ದೇಶದ ಟೋಲ್‌ ರಸ್ತೆಗಳಲ್ಲಿ ಫಾಸ್ಟ್‌ಟ್ಯಾಗ್‌ಅನ್ನು ಕಡ್ಡಾಯ ಮಾಡಿದ್ದರಿಂದ ಕೇಂದ್ರ ಸರ್ಕಾರ ಭರ್ಜರಿ ಲಾಭ ಮಾಡಿದೆ. ಐದೇ ವರ್ಷಗಳಲ್ಲಿ ಫಾಸ್ಟ್‌ಟ್ಯಾಗ್‌ನಿಂದ ಬರುವ ಆದಾಯ ದುಪ್ಪಟ್ಟು ಏರಿಕೆಯಾಗಿದೆ. 

ನವದೆಹಲಿ (ಜೂ.22): ಈ ವರ್ಷದ ಮೊದಲ ಆರು ತಿಂಗಳಲ್ಲಿ ಅಂದರೆ, ಜುಲೈ 19ರವರೆಗೆ ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್‌ ಟೋಲ್‌ ಕಲೆಕ್ಷನ್‌ನಿಂದ ಬರೋಬ್ಬರಿ 28,180 ಕೋಟಿ ರೂಪಾಯಿ ಆದಾಯ ಸಂಪಾದನೆ ಮಾಡಿದೆ. 2021 ರಿಂದ 2022ರ ನಡುವೆ ಫಾಸ್ಟ್‌ಟ್ಯಾಗ್‌ನಿಂದ ಬರುವ ಆದಾಯದಲ್ಲಿ ಬರೋಬ್ಬರಿ ಶೇ.46ರಷ್ಟು ಏರಿಕೆಯಾಗಿದೆ. ಈ ಮೊತ್ತ 34,778 ಕೋಟಿ ರೂಪಾಯಿಯಿಂದ 50, 855 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ಕಳೆದ ಐದು ವರ್ಷಗಳಲ್ಲಿ ಅಂದರೆ, 2017 ರಿಂದ 2022ರ ಅವಧಿಯಲ್ಲಿ ಫಾಸ್ಟ್‌ಟ್ಯಾಗ್‌ ಟೋಲ್‌ ಕಲೆಕ್ಷನ್‌ ದುಪ್ಪಟ್ಟಾಗಿರುವುದು ಕೇಂದ್ರ ಸರ್ಕಾರದ ಸಂಭ್ರಮಕ್ಕೂ ಕಾರಣವಾಗಿದೆ. 22,820 ಕೋಟಿ ರೂಪಾಯಿಯಿಂದ, 50,855 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2021ರಿಂದ ದೇಶದ ಟೋಲ್‌ ರಸ್ತೆಗಳಲ್ಲಿ ಫಾಸ್ಟ್‌ಟ್ಯಾಗ್‌ಅನ್ನು ಕಡ್ಡಾಯ ಮಾಡಿರುವುದು ಟೋಲ್‌ ಕಲೆಕ್ಷನ್‌ ದುಪ್ಪಟ್ಟಾಗಲು ಕಾರಣ ಎನ್ನಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಮೇ 2023 ರ ವೇಳೆಗೆ, ದೇಶದಲ್ಲಿ ಒಟ್ಟು 7.06 ಕೋಟಿ ವಾಹನಗಳಿವೆ. 2019 ರಿಂದ ಫಾಸ್ಟ್‌ಟ್ಯಾಗ್‌ ಕಲೆಕ್ಷನ್‌ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. 2019 ರಲ್ಲಿ ದೇಶದಲ್ಲಿ ಕೇವಲ 1.70 ಕೋಟಿ ವಾಹನಗಳು ಮಾತ್ರ ಫಾಸ್ಟ್‌ಟ್ಯಾಗ್ ಹೊಂದಿದ್ದವು. ಆದರೆ, ಇಂದು ಇದರಲ್ಲಿ ಶೇ.300ರಷ್ಟು ಹೆಚ್ಚು ಬೆಳವಣಿಗೆಯಾಗಿದೆ.

