ಕಾಂಗ್ರೆಸ್ ನಾಯಕ ಟಾಟಾ ನೆಕ್ಸಾನ್ ಇವಿ ಖರೀದಿಗೆ ಬಿಜೆಪಿ ಸಚಿವ ಕಾರಣ!
*ಟಾಟಾ ನೆಕ್ಸಾನ್ ಇವಿ ಖರೀದಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
*ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾತುಗಳಿಂದ ಪ್ರೇರಿತರಾದ ಕಾಂಗ್ರೆಸ್ ನಾಯಕ
*ವಿದ್ಯುತ್ ಚಾಲಿತವಾಹನಗಳ ಮಾರಾಟಕ್ಕೆ ಭಾರೀ ಉತ್ತೇಜನಾ ಕ್ರಮಗಳು
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅವಕಾಶ ಸಿಕ್ಕಾಗಲೆಲ್ಲ ಪರಿಸರಸ್ನೇಹಿಯಾಗಿರುವ ಎಲೆಕ್ಟ್ರಿಕ್ ವೆಹಿಕಲ್ (Electric Vehicles) ಗಳ ಪರ ವಕಾಲತ್ತು ವಹಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮಾರಾಟ ಮತ್ತು ಉತ್ಪಾದನೆ ಹೆಚ್ಚಿಸಲು ಏನು ಸಾಧ್ಯವೋ ಅದನ್ನು ಮಾಡುತ್ತಲೇ ಬಂದಿದ್ದಾರೆ. ಅವರ ಈ ಪರಿಸರಸ್ನೇಹಿ ಕಾಳಜಿಗೆ ಪ್ರತಿಪಕ್ಷದ ನಾಯಕರೊಬ್ಬರು ಫಿದಾ ಆಗಿದ್ದಾರೆ. ಹೌದು, ಕಾಂಗ್ರೆಸ್‌ನ ಪ್ರಮುಖ ನಾಯಕ ಮತ್ತು ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಜೈರಾಮ್ ರಮೇಶ್ ಅವರು ಗಡ್ಕರಿ ಅವರ ಮಾತುಗಳಿಂದ ಪ್ರೇರಿತರಾಗಿ ಎಲೆಕ್ಟ್ರಿಕ್ ವೆಹಿಕಲ್ ಖರೀದಿಸಿದ್ದಾರೆ! ಈ ವಿಷಯವನ್ನು ಸ್ವತಃ ಜೈರಾಂ ರಮೇಶ್ ಅವರೇ ತಿಳಿಸಿದ್ದಾರೆ. ಮಾರ್ಚ್ 22ರಂದು ನಿತಿನ್ ಗಡ್ಕರಿ ಅವರ ವಿಚಾರ ವಿನಿಮಯ ಬಳಿಕ ನಾನು ಟಾಟಾ ನೆಕ್ಸಾನ್ ಇವಿ ಖರೀದಿಸಿದ್ದಾರೆ. 2035ರ ಹೊತ್ತಿಗೆ ಭಾರತವು ಎಲ್ಲ ರೀತಿಯ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಉತ್ಪಾದನೆಗೆ ಮಂಗಳ ಹಾಡಬೇಕು ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ನಿತಿನ್ ಗಡ್ಕರಿ (Nitin Gadkari) ಅವರು 2021ರಲ್ಲಿ ಎಲೆಕ್ಟ್ರಿಕ್ ವಹಿಕಲ್ ಮಾರಾಟ ಹೆಚ್ಚಿದ್ದು, ದೇಶದಲ್ಲಿ ಶೇ.1.4ರಷ್ಟು ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿವೆ. 2035 ಅಥವಾ 20145ರ ಹೊತ್ತಿಗೆ ಬಹಳಷ್ಟು ದೇಶಗಳು ಸಂಪೂರ್ಣವಾಗಿ ಸಾಂಪ್ರದಾಯಿಕ ಎಂಜಿನ್‌ಗಳನ್ನು ಒಳಗೊಂಡ ವಾಹನಗಳ ಉತ್ಪಾದನೆಯನ್ನ ಸಂಪೂರ್ಣವಾಗಿ ನಿಲ್ಲಿಸಲಿವೆ ಎಂದು ತಿಳಿಸಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಅವರು, ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬಗ್ಗೆ ಸರಕಾರದ ಬಳಿ ಯಾವುದಾದರೂ ಪ್ಲ್ಯಾನ್ ಇದೆಯೇ ಎಂದು ಕೇಳಿದ್ದರು. ಒಂದು ನಿರ್ದಿಷ್ಟ ಯೋಜನೆ ಇಲ್ಲದೇ ಹೋದರೆ ಪೆಟ್ರೋಲ್ ಮತ್ತು ಡಿಸೇಲ್ ವೆಹಿಕಲ್ ಉತ್ಪಾದನೆ ನಿಲ್ಲಲಾರದು. ಜತೆಗೇ ಅವರಿಗೆ ಉತ್ತೇಜನ ಕೂಡ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು.
