ 79 ರು. ಇದ್ದರೆ, ದೇಶಾದ್ಯಂತ ಪೆಟ್ರೋಲ್‌ ದರ 110 ರು. ಆಸುಪಾಸಿನಲ್ಲಿದೆ. ಅಂದರೆ ಪೆಟ್ರೋಲ್‌ ದರವು ವೈಮಾ​ನಿಕ ಇಂಧ​ನ​ಕ್ಕಿಂತತ ಶೇ.33ರಷ್ಟು ಹೆಚ್ಚು ದುಬಾ​ರಿ.

ಕಳೆದ 4 ದಿನಗಳಿಂದ ಇಂಧನ ದರ ಏರಿಕೆ ಪರ್ವ ಮುಂದುವರಿದಿದ್ದು, ಈ 4 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.40 ರು. ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 109.53 ರು. ಮತ್ತು ಡೀಸೆಲ್‌ ದರ 100.37 ರು.ಗೆ ತಲುಪಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ಗೆ 105.84 ರು. ಮತ್ತು ಡೀಸೆಲ್‌ಗೆ 94.57 ರು. ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ 111.77 ರು. ಮತ್ತು ಡೀಸೆಲ್‌ 102.52 ರು.ಗೆ ಜಿಗಿದಿದೆ.

ಇನ್ನು ದೇಶ​ದಲ್ಲೇ ಅತಿ ದುಬಾರಿ ದರ ರಾಜಸ್ಥಾನದ ಗಂಗಾನಗರದಲ್ಲಿದೆ. ಇಲ್ಲಿ ಪೆಟ್ರೋಲ್‌ 117.86 ರು. ಮತ್ತು ಡೀಸೆಲ್‌ಗೆ 105.95 ರು. ಇದೆ.

Follow Us:
Download App:
  • android
  • ios