ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್ ಕಟ್ಟಿ ಸಾಗಬೇಕು. 20 ರೂಪಾಯಿಯಿಂದ ಹಿಡಿದು 800, 1000 ರೂಪಾಯಿಗೂ ಮೇಲ್ಪಟ್ಟು ಟೋಲ್ ದರವಿದೆ. ಇದೀಗ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಎಲ್ಲಾ ಟೋಲ್ ದರ ಹೆಚ್ಚಿಸಲಾಗಿದೆ. ಸದ್ಯ ಟೋಲ್‌ನಿಂದ ಬರುವ ಆದಾಯವೆಷ್ಟು? ಪ್ರತಿ ದಿನ ಟೋಲ್ ಸಂಗ್ರಹ ಎಷ್ಟು ಕೋಟಿ ರೂಪಾಯಿ?

ನವದೆಹಲಿ(ಜು.30): ಭಾರತದಲ್ಲಿ ದುಬಾರಿ ಟೋಲ್ ಸಂಗ್ರಹಕ್ಕೆ ಭಾರಿ ವಿರೋಧವಿದೆ. ಇತ್ತೀಚೆಗಷ್ಟೇ ಟೋಲ್ ದರವನ್ನು ಹೆಚ್ಚಿಸಿ ಪ್ರಯಾಣಿಕರ ಮೇಲೆ ಬರೆ ಹಾಕಲಾಗಿದೆ. FASTag ಇಲ್ಲದಿದ್ದರೆ ದುಪಟ್ಟು ಟೋಲ್ ಕಟ್ಟಬೇಕು. ಪ್ರತಿ ದಿನ ಲಕ್ಷಾಂತರ ವಾಹನಗಳು ಹೆದ್ದಾರಿ ಮೂಲಕ ಸಾಗುತ್ತದೆ. ಪ್ರತಿ ದಿನ ಪ್ರಯಾಣಿಕರು ಕಟ್ಟುವ ಟೋಲ್‌ನಿಂದ ಕೇಂದ್ರ ಸರ್ಕಾರ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ದರ ಹೆಚ್ಚಳ ಹಾಗೂ ಹೆಚ್ಚುವರಿ ಟೋಲ್ ಸ್ಥಾಪನೆಯಿಂದ ಪ್ರತಿ ದಿನದ ಟೋಲ್ ಸಂಗ್ರಹ ಹೆಚ್ಚಳವಾಗಿದೆ. ಇದೀಗ ಪ್ರತಿ ದಿನ ಭಾರತದಲ್ಲಿ 150 ಕೋಟಿ ರೂಪಾಯಿ ಟೋಲ್‌ನಿಂದ ಸಂಗ್ರಹವಾಗುತ್ತಿದೆ.

2023-24ರ ಆರ್ಥಿಕ ವರ್ಷದ ಮೊದಲ ಮೂರು ತಿಂಗಳ ಟೋಲ್ ಆದಾಯ ಹೆಚ್ಚಳವಾಗಿದೆ. ಈ ಮೂರು ತಿಂಗಳ ಸರಾಸರಿಯಲ್ಲಿ 150 ಕೋಟಿ ರೂಪಾಯಿ ಪ್ರತಿ ದಿನ ಸಂಗ್ರಹವಾಗುತ್ತಿದೆ. 2022-23ರ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಿಗೆ ಹೋಲಿಸಿದರೆ 20 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದ ತಿಂಗಳ ಸರಾಸರಿ 130 ಕೋಟಿ ರೂಪಾಯಿ.

Fastag: ಐದೇ ವರ್ಷದಲ್ಲಿ ಫಾಸ್ಟ್‌ಟ್ಯಾಗ್‌ ಟೋಲ್‌ ಕಲೆಕ್ಷನ್‌ ಡಬಲ್‌!