5 ಮಹೀಂದ್ರಾ ಆಲ್ ಎಲೆಕ್ಟ್ರಿಕ್ ಎಸ್ಯುವಿ ವಿನ್ಯಾಸ, ಟೀಸರ್ ಬಿಡುಗಡೆ
ಕಾಂಗ್ರೆಸ್ (Congress) ಸಂಸದ ಜೈರಾಮ್ ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ್ದ ನಿತಿನ್ ಗಡ್ಕರಿ ಅವರು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತಹಂತವಾಗಿ ನಿಲ್ಲಿಸಲು 2035 ಅಥವಾ 2040 ಅನ್ನು ಡೆಡ್‌ಲೈನ್‌ನೊಂದಿಗೆ ಯಾವುದೇ ನಿಗದಿತ ಕಾರ್ಯಕ್ರಮಕ್ಕೆ ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪ್ರಸ್ತುತ ಕಾರಿನ ಬೆಲೆ 15 ಲಕ್ಷ ರೂಪಾಯಿ ಆಗಿದ್ದರೆ, ಪೆಟ್ರೋಲ್‌ಗೆ 15,000 ರೂ. ವೆಚ್ಚವಾಗಲಿದ್ದು, ಇವಿಯಲ್ಲಿ ಅದು 2,000 ರೂ. ಆಗಬಹುದು. ಹಾಗಾಗಿ, ಅದಕ್ಕೆ ಯಾವುದೇ ಮಾರುಕಟ್ಟೆಯ ಅಗತ್ಯವಿಲ್ಲ. ಎಲೆಕ್ಟ್ರಿಕ್ ವಾಹನಗಳು ಒದಗಿಸುವ ಆರಾಮದಾಯಕ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಆಯ್ಕೆಗೆ ಹೋಗುವುದು ಗ್ರಾಹಕನಿಗೆ ನೈಸರ್ಗಿಕ ಆಯ್ಕೆಯಾಗಿದೆ ಎಂದು ಗಡ್ಕರಿ ಅವರು ತಿಳಿಸಿದ್ದರು.
ಯಮಹಾ ಮಾನ್‌ಸ್ಟರ್ ಮೊಟೋ ಜಿಪಿ ಎಡಿಷನ್ ಬೈಕ್ ಬಿಡುಗಡೆ!
ಸದ್ಯಕ್ಕೆ ಇಂತಿಷ್ಟೇ ವರ್ಷದಲ್ಲಿ ಸಾಂಪ್ರದಾಯಿಕ ಡಿಸೇಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳನ್ನು ಸ್ಥಗಿತಗೊಳಿಸುವ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಕಮಿಟ್ ಆದರೆ ಆ ಬಗ್ಗೆ ಮಾಧ್ಯಮಗಳು ಒತ್ತಿ ಹೇಳುತ್ತವೆ. ಇದು ಹೊಸ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಅವರು ಚರ್ಚೆ ವೇಳೆ ತಿಳಿಸಿದ್ದರು. ದೇಶದಲ್ಲಿ ವಿದ್ಯುತ್ ಚಾಲಿತ ವಾಹನ (Electric Vehicles)ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರಕಾರ ಮಾತ್ರವಲ್ಲದೇ, ಕರ್ನಾಟಕವು ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ವಿದ್ಯುತ್ ಚಾಲಿತ ವಾಹನಗಳ ನೀತಿಯನ್ನು ಜಾರಿಗೆ ತಂದಿವೆ. ಈ ಮೂಲಕ ಇವಿ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಉತ್ತೇಜನ ಕ್ರಮಗಳನ್ನು ಜಾರಿಗೆ ತಂದಿವೆ.