ಮಧ್ಯಪ್ರದೇಶದಲ್ಲಿ ಗರಿಷ್ಠ 143 ಫಾಸ್ಟ್‌ಟ್ಯಾಗ್‌ ಟೋಲ್‌ ಪ್ಲಾಜಾ: ಇಂದು ದೇಶದ 964ಕ್ಕೂ ಅಧಿಕ ಟೋಲ್‌ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಕಡ್ಡಾಯವಾಗಿದೆ. ಇದರಲ್ಲಿ ಗರಿಷ್ಠ ಪ್ರಮಾಣದ ಟೋಲ್‌ ಪ್ಲಾಜಾ ಇರುವುದು ಮಧ್ಯಪ್ರದೇಶದಲ್ಲಿ. ಮಧ್ಯಪ್ರದೇಶದಲ್ಲಿ ಬರೋಬ್ಬರಿ 143 ಟೋಲ್‌ ಪ್ಲಾಜಾಗಳಿಂದ ವಾಹನಗಳ ಟೋಲ್‌ ಕಲೆಕ್ಷನ್‌ ಮಾಡಲಾಗುತ್ತಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ರಾಜ್ಯಲ್ಲಿ 114 ಫಾಸ್ಟ್‌ಟ್ಯಾಗ್‌ ಟೋಲ್‌ ಪ್ಲಾಜಾಗಳಿವೆ. ಗರಿಷ್ಠ ಟೋಲ್‌ ಪ್ಲಾಜಾಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. 104 ಟೋಲ್‌ ಪ್ಲಾಜಾ ಇರುವ ರಾಜಸ್ಥಾನ ಮೂರನೇ ಸ್ಥಾನದಲ್ಲಿದ್ದರೆ, 84 ಟೋಲ್‌ ಪ್ಲಾಜಾ ಹೊಂದಿರುವ ಮಹಾರಾಷ್ಟ್ರ 4 ಹಾಗೂ 77 ಟೋಲ್‌ ಪ್ಲಾಜಾ ಹೊಂದಿರುವ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಫಾಸ್ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಫಾಸ್ಟ್‌ಟ್ಯಾಗ್ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಫಾಸ್ಟ್ಯಾಗ್ ವಾಹನದ ನೋಂದಣಿ ವಿವರಗಳೊಂದಿಗೆ ಲಿಂಕ್ ಆಗಿರುತ್ತದೆ. ಫಾಸ್ಟ್ಯಾಗ್ ಪರಿಚಯಿಸುವ ಮೊದಲು, ಒಬ್ಬರು ಟೋಲ್ ಪ್ಲಾಜಾದಲ್ಲಿ ನಿಂತು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕಾಗಿತ್ತು. ಫಾಸ್ಟ್ಯಾಗ್ ಪರಿಚಯಿಸಿದಾಗಿನಿಂದ, ಟೋಲ್ ಪ್ಲಾಜಾಗಳಲ್ಲಿನ ಟ್ರಾಫಿಕ್‌ಗಳಲ್ಲಿ ಭಾರೀ ಕಡಿತವಾಗಿದೆ.

ಫಾಸ್ಟ್‌ಟ್ಯಾಗ್‌ನಲ್ಲಿ 10 ರೂಪಾಯಿ ಹೆಚ್ಚಿನ ಹಣ ಕಟ್‌, ಹೆದ್ದಾರಿ ಪ್ರಾಧಿಕಾರವನ್ನೇ ಕೋರ್ಟ್‌ಗೆ ಎಳೆದ ಬೆಂಗಳೂರಿಗ!

ನೀವು ದೇಶದ ಯಾವುದೇ ಟೋಲ್ ಪ್ಲಾಜಾದಿಂದ ಫಾಸ್ಟ್ಯಾಗ್ ಖರೀದಿಸಬಹುದು. ಇದಲ್ಲದೆ, ನೀವು ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಕೋಟಕ್ ಬ್ಯಾಂಕ್ ಶಾಖೆಯಿಂದಲೂ ಖರೀದಿಸಬಹುದು. Paytm, Amazon, Google Pay ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೂ ನೀವು ಇದನ್ನು ಖರೀದಿಸಬಹುದು. ಈ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಲಿಂಕ್ ಮಾಡುವ ಮೂಲಕ ನೀವು ಪಾವತಿಗಳನ್ನು ಮಾಡಬಹುದು. ಈ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಲಿಂಕ್ ಮಾಡಬಹುದು. ಇದರೊಂದಿಗೆ, ನೀವು ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ನಿಮ್ಮ ಖಾತೆಯಿಂದ ಟೋಲ್ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಫಾಸ್ಟ್ಯಾಗ್ ಖರೀದಿಸುವಾಗ, ನೀವು ಐಡಿ ಪುರಾವೆ ಮತ್ತು ವಾಹನ ನೋಂದಣಿ ದಾಖಲೆಯನ್ನು ಹೊಂದಿರಬೇಕು.

ಕಾರ್ ಕ್ಲೀನ್ ಮಾಡೋ ನೆಪದಲ್ಲಿ ಫಾಸ್ಟ್ಯಾಗ್‌ನಿಂದ ಹಣ ಎಗರಿಸಿದ ಬಾಲಕ! ಇದು ಸಾಧ್ಯವೇ ಇಲ್ಲ ಎಂದ FASTag!

ಫಾಸ್ಟ್ಯಾಗ್ ಸ್ಟಿಕ್ಕರ್ 5 ವರ್ಷಗಳವರೆಗೆ ಮಾನ್ಯ: ಒಮ್ಮೆ ಖರೀದಿಸಿದ ಫಾಸ್ಟ್ಯಾಗ್ ಸ್ಟಿಕ್ಕರ್ 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 5 ವರ್ಷಗಳ ನಂತರ ನೀವು ಸ್ಟಿಕ್ಕರ್ ಅನ್ನು ಬದಲಾಯಿಸಬೇಕು ಅಥವಾ ಅದರ ಸಿಂಧುತ್ವವನ್ನು ಹೆಚ್ಚಿಸಬೇಕು.