ಕಾರಿನ ಬಂಪರ್‌ಗೆ ಸಿಲುಕಿ 50 ಕಿಮೀ ಸಂಚರಿಸಿದ ಬೀದಿ ನಾಯಿ
ಕಾರಿಗೆ ಅಡ್ಡಬಂದು ಅಪಘಾತಕ್ಕೀಡಾಗಿ ಕಾರಿನ ಬಂಪರಿನೊಳಗೆ ಸಿಲುಕಿ ಹಾಕಿಕೊಂಡ ನಾಯಿಯೊಂದು ಕಾರಿನ ಬಂಪರ್‌ನಲ್ಲೇ ಬರೋಬ್ಬರಿ 50 ಕಿಲೋ ಮೀಟರ್ ಸಂಚರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪದಲ್ಲಿ ನಡೆದಿದೆ.
ಬಳ್ಪ/ಪುತ್ತೂರು: ಕಾರಿಗೆ ಅಡ್ಡಬಂದು ಅಪಘಾತಕ್ಕೀಡಾಗಿ ಕಾರಿನ ಬಂಪರಿನೊಳಗೆ ಸಿಲುಕಿ ಹಾಕಿಕೊಂಡ ನಾಯಿಯೊಂದು ಕಾರಿನ ಬಂಪರ್‌ನಲ್ಲೇ ಬರೋಬ್ಬರಿ 50 ಕಿಲೋ ಮೀಟರ್ ಸಂಚರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪದಲ್ಲಿ ನಡೆದಿದೆ. ಕಾರಿನ ಬಂಪರ್‌ನೊಳಗೆ ಸಿಲುಕಿ 50 ಕಿಲೋ ಮೀಟರ್ ಸಂಚರಿಸಿದರು ನಾಯಿಗೆ ಏನು ಆಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಪುಟ್ಟ ಮರಿಗಳಿದ್ದ ಈ ನಾಯಿಯನ್ನು ಮರಳಿ ಅದರ ಮರಿಗಳತ್ತ ತಂದು ಬಿಡಲಾಗಿದೆ.
ಘಟನೆ ಹಿನ್ನೆಲೆ
ಫೆ.2 ರಂದು ಪುತ್ತೂರಿನ ಕಬಕದ (Kabaka) ಸುಬ್ರಹ್ಮಣ್ಯ ಭಟ್ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಮರಳಿ ಪುತ್ತೂರಿಗೆ ವಾಪಾಸಾಗುತ್ತಿದ್ದಾಗ ಅವರ ಕಾರಿಗೆ ಬಳ್ಪದಲ್ಲಿ ಶ್ವಾನವೊಂದು ಅಡ್ಡ ಬಂದು ಅಪಘಾತವಾಗಿತ್ತು. ಅಪಘಾತದ ಬಳಿಕ ಕಾರು ನಿಲ್ಲಿಸಿದ ಸುಬ್ರಹ್ಮಣ್ಯ ಅವರು ನಾಯಿಗಾಗಿ ಸುತ್ತಲೆಲ್ಲಾ ಹುಡುಕಾಡಿದ್ದಾರೆ. ಆದರೆ ಆ ವೇಳೆ ಅವರಿಗೆ ಶ್ವಾನ ಕಾಣಿಸಿಲ್ಲ. ಎಲ್ಲೋ ಓಡಿ ಹೋಗಿರಬಹುದು ಎಂದು ಭಾವಿಸಿದ ಅವರು ಕಾರು ಚಲಾಯಿಸಿ ಮತ್ತೆ ಪ್ರಯಾಣ ಬೆಳೆಸಿದ್ದಾರೆ. ಮತ್ತೆ ಮನೆಗೆ ಹೋಗಿ ಗಮನಿಸಿದಾಗ ಬಂಪರ್‌ನ (Bumper) ಗ್ರಿಲ್ ತುಂಡಾಗಿರುವುದು ಕಾಣಿಸಿದೆ. ಮತ್ತೆ ಸರಿಯಾಗಿ ಪರಿಶೀಲಿಸಿದಾಗ ಬಾನೆಟ್ (Banet)ಒಳಗಡೆ ನಾಯಿ ಇರುವುದು ಕಂಡು ಬಂದು ಅದನ್ನು ಅಲ್ಲಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ತೆಗೆಯಲಾಗದೇ ಇದ್ದ ಕಾರಣ ಗ್ಯಾರೇಜ್‌ಗೆ ತೆಗೆದುಕೊಂಡು ಬಂದಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬಂಪರ್ ಬಿಚ್ಚಿ ನಾಯಿಯನ್ನು ಹೊರೆತೆಗೆದಿದ್ದಾರೆ. ಅಲ್ಲಿಂದ ಹೊರ ಬಂದ ನಾಯಿ ಮೈ ಕೊಡವಿಕೊಂಡು ಹೊರಟು ಹೋಗಿದೆ.
