ಮಂಗಳೂರು,[ಅ.14]: ವಿದೇಶಿ ವಾದ್ಯ ಪರಿಕರ ಸ್ಯಾಕ್ಸೋಫೋನ್‌ಗೆ ಕರ್ನಾಟಕ ಸಂಗೀತವನ್ನು ಅಳವಡಿಸಿ ಯಶಸ್ವಿಯಾದ ಏಕೈಕ ಕಲಾಸಾಧಕ, ಪದ್ಮಶ್ರೀ, ಕಲೈಮಾಮಣಿ ಡಾ.ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜಿಪದ ಮಿತ್ತಮಜಲಿನ ಮಿತ್ತಕೆರೆ ಎಂಬಲ್ಲಿ ವಿಧಿಪೂರ್ವಕವಾಗಿ ನೆರವೇರಿತು. 

ಪಾಶ್ಚಿಮಾತ್ಯ ವಾದ್ಯದಲ್ಲಿ ಪೂರ್ವ- ಪಶ್ಚಿಮ ಬೆಸೆದ ನಾದ ಗಾರುಡಿಗ

ಗೋಪಾಲನಾಥ್ ಅವರ ಅಸಂಖ್ಯ ಅಭಿಮಾನಿಗಳು, ಕುಟುಂಬಸ್ಥರು, ಸಾರ್ವಜನಿಕರ ಸಮ್ಮುಖದಲ್ಲಿ ಮೇರು ಕಲಾವಿದಗೆ ಅಂತಿಮ ಭಾವಪೂರ್ಣ ವಿದಾಯ ಕೋರಿದರು. ಜೋಗಿ ಸಂಪ್ರದಾಯದಂತೆ ಪಾರ್ಥಿವ ಶರೀರವನ್ನು ಮಣ್ಣಿನಲ್ಲಿ ಹೂಳುವ ಮೂಲಕ ಸಮಾಧಿಗೊಳಿಸಲಾಯಿತು.

ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

ಸಹೋದರರಾದ ಚಂದ್ರನಾಥ್, ರಮೇಶ್ ನಾಥ್, ಗಣೇಶ್ ನಾಥ್, ಪತ್ನಿ ಸರೋಜಿನಿ, ಪುತ್ರರಾದ ಮಣಿಕಾಂತ್ ಕದ್ರಿ, ಗುರುಪ್ರಸಾದ್ ಕದ್ರಿ, ಪುತ್ರಿ ಅಂಬಿಕಾ ಮತ್ತು ಕುಟುಂಬಸ್ಥರು ಜೋಗಿ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದರು.

ಜಿಲ್ಲಾಡಳಿತದ ಪ್ರತಿನಿಧಿಯಾಗಿ ಆಗಮಿಸಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲಾಯಿತು. ಪೊಲೀಸ್ ಡಿವೈಎಸ್ಪಿ ದಿನಕರ ಶೆಟ್ಟಿ ಮುಂದಾಳತ್ವದಲ್ಲಿ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ನಾರಾಯಣ್ ಪೂಜಾರಿ ನೇತೃತ್ವದಲ್ಲಿ ಹೂಗುಚ್ಛ ಇರಿಸಿ, ಮೂರು ಬಾರಿ ಕುಶಾಲತೋಪು ಸಿಡಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಗೋಪಾಲನಾಥ್ ನಿಧನ : ಎಸ್ಸೆಂ ಕೃಷ್ಣ ಸಂತಾಪ

ಅಪರಾಹ್ನ 2ಗಂಟೆ ವೇಳೆಗೆ ಮಂಗಳೂರಿನಿಂದ ಹೊರಟ ಗೋಪಾಲನಾಥ್ ಅವರ ಪಾರ್ಥಿವ ಶರೀರ 2.50ರ ವೇಳೆಗೆ ಸಜಿಪಮೂಡ ಗ್ರಾಮಕ್ಕೆ ತಲುಪಿದ್ದು, ಇಲ್ಲಿನ ಮಿತ್ತಕೆರೆಯ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.

ಗಣ್ಯರ ಅಂತಿಮ ದರ್ಶನ: 
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಸಹಿತ ನೂರಾರು ಗಣ್ಯರು ಪಾಲ್ಗೊಂಡರು.