ಈ ಕುರಿತು ಲೋಕಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. 2023ರಲ್ಲಿ ಪ್ರತಿ ತಿಂಗಳು ಸರಾಸರಿ 4,406 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. 2022-23ರ ಸಾಲಿನ ಮೊದಲ ಮೂರು ತಿಂಗಳ ಸರಾಸರಿ ಪ್ರಕಾರ ಪ್ರತಿ ತಿಂಗಳು 3,841 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು.ಈ ವರ್ಷ ಏರಿಕೆಯಾಗಿದೆ.

ಭಾರಿ ಘನವಾಹನ, ಸರಕು ಸಾಗಾಣಿಕೆ ವಾಹನದಿಂದ ಸಂಗ್ರಹವಾಗುತ್ತಿರುವ ಟೋಲ್ ಹಣ ದುಪ್ಪಟ್ಟು ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಜೂನ್ 30, 2023ರ ವೇಳೆಗೆ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 898 ಟೋಲ್ ಸಂಗ್ರಹ ಕೇಂದ್ರಗಳಿವೆ. 2025-16ರ ಸಾಲಿನಲ್ಲಿ ಭಾರತದಲ್ಲಿ ವಾರ್ಷಿಕ ಒಟ್ಟು 17,759 ಕೋಟಿ ರೂಪಾಯಿ ಸಂಗ್ರಹಾಗಿತ್ತು. 2022-23ರ ಸಾಲಿನಲ್ಲಿ 48,028 ಕೋಟಿ ರೂಪಾಯಿ ಟೋಲ್‌ನಿಂದ ಸಂಗ್ರಹವಾಗಿದೆ.

ಇತ್ತೀಚೆಗೆ ಮೈಸೂರ ಬೆಂಗಳೂರು ಹೆದ್ದಾರಿಯಲ್ಲಿ ಎರಡನೇ ಟೋಲ್ ಆರಂಭಿಸಲಾಗಿದೆ. ಬೆಂಗಳೂರು- ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಮೊದಲ ಟೋಲ್‌ ಸಂಗ್ರಹಿಸಲಾಗುತ್ತಿತ್ತು. ಇದೀಗ ನಿಡಘಟ್ಟದಿಂದ ಮೈಸೂರುವರೆಗಿನ ಟೋಲ್‌ ಸಂಗ್ರಹ ನಡೆಯುತ್ತಿದೆ.. ಇದರಿಂದಾಗಿ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಕಾರುಗಳು 117 ಕಿ.ಮೀ. ಪ್ರಯಾಣಕ್ಕೆ ಒಂದು ಬದಿಗೆ 320 ರು. ಪಾವತಿಸಬೇಕಿದೆ. ಒಂದೇ ದಿನದಲ್ಲಿ ಹೋಗಿ ಬರಲು 485 ರು. ತೆರಬೇಕಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

'ಇನ್ನೊಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್‌ ಪ್ಲಾಜಾಗಳು ಬಂದ್!'

ಕೇವಲ 6 ಕಿ.ಮೀ.ದೂರದ ಪ್ರಯಾಣಕ್ಕೆ 300 ರು.ಕಟ್ಟಿಎಂದರೆ ರೈತರು, ಬಡವರು, ಜೀವನ ಮಾಡುವುದು ಹೇಗೆ?. ರಾಮನಗರ ಜಿಲ್ಲೆಯ ಕಣಮಿಣಕಿ ಬಳಿಯೇ ಟೋಲ್‌ ಕಟ್ಟುತ್ತೇವೆ. ಮತ್ತೆ ಶ್ರೀರಂಗಪಟ್ಟಣದ ಗಣಂಗೂರು ಬಳಿಯೂ ಟೋಲ್‌ ಕಟ್ಟಬೇಕೆನ್ನುವುದು ನ್ಯಾಯವೇ? ಈ ಬಗ್ಗೆ ಎಲ್ಲಿಯೂ ಮಾಹಿತಿಯನ್ನೇ ನೀಡಿಲ್ಲ. ದುಬಾರಿ ಟೋಲ್‌ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಟೋಲ್‌ ಸಂಗ್ರಹದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.