ಅಬ್ಬಾ.. ಇದು 20 ಕೋಟಿಯ 110 ಕೆಜಿ ತೂಕದ ದೈತ್ಯ ಶ್ವಾನ!
ಮತ್ತೆ ಮರಿಗಳೊಂದಿಗೆ ಶ್ವಾನದ ಪುನರ್ಮಿಲನ
ಹೀಗೆ ಕಾರಿಗೆ ಸಿಲುಕಿ ಬಳ್ಪದಿಂದ ಪುತ್ತೂರಿಗೆ (Puttur) ಹೋದ ನಾಯಿ ಬಳ್ಪ ಬೀದಿಯಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿ. ಇದು ಇತ್ತಿಚೆಗೆ ಮರಿ ಇಟ್ಟಿತ್ತು. ಅಲ್ಲದೇ ಬಳ್ಪ ಪೇಟೆಯ ವಿವಿಧೆಡೆ ಸೇರಿದಂತೆ ಬಳ್ಪದ ಅರಣ್ಯ ಇಲಾಖೆ ಕ್ವಾಟ್ರರ್ಸ್‌ಗೆ ಇದು ಪದೇ ಪದೇ ಭೇಟಿ ನೀಡುತ್ತಿತ್ತು. ಕ್ವಾಟ್ರರ್ಸ್ ಅಲ್ಲಿದ್ದ ಅರಣ್ಯ ಅಧಿಕಾರಿ ಸಂತೋಷ್ ರೈ ಎಂಬುವವರು ಈ ಶ್ವಾನಕ್ಕೆ ಅಳಿದುಳಿದ ಆಹಾರವನ್ನು ಹಾಕುತ್ತಿದ್ದರು. ಅಲ್ಲದೇ ಇವರ ಪುಟ್ಟ ಮಗಳು ಶಾನ್ವಿ ಕೂಡ ಇದರೊಂದಿಗೆ ಒಡನಾಟ ಹೊಂದಿದ್ದು, ಬಂದಾಗಲೆಲ್ಲಾ ಆಹಾರ ನೀಡುತ್ತಿದ್ದಳು. ಇಂತಹ ಶ್ವಾನ ಕಾರಿನಲ್ಲಿ ಸಿಲುಕಿ ಪುತ್ತೂರಿಗೆ ಹೋದ ವಿಚಾರ ಸಾಮಾಜಿಕ ಜಾಲತಾಣಗಳು (Social Media) ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ವಿಚಾರವನ್ನು ಅರಣ್ಯಾಧಿಕಾರಿ ಸಂತೋಷ್ ರೈ (Santhosh Rai) ತಮ್ಮ ಮಗಳಿಗೂ ಹೇಳಿದ್ದರು.