ಅಂತಿಮ ಯಾತ್ರೆ: 

ಗೋಪಾಲನಾಥ್ ಅವರ ಹಿರಿಯ ಮಗ ಕುವೈಟ್‌ನಿಂದ ಆಗಮಿಸುವುದು ವಿಳಂಬವಾಗಿದ್ದರಿಂದ ಅಂತ್ಯಸಂಸ್ಕಾರವನ್ನು ಸೋಮವಾರಕ್ಕೆ ನಿಗದಿಗೊಳಿಸಲಾಗಿತ್ತು. ಸೋಮವಾರ ಮುಂಜಾನೆ ವೇಳೆಗೆ ಗುರುಪ್ರಸಾದ್ ಮಂಗಳೂರಿಗೆ ಬಂದಿಳಿದರು. ಪೂರ್ವ ನಿರ್ಧಾರದಂತೆ ಪದವಿನಂಗಡಿಯ ಗೋಪಾಲನಾಥ್ ಮನೆಯಿಂದ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿಟ್ಟು ನಗರದ ಮಿನಿ ಪುರಭವನದ ವರೆಗೆ ಅಂತಿಮ ಯಾತ್ರೆ ನಡೆಯಿತು. ಕುಟುಂಬಸ್ಥರು, ಅಭಿಮಾನಿ ಬಳಗವರು ಹಾಜರಿದ್ದರು. ಬಳಿಕ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. 

ಜನಪ್ರತಿನಿಧಿಗಳು ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಗೋಪಾಲನಾಥ್ ಅವರ ಶಿಷ್ಯರು, ಅಭಿಮಾನಿಗಳು ದುಃಖತಪ್ತ ಭಾವದೊಂದಿಗೆ ಅಂತಿಮ ದರ್ಶನ ಪಡೆದು ಭಾವುಕರಾದರು. ಮಧ್ಯಾಹ್ನ ಬಳಿಕ ಸಜಿಪಕ್ಕೆ ಅಂತಿಮ ಯಾತ್ರೆ ನಡೆದು ಅಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.

ಸಂಗೀತ ನಮನ: 


ಸಾರ್ವಜನಿಕ ದರ್ಶನ ಸಂದರ್ಭ ಮಿನಿ ಪುರಭವನದ ವೇದಿಕೆಯಲ್ಲಿ ಗೋಪಾಲನಾಥ್ ಶಿಷ್ಯ ಬಳಗದವರು ‘ಸ್ವರಾಂಜಲಿ’ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಅಗಲಿದ ಹಿರಿಯ ಚೇತನಕ್ಕೆ ಸಂಗೀತದಿಂದಲೇ ಅಂತಿಮ ನಮನ ಸಲ್ಲಿಸಿದರು. ಸ್ಯಾಕ್ಸೋಫೋನ್ ಮಾಂತ್ರಿಕಗೆ ಸ್ಯಾಕ್ಸೋಫೋನ್ ನುಡಿಸುವ ಮೂಲಕವೇ ವಿದಾಯ ಶೃತಿ ಹೊರಡಿಸಿದ್ದು ವಿಶೇಷವಾಗಿತ್ತು.ಗೋಪಾಲನಾಥ್ ಸಂಗೀತ ತಂಡದ ಹಿರಿಯ ಕಲಾವಿದರಾದ ನರಸಿಂಹ ವಡವಟ್ಟಿ, ರಾಜೇಂದ್ರ ನಾಕೋಡ್ ಕೊನೆವರೆಗೂ ಅಲ್ಲಿದ್ದು ಅಗಲಿದ ಗುರುವಿಗೆ ಕಂಬನಿ ಮಿಡಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಯು.ಟಿ. ಖಾದರ್, ಐವನ್ ಡಿಸೋಜ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಕಾರ್ಪೊರೇಟರ್‌ಗಳು, ವಿವಿಧ ಪಕ್ಷಗಳ ಮುಖಂಡರು, ಜಿಲ್ಲಾಧಿಕಾರಿ ಸಿಂಧು ರೂಪೇಶ್, ಪೊಲೀಸ್ ಕಮಿಷನರ್ ಹರ್ಷ ಮತ್ತಿತರರು ಅಂತಿಮ ದರ್ಶನ ಪಡೆದರು.

