Asianet Suvarna News Asianet Suvarna News

ಬೇಕಲ ಆಯ್ತು, ಈಗ ಉದುಮ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ!

ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ವಿರೋಧಿಸಿ ಗಡಿನಾಡು ಕಾಸರಗೋಡಿನ ಬೇಕಲ ಶಾಲೆಯ ಕನ್ನಡಿಗ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ ಪ್ರತಿಭಟನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಉದುಮದಲ್ಲಿ ಶುಕ್ರವಾರ ಮತ್ತೊಬ್ಬ ಮಲಯಾಳಿ ಭಾಷಿಕ ಶಿಕ್ಷಕರು ಕರ್ತವ್ಯಕ್ಕೆ ನೇಮಕಗೊಂಡಿದ್ದು, ಅಲ್ಲಿಯೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

Malayali teacher appointed in uduma school in Kasaragod
Author
Bangalore, First Published Oct 12, 2019, 11:01 AM IST

ಮಂಗಳೂರು(ಅ.12): ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ವಿರೋಧಿಸಿ ಗಡಿನಾಡು ಕಾಸರಗೋಡಿನ ಬೇಕಲ ಶಾಲೆಯ ಕನ್ನಡಿಗ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ ಪ್ರತಿಭಟನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಇದರ ನಡುವೆಯೇ ಇನ್ನೊಂದು ಶಾಲೆ ಉದುಮದಲ್ಲಿ ಶುಕ್ರವಾರ ಮತ್ತೊಬ್ಬ ಮಲಯಾಳಿ ಭಾಷಿಕ ಶಿಕ್ಷಕರು ಕರ್ತವ್ಯಕ್ಕೆ ನೇಮಕಗೊಂಡಿದ್ದು, ಅಲ್ಲಿಯೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರೊಂದಿಗೆ ಕೇರಳ ಸರ್ಕಾರದಿಂದ ಕನ್ನಡಿಗರ ಮೇಲೆ ಮಲಯಾಳಂ ಭಾಷೆಯ ಸವಾರಿ ಎಗ್ಗಿಲ್ಲದೆ ನಡೆಯುವಂತಾಗಿದೆ.

ಮಂಗಳೂರು: ಸುಬ್ರಮಣ್ಯದಲ್ಲಿ ನಿಖಿಲ್ ರಹಸ್ಯ ತ್ರಿಕಾಲ ಪೂಜೆ..!

ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಇದು ಕಾಸರಗೋಡಿನ ಕನ್ನಡ ಸಂಘಟನೆಗಳಿಗೆ ತುಸು ನೆಮ್ಮದಿ ತಂದಿದೆ.

ಉದುಮ ಶಾಲೆಗೂ ಮಲಯಾಳಿ ಶಿಕ್ಷಕ:

ಹೊಸದುರ್ಗ ತಾಲೂಕಿನ ಉದುಮ ಹೈಯರ್‌ ಸೆಕೆಂಡರಿ ಶಾಲೆಗೆ ಶುಕ್ರವಾರ ಮಲಯಾಳಿ ಭಾಷಿಕ ಶಿಕ್ಷಕರ ನೇಮಕವಾಗಿದೆ. ಭೌತಿಕ ವಿಜ್ಞಾನ ಪಾಠಕ್ಕೆ ಕೇರಳ ಪಾಲಕ್ಕಾಡ್‌ನ ಮಾಣಿಕನ್‌ ಎಂಬ ಅಂಧ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ವರ್ಗಾವಣೆಗೆ ಆಗ್ರಹ:

ಈ ಶಿಕ್ಷಕರಿಗೆ ಕಣ್ಣು ಕಾಣುವುದಿಲ್ಲ, ಕನ್ನಡವೂ ಬರುವುದಿಲ್ಲ. ಹಾಗಾಗಿ ಅವರು ಪಾಠ ಮಾಡುವುದು ಬೇಡ, ಅವರನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಆಗ್ರಹಿಸಿ ಉದುಮ ಶಾಲಾ ಕನ್ನಡಿಗ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬಳಿಕ ಪೋಷಕರು ಹಾಗೂ ಕನ್ನಡ ಸಂಘಟನೆಗಳು ಶಾಲಾ ಮುಖ್ಯಗುರುಗಳಿಗೆ ಮನವಿ ಸಲ್ಲಿಸಿದ್ದಾರೆ.