ಈ ವೇಳೆ ಪುತ್ರಿ ನಾಯಿಯನ್ನು ವಾಪಸ್ ತರುವಂತೆ ತನ್ನ ಅಪ್ಪನಲ್ಲಿ ದುಂಬಾಲು ಬಿದ್ದಿದ್ದಾಳೆ. ಮಗಳ ಮಾತಿಗೆ ಕಟುಬಿದ್ದ ಅಪ್ಪ, ನಾಯಿಯ ವಿಚಾರ ಪ್ರಕಟಿಸಿದ ಫೇಸ್ಬುಕ್ ಪೇಜ್‌ಗೆ ಕಾಮೆಂಟ್ ಮಾಡಿ ಈ ನಾಯಿ ಕಂಡರೆ ಹೇಳುವಂತೆ ತಮ್ಮ ದೂರವಾಣಿ ನೀಡಿದ್ದರು. ಅದರಂತೆ ಯಾರೋ ಈ ನಾಯಿ ಬಗ್ಗೆ ಅವರಿಗೆ ತಿಳಿಸಿದ್ದು, ಕೂಡಲೇ ತಡ ಮಾಡದ ಅವರು ತಮ್ಮ ಕಾರಿನಲ್ಲಿ ತಮ್ಮ ಜೊತೆ ಕೆಲಸ ಮಾಡುವ ರವಿಪ್ರಕಾಶ್ (Ravi Prakash) ಹಾಗೂ ಗಣೇಶ್ ಅವರೊಂದಿಗೆ ಪುತ್ತೂರಿಗೆ ತೆರಳಿದ್ದಾರೆ. ಈ ವೇಳೆ ಹುಡುಕಾಡಿದಾಗ ನಾಯಿ ಪುತ್ತೂರಿನ ಬೊಳುವಾರು (Boluvaru) ಬಳಿಯ ನ್ಯೂ ಹರಿಪ್ರಸಾದ್ ಹೊಟೇಲ್ ಬಳಿ ಇರುವುದು ಕಾಣಿಸಿತ್ತು. ಅದರ ಹತ್ತಿರ ಹೋಗಿ ಮಾತನಾಡಿಸಿದಾಗ ಗುರುತು ಪತ್ತೆ ಮಾಡಿದ ನಾಯಿ ಇವರ ಬಳಿ ಬಂದಿದೆ. ಕೂಡಲೇ ನಾಯಿಯ ಕುತ್ತಿಗೆಗೆ ಸಂಕೋಲೆ ಹಾಕಿ ಕಾರಿನಲ್ಲಿ ಕೂರಿಸಿಕೊಂಡು ಇವರು ಬಳ್ಪಗೆ ಕರೆ ತಂದಿದ್ದಾರೆ.
ಸಾಕಿದ ಶ್ವಾನವನ್ನು 'ನಾಯಿ' ಎಂದಿದ್ದಕ್ಕೆ 62 ವರ್ಷದ ವ್ಯಕ್ತಿ ಕೊಲೆ..!
ಇತ್ತ ತಾಯಿ ಕಾಣದೇ ಕಂಗೆಟ್ಟಿದ್ದ ಅದರ ಮರಿಗಳು ತಾಯಿಯನ್ನು ಕಂಡೊಡನೆ ಖುಷಿಯಾಗಿವೆ. ಇತ್ತ ಸಂತೋಷ್ ರೈ ಅವರ ಪುತ್ರಿ ಕೂಡ ನಾಯಿಯನ್ನು ಕಂಡು ಖುಷಿ ಆಗಿದ್ದಾಳೆ. ಒಟ್ಟಿನಲ್ಲಿ ಪುಟಾಣಿಯೊಬ್ಬಳ ಒತ್ತಾಯದಿಂದ ಬೀದಿ ನಾಯಿಯೊಂದು ಮತ್ತೆ ತನ್ನ ಮರಿಗಳನ್ನು ಸೇರುವಂತಾಗಿವೆ. ಅನಾಥವಾದ ಮರಿಗಳು ಮತ್ತೆ ತಾಯಿಯನ್ನು ಕಂಡಿವೆ.