ಗೋಪಾಲನಾಥ್ ಶಾಶ್ವತ ನೆನಪಿಗೆ ಯೋಜನೆ
ಅಗಲಿದ ಮೇರು ಕಲಾವಿದ ಕದ್ರಿ ಗೋಪಾಲನಾಥ್ ನೆನಪು ಜನಮಾನಸದಲ್ಲಿ ಶಾಶ್ವತವಾಗಿಡುವ ನಿಟ್ಟಿನಲ್ಲಿ ಶೀಘ್ರವೇ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅಂತಿಮ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಿ ಯಾವುದಾದರೊಂದು ರೀತಿಯಲ್ಲಿ ಗೋಪಾಲನಾಥ್ ಅವರ ನೆನಪನ್ನು ಶಾಶ್ವತವಾಗಿಡುವ ಕೆಲಸ ಮಾಡಲಿದ್ದೇವೆ ಎಂದರು.

ಗೋಪಾಲನಾಥ್ ಹೆಸರು ಶಾಶ್ವತವಾಗಿಡಲು ಸಮಾಜಸೇವೆ

ಅಗಲಿದ ಮೇರು ಕಲಾವಿದ ಡಾ.ಕದ್ರಿ ಗೋಪಾಲನಾಥ್ ಹೆಸರನ್ನು ಸಮಾಜಮುಖಿ ಕೆಲಸಗಳ ಮೂಲಕ ಶಾಶ್ವತವಾಗಿರಿಸಲು ಅವರ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಗೋಪಾಲನಾಥ್ ಹೆಸರಲ್ಲಿ ವೃದ್ಧಾಶ್ರಮ ಆರಂಭ, ಪ್ರತಿವರ್ಷ ಕದ್ರಿ ಸಂಗೀತ ಸಮ್ಮೇಳನ, ಕದ್ರಿ ಸಂಗೀತ ಪುರಸ್ಕಾರ, ಕದ್ರಿಯಲ್ಲಿ ಶಾಶ್ವತ ಸ್ಮಾರಕ ಇತ್ಯಾದಿ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಸೋಮವಾರ ಮಂಗಳೂರಿನಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ವೇಳೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಗೋಪಾಲನಾಥ್ ಪುತ್ರ, ಹೆಸರಾಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ತಂದೆಯವರು ಯಾವತ್ತೂ ದುಡ್ಡನ್ನು ತನಗಾಗಿ ಕೂಡಿಟ್ಟವರಲ್ಲ. ನಿರಂತರ ದಾನ ಧರ್ಮಗಳಲ್ಲಿ ತೊಡಗಿಕೊಂಡಿದ್ದರು. ಅವರ ಸಮಾಜಸೇವೆ ಮುಂದುವರಿಸುವ ಉದ್ದೇಶದಿಂದ ಹುಟ್ಟೂರು ಸಜಿಪದಲ್ಲೇ ವೃದ್ಧಾಶ್ರಮವೊಂದನ್ನು ಆರಂಭಿಸಲಿದ್ದೇವೆ. ಇನ್ನು ಐದಾರು ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿದರು.

ಸಂಗೀತ ಸಮ್ಮೇಳನ, ಪ್ರಶಸ್ತಿ: 
ಪ್ರತಿವರ್ಷ ಕದ್ರಿ ಸಂಗೀತ ಸಮ್ಮೇಳನ ಆಯೋಜಿಸಲು ಉದ್ದೇಶಿಸಿದ್ದು, ಈ ಮೂಲಕ ಗೋಪಾಲನಾಥ್ ಅವರ ಸಂಗೀತ ಶಿಕ್ಷಣ ಸೇವೆ ಈ ಮೂಲಕ ಮುಂದುವರಿಯಲಿದೆ. ಇದು ಯುವ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಜತೆಗೆ ರಾಷ್ಟ್ರ ಮಟ್ಟದ ಕಲಾವಿದರಿಂದಲೂ ಸಮ್ಮೇಳನದಲ್ಲಿ ಸಂಗೀತ ಕಛೇರಿ ನಡೆಸುವ ಆಸೆಯಿದೆ ಎಂದು ಹೇಳಿದರು.