ಶಿಕ್ಷಕರನ್ನು ಬದಲಾಯಿಸುವ ಭರವಸೆ:

ಯಾವುದೇ ಕಾರಣಕ್ಕೂ ಮಲಯಾಳಿ ಶಿಕ್ಷಕರಿಗೆ ಕನ್ನಡ ಮಾಧ್ಯಮ ತರಗತಿ ಪಾಠಕ್ಕೆ ಅವಕಾಶ ನೀಡುವುದಿಲ್ಲ. ಅವರನ್ನು ರಜೆ ಮೇಲೆ ಕಳುಹಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಆ ಬಳಿಕ ಶಾಲಾ ಮುಖ್ಯಗುರುಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಇನ್ನು ಒಂದು ವಾರದಲ್ಲಿ ಮಲಯಾಳಿ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾಯಿಸುವ ಭರವಸೆ ಪಡೆದುಕೊಂಡರು ಎನ್ನಲಾಗಿದೆ. ಶನಿವಾರ ಶಾಲೆಗೆ ರಜೆ ಇರುವುದರಿಂದ ಸೋಮವಾರ ಮತ್ತೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಬೇಕಲದಲ್ಲಿ ತರಗತಿ ಬಹಿಷ್ಕಾರ 2ನೇ ದಿನಕ್ಕೆ:

ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ವಿರೋಧಿಸಿ ಗುರುವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಬೇಕಲ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಶಾಲೆಗೆ ಭೌತ ವಿಜ್ಞಾನ ಪಾಠಕ್ಕೆ ತಿರುವನಂತಪುರಂನ ಅನ್ವಿತಾದಾಸ್‌ ಎಂಬ ಶಿಕ್ಷಕಿ ಆಗಮಿಸಿ ಗುರುವಾರ ಕರ್ತವ್ಯಕ್ಕೆ ಹಾಜರಾಗಿದ್ದರು.

ಮಂಗಳೂರು: ಈ ಮೀನಿಗೂ, ಕಾರ್ಗಿಲ್‌ ಯುದ್ಧಕ್ಕೂ ಇದೆ ಸಂಬಂಧ!

ಇದನ್ನು ವಿರೋಧಿಸಿ ಕನ್ನಡಿಗ ವಿದ್ಯಾರ್ಥಿಗಳ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಈ ಶಿಕ್ಷಕಿಯನ್ನು ಕೂಡ ಒಂದು ವಾರದಲ್ಲಿ ಬೇರೆ ಶಾಲೆಗೆ ವರ್ಗಾವಣೆಗೊಳಿಸುವ ಭರವಸೆಯನ್ನು ಶಿಕ್ಷಣ ಇಲಾಖೆ ನೀಡಿದೆ ಎಂದು ಹೇಳಲಾಗಿದೆ. ಶಿಕ್ಷಕರನ್ನು ರಜೆಯಲ್ಲಿ ಕಳುಹಿಸುವ ವರೆಗೆ ತರಗತಿ ಬಹಿಷ್ಕಾರ ಪ್ರತಿಭಟನೆ ಇಲ್ಲಿಯೂ ಮುಂದುವರಿಯಲಿದೆ ಎಂದು ಪೋಷಕರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಸ್ಪಂದನ: ಸಚಿವ ಸಿ.ಟಿ.ರವಿ

ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷಿಕರು ಮತ್ತು ಕನ್ನಡ ಶಾಲೆಗಳ ಮೇಲೆ ಕೇರಳ ಸರ್ಕಾರದ ದೌರ್ಜನ್ಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಕಾಸರಗೋಡಿನ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ ಹಾಗೂ ಉದ್ಯೋಗ ತಿದ್ದುಪಡಿ ಕಾಯ್ದೆಯಲ್ಲಿ ಗಡಿನಾಡ ಕನ್ನಡಿಗರಿಗೆ ಅನ್ಯಾಯವಾಗಲಿರುವ ವಿಚಾರದ ಕುರಿತಂತೆ ಸಮಗ್ರ ವರದಿಯನ್ನು ತರಿಸಿಕೊಂಡು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು. ಮುಂದೆ ಕೇರಳ ಸರ್ಕಾರದ ಜೊತೆಗೆ ಪತ್ರ ವ್ಯವಹಾರ, ಮಾತುಕತೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿ.ಟಿ.ರವಿ ತಿಳಿಸಿದ್ದಾರೆ. ಗಡಿನಾಡಿನ ಕನ್ನಡಿಗರ ಬವಣೆ ಕುರಿತಂತೆ ಕನ್ನಡಪ್ರಭ ಹಲವು ಬಾರಿ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮತ್ತೆ ಮಲಯಾಳಂ ಶಿಕ್ಷಕರು

Follow Us:
Download App:
  • android
  • ios