ಕರಾವಳಿಯಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ರೆಡ್‌ ಅಲರ್ಟ್ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಮಂಗಳೂರು/ಉಡುಪಿ (ಜೂ.13): ಕರಾವಳಿಯಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ರೆಡ್‌ ಅಲರ್ಟ್ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಲಾಗಿದೆ. ಭಾರೀ ಮಳೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಶಾಲೆಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ರಜೆ ಘೋಷಿಸಿದ್ದಾರೆ. ಇಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಇರುತ್ತದೆ.

ಗುರುವಾರ ಭಾರೀ ಮಳೆಯಾಗುವ ರೆಡ್‌ ಅಲರ್ಟ್‌ ಘೋಷಣೆಯ ಕಾರಣ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಧಾರಾಕಾರ ಮಳೆಯಾಗಿಲ್ಲ. ಜಿಲ್ಲಾದ್ಯಂತ ಬೆಳಗ್ಗಿನಿಂದ ಉತ್ತಮ ಮಳೆ ಸುರಿದಿದೆ. ದಿನವಿಡಿ ಆಗಾಗ ಮಳೆ ಸುರಿಯುತ್ತಲೇ ಇತ್ತು. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಒಂದು ಮನೆಗೆ ಸಂಪೂರ್ಣ ಹಾನಿ ಸಂಭವಿಸಿದ್ದರೆ, 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 58 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಈ ಅವಧಿಯಲ್ಲಿ ಸರಾಸರಿ 41.4 ಮಿ.ಮೀ ಮಳೆ ದಾಖಲಾಗಿದೆ.

ಭಾರೀ ಮಳೆ ಗಾಳಿಗೆ ಮೂಲ್ಕಿ ತಾಲೂಕು ಬಳ್ಳುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಗ್ರಾಮದ ವನಿತಾ ಭಟ್ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ರಘು ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ತೀವ್ರ ಹಾನಿಯಾಗಿದೆ. ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ ಹಳೆಯಂಗಡಿ, ಪಡುಪಣಂಬೂರು, ಅತಿಕಾರಿ ಬೆಟ್ಟು,ಬಳ್ಳುಂಜೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ನಂದಿತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಮುಲ್ಕಿ ತಹಸೀಲ್ದಾರ್ ಸೂಚನೆ ನೀಡಿದ್ದಾರೆ.

ಉಡುಪಿಯಲ್ಲಿ ಧಾರಾಕಾರ ಮಳೆ: ಉಡುಪಿ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಬುಧವಾರ ರಾತ್ರಿ ಎಡೆಬಿಡದೇ ಮಳೆಯಾಗಿತ್ತು. ಗುರುವಾರ ಹಗಲಿನಲ್ಲಿಯೂ ಒಂದೇ ಸಮನೇ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 96.50 ಮಿ.ಮೀ.ಗಳಷ್ಟು ಮಳೆಯಾಗಿದೆ. ಈ ಮಳೆಗೆ 2 ಮನೆಗಳು ಬಹುತೇಕ ಹಾನಿಗೊಂಡಿವೆ, ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಹವಾಮಾನ ಇಲಾಖೆ ಕರಾವಳಿಯ 3 ಜಿಲ್ಲೆಗಳಲ್ಲಿ ಜುಲೈ 16ರ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೊತೆಗೆ ಗಂಟೆಗೆ 30- 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದೆ. ಆದ್ದರಿಂದ ಜಿಲ್ಲಾಡಳಿತ ಶುಕ್ರವಾರವೂ ರೆಡ್ ಅಲರ್ಟ್‌ ಘೋಷಿಸಿದೆ.

ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಉದಯ ಜೋಗಿ ಅವರ ಮನೆಯ ಮೇಲೆ ಮರಬಿದ್ದು ಸುಮಾರು 1,00,000 ರು.ಗೂ ಅಧಿಕ ಹಾನಿ ಸಂಭವಿಸಿದೆ. ಈ ಸಂದರ್ಭದಲ್ಲಿ ಅವರ ಪತ್ನ ನಾಗರತ್ನ ಜೋಗಿ ಅವರ ತಲೆಗೆ ಹಂಚು ಬಿದ್ದು ಅವರಿಗೆ ತೀವ್ರತರವಾದ ಗಾಯಗಳಾಗಿವೆ. ಕಾಪು ತಾಲೂಕಿನ ಮೂಳೂರು ಗ್ರಾಮದ ಶೇಖರ ಮುಖಾರಿ ಅವರ ಮನೆಯ ಗೋಡೆಗಳು ಬಹುತೇಕ ಕುಸಿದು ಅವರಿಗೆ 1,50,000 ರು.ಗಳಷ್ಟು ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಅಶೋಕ್ ರಾವ್ ಅವರ ಮನೆಗೆ 10,000 ರು.ಗಳಷ್ಟು ಹಾನಿಯಾಗಿದೆ. ತಾಲೂಕುವಾರು ಕಾರ್ಕಳ 79.30, ಕುಂದಾಪುರ 100.90, ಉಡುಪಿ 82.50, ಬೈಂದೂರು 115.20, ಬ್ರಹ್ಮಾವರ 111.20, ಕಾಪು 83.30, ಹೆಬ್ರಿ 95 ಮಿ.ಮೀ. ಮಳೆ ಆಗಿರುತ್ತದೆ. ಗುರುವಾರ ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್ ಘೋಷಿಸಿದ್ದ ಜಿಲ್ಲಾಧಿಕಾರಿ ಮುಂಜಾಗರೂಕ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಕಾಲಿಕ ರಜೆ ಘೋಷಿಸಿದ್ದರು.