ಸಂಗೀತ ಪುರಸ್ಕಾರ: ಇದರೊಂದಿಗೆ ರಾಷ್ಟ್ರ ಮಟ್ಟದ ‘ಕದ್ರಿ ಸಂಗೀತ ಪುರಸ್ಕಾರ’ವನ್ನು ಸಂಗೀತ ಕಲಾಕ್ಷೇತ್ರದಲ್ಲಿ ಮೇರು ಸಾಧನೆಗೈದವರಿಗೆ ನೀಡಲಿದ್ದೇವೆ. ಸರ್ಕಾರದೊಂದಿಗೆ ಚರ್ಚಿಸಿ ಕದ್ರಿಯಲ್ಲಿ ಗೋಪಾಲನಾಥ್ ಅವರ ಸ್ಮಾರಕ ನಿರ್ಮಾಣ ಮಾಡುವ ಕಾರ್ಯವೂ ನಡೆಯಲಿದೆ ಎಂದು ಮಣಿಕಾಂತ್ ಕದ್ರಿ ಹೇಳಿದರು.

‘ನನ್ನ ಹೆಸರು ಹೇಳಿ ಮುಂದೆ ಬರಬೇಡ. ನಿನ್ನ ಸ್ವಂತ ಸಾಧನೆಯಿಂದ ಗುರುತಿಸಿಕೋ’ ಇದು ಕದ್ರಿ ಗೋಪಾಲನಾಥ್ ತಮ್ಮ ಪುತ್ರನಿಗೆ ಹೇಳಿದ ಹಿತವಚನ. ಇದನ್ನು ಮಣಿಕಾಂತ್ ಕದ್ರಿ ನೆನಪಿಸಿಕೊಂಡು ಭಾವುಕರಾದರು.

ನಾನು ಸಂಗೀತ ನಿರ್ದೇಶಕನಾಗುತ್ತೇನೆ ಎಂದಾಗ ಹೀಗೇ ಸುಮ್ಮನೆ ಆರಂಭಿಸಬೇಡ. ಅದಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಕಲಿತುಕೊಂಡು ಬಾ ಎಂದರು. ನಿನ್ನದೇ ರೀತಿಯಲ್ಲಿ ಸಾಧನೆ ಮಾಡು ಎಂದರು. ಇದೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು. ತಂದೆ ಸ್ಯಾಕ್ಸೋಫೋನ್‌ನಲ್ಲಿ ಸಾಧನೆ ಮಾಡಿದ್ದರೆ, ನಾವು ಮೂರೂ ಮಕ್ಕಳು ಬೇರೆ ಬೇರೆ ಸಂಗೀತ ಪರಿಕರಗಳಲ್ಲಿ ತೊಡಗಿಕೊಂಡಿದ್ದೆವು. ಅಮ್ಮ ಸರೋಜಿನಿ ವೀಣೆಯನ್ನು ಕಲಿತು ನುಡಿಸುತ್ತಾರೆ ಎಂದು ಹೇಳಿದರು.

ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಲ್ಲೇ!
ದೇಶ ವಿದೇಶಗಳಲ್ಲಿ ಸ್ಯಾಕ್ಸೋಫೋನ್‌ನ ನಾದ ತರಂಗಗಳನ್ನು ಪಸರಿಸಿ ಕರಾವಳಿಯ ಕೀರ್ತಿ ಪತಾಕೆ ಹಾರಿಸಿದ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರು ತಮ್ಮ ಕೊನೆಯ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟದ್ದು ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲೇ, ಅದೂ ಮಂಗಳೂರಿನಲ್ಲಿ. ಈ ವರ್ಷ ಜೂ.23ರಂದು ಬೆಂಗಳೂರಿನಲ್ಲಿ ನಡೆಸಿಕೊಟ್ಟ ಸಂಗೀತ ಕಛೇರಿ ಕದ್ರಿ ಗೋಪಾಲನಾಥ್ ಅವರ ಜೀವನದ ಕಟ್ಟ ಕಡೆಯ ಕಛೇರಿ. 

ಆದರೆ ಅದು ಖಾಸಗಿ ಸಮಾರಂಭವಾಗಿತ್ತು. ಅದರ ಹಿಂದಿನ ದಿನ ಜೂ.22ರಂದು ಮಂಗಳೂರಿನ ಪುರಭವನದಲ್ಲಿ ಕಛೇರಿ ನಡೆಸಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಸಂಗೀತ ಕಛೇರಿಯಾಗಿದೆ ಎಂದು ಗೋಪಾಲನಾಥ್ ಸಂಗೀತ ತಂಡದ ಹಿರಿಯ ಕಲಾವಿದ ರಾಜೇಂದ್ರ ನಾಕೋಡ್ ಸ್ಮರಿಸಿದರು.