ಶನಿವಾರ ಕೇವಲ 2 ಗಂಟೆ ಸುರಿದ ಮುಸಲಧಾರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತತ್ತರಿಸಿದ್ದು, ಮಂಗಳೂರು ನಗರದ ರಸ್ತೆಗಳಂತೂ ಅಕ್ಷರಶಃ ಮುಳುಗಿಹೋಗಿದ್ದವು.

 ಮಂಗಳೂರು : ಶನಿವಾರ ಕೇವಲ 2 ಗಂಟೆ ಸುರಿದ ಮುಸಲಧಾರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತತ್ತರಿಸಿದ್ದು, ಮಂಗಳೂರು ನಗರದ ರಸ್ತೆಗಳಂತೂ ಅಕ್ಷರಶಃ ಮುಳುಗಿಹೋಗಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಅವೈಜ್ಞಾನಿಕ ಕಾಮಗಾರಿಗಳ ಅವಾಂತರದಿಂದ ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದಿದ್ದು, ಅನೇಕ ಕಡೆಗಳಲ್ಲಿ ವಾಹನ ಸಂಚಾರವೇ ಬಂದ್‌ ಆಗಿತ್ತು. ತಗ್ಗು ಪ್ರದೇಶಗಳಲ್ಲಿನ ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿದ್ದವು. ಜನರು ಇನ್ನಿಲ್ಲದಷ್ಟು ನರಕಯಾತನೆ ಅನುಭವಿಸಿದರು. ಜನರನ್ನು ಬೋಟ್‌ಗಳಲ್ಲಿ ಸ್ಥಳಾಂತರಿಸಲಾಯಿತು.

ಮುಳುಗಿದ ಕುಡ್ಲ:

ಶನಿವಾರ ಮಧ್ಯಾಹ್ನ 3ರ ವೇಳೆಗೆ ಕರಿಮೋಡಗಳು ದಟ್ಟೈಸಿ ಏಕಾಏಕಿ ಮಳೆ ಶುರುವಾಯಿತು. 5 ಗಂಟೆವರೆಗೆ ಅರೆಕ್ಷಣವೂ ಬಿಡದಂತೆ ಕಂಡು ಕೇಳರಿಯದ ಬಿರುಮಳೆ ಸುರಿಯಿತು. ಮಳೆ ಆರಂಭವಾಗಿ ಒಂದೇ ಗಂಟೆಯೊಳಗೆ ಮಂಗಳೂರಿನ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು.

ಪಂಪ್‌ವೆಲ್‌ ಸಂಚಾರ ಬಂದ್‌:

ಪಂಪ್‌ವೆಲ್‌ ರಸ್ತೆಯಲ್ಲಿ ಮೂರ್ನಾಲ್ಕು ಅಡಿ ನೀರು ಹರಿದು ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆ್ಯಂಬುಲೆನ್ಸ್‌ವೊಂದು ಸಿಲುಕಿಕೊಂಡಿತ್ತು. ಪಡೀಲ್‌ ಅಂಡರ್‌ಪಾಸ್‌ನಲ್ಲೂ ವಾಹನಗಳು ಸಂಚರಿಸದೆ ನಿಂತವು. ನಗರದ ಕಾರ್‌ ಸ್ಟ್ರೀಟ್‌ ಪ್ರದೇಶವಂತೂ ಸಾಗರದಂತಾಗಿತ್ತು.

ಮಲೆನಾಡು, ಕರಾವಳಿಯಲ್ಲೂ

ಮುಂದುವರಿದ ಮಳೆ ಅಬ್ಬರ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮಳೆ ಇಳಿಮುಖವಾಗಿದೆ. ಶಿರಸಿ- ಕುಮಟಾ ರಸ್ತೆಯ ಅಳಕೋಡ ಬಳಿ ಸ್ವಲ್ಪ ಭೂಕುಸಿತವಾಗಿದೆ. ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ ಆಯಿತು.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿರುವ ಕವಿಕಲ್‌ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಧರೆ ಕುಸಿತ ಉಂಟಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿಲ್ಲ.

ಇನ್ನು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ ಸೇರಿದಂತೆ ಹಲವೆಡೆ ಮಳೆ ಬಿರುಸುಗೊಂಡಿದೆ. ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 4 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿದೆ.ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ 3 ದಿನದಿಂದ ಸುರಿದ ಮಳೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ ಬಾಲಕರ ಹಾಸ್ಟೆಲ್ ಆವರಣದಲ್ಲಿ ಜಲಾವೃತ್ತವಾಗಿದೆ.

ಬೋಟ್‌ಗಳಲ್ಲಿ ಸಾಗಣೆ:

ಜಲಾವೃತಗೊಂಡ ಮನೆಯವರು, ರಸ್ತೆಗಳಲ್ಲಿ ಸಾಗಲಾರದೆ ಸಿಲುಕಿದ್ದವರನ್ನು ಜೀವರಕ್ಷಕ ಬೋಟ್‌ಗಳಲ್ಲಿ ಸುರಕ್ಷಿತ ತಾಣಕ್ಕೆ ಕರೆದೊಯ್ಯಲಾಯಿತು. ಅತ್ತಾವರ ಮೆಸ್ಕಾಂ ಕಚೇರಿ ಬಳಿ ರಾಜಕಾಲುವೆಯ ಭಾರೀ ತಡೆಗೋಡೆ ಕುಸಿದು ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ಮಂಗಳೂರಿನ ರೈಲ್ವೆ ನಿಲ್ದಾಣದ ಆವರಣದೊಳಗೆ ಮಳೆ ನೀರು ನಿಂತು ಯಾತ್ರಿಕರಿಗೆ ಸಮಸ್ಯೆಯಾಯಿತು.

ಡೀಸಿ ಎಚ್ಚರಿಕೆ:

ದಕ್ಷಿಣ ಕನ್ನಡದಲ್ಲಿ ಅಪಾಯದಂಚಿನಲ್ಲಿರುವ ಮನೆಗಳ ಸದಸ್ಯರನ್ನು ಕಾಳಜಿ ಕೇಂದ್ರ/ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.