Asianet Suvarna News Asianet Suvarna News

ಮಂಗಳೂರು: ಈ ಮೀನಿಗೂ, ಕಾರ್ಗಿಲ್‌ ಯುದ್ಧಕ್ಕೂ ಇದೆ ಸಂಬಂಧ!

ಇತ್ತೀಚೆಗೆ ಕಾರವಾರದಲ್ಲಿ ಹಾಗೂ ಮಲ್ಪೆಯಲ್ಲಿ ಯಥೇಚ್ಛವಾಗಿ ಲಭ್ಯವಾದ ಕಾರ್ಗಿಲ್ ಮೀನಿನ ಹೆಸರು ಕಾರ್ಗಿಲ್ ಯುದ್ಧವನ್ನು ನೆನಪಿಸುತ್ತದಲ್ಲವೇ..? ಹೌದು. ಕಾರ್ಗಿಲ್ ಯುದ್ಧಕ್ಕೂ ಈ ಮೀನಿಗೂ ಸಂಬಂಧವಿದೆ. ಇದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

kargil fish named after kargil war
Author
Bangalore, First Published Oct 11, 2019, 1:06 PM IST

ಮಂಗಳೂರು(ಅ.11): ಒಂದು ಯಕಶ್ಚಿತ್‌ ಮೀನಿಗೂ, ಕಾರ್ಗಿಲ್‌ ಯುದ್ಧಕ್ಕೂ ಎತ್ತಣಿಂದೆತ್ತ ಸಂಬಂಧ? ಆದರೆ ಇಲ್ಲೊಂದು ಮೀನಿಗೆ ಸಂಬಂಧ ಇದೆ. ಯಾಕೆಂದರೆ ಇದರ ಹೆಸರೇ ಕಾರ್ಗಿಲ್‌!

ರಾಜ್ಯದ ಸಮುದ್ರ ಮೀನುಗಾರಿಕೆಯಲ್ಲಿ ತಿನ್ನಲು ಯೋಗ್ಯವಲ್ಲದ ಕಾರ್ಗಿಲ್‌ ಮೀನು ಈಗ ಯಥೇಚ್ಛವಾಗಿ ಸಿಗುತ್ತಿದ್ದು, ಇತರ ಮೀನುಗಳೇ ಸಿಗದೆ ಮೀನುಗಾರರು ಸಂಕಟಪಡುತ್ತಿದ್ದಾರೆ. ಕಾರ್ಗಿಲ್‌ ಹೆಸರಿನಂತೆಯೇ ಸಮುದ್ರದಲ್ಲೀಗ ಯುದ್ಧ ಕಾಲದ ಸೂತಕ ಆವರಿಸಿದೆ ಎಂದು ಮೀನುಗಾರರು ಹೇಳುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಟ್ರಿಗ್ಗರ್‌ ಫಿಶ್‌ ಎಂದು ಕರೆಯಲ್ಪಡುವ ಕಾರ್ಗಿಲ್‌ ಮೀನಿಗೆ ಕಾತ್ಲಿ, ಕಡಬು ಎನ್ನುವ ಇತರ ಹೆಸರುಗಳಿದ್ದರೂ ‘ಕಾರ್ಗಿಲ್‌’ನಷ್ಟುಖ್ಯಾತಿ ಪಡೆದಿಲ್ಲ.

ಹೆಸರು ಬಂದದ್ದು ಹೇಗೆ?:

‘ಕಾರ್ಗಿಲ್‌ ಮೀನು ಮೂಲತಃ ಒಂದು ಜಾತಿಯ ಜೆಲ್ಲಿ ಫಿಶ್‌. 1999ರವರೆಗೂ ಇದು ದೇಶದ ಕರಾವಳಿಯಲ್ಲಿ ಕಂಡುಬಂದಿರಲಿಲ್ಲ. 1999ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಕಾರ್ಗಿಲ್‌ ಯುದ್ಧ ಸಂದರ್ಭ ಮಲ್ಪೆ ಮೀನುಗಾರರಿಗೆ ಮೊದಲ ಬಾರಿಗೆ ದಂಡಿಯಾಗಿ ಸಿಕ್ಕಿತ್ತು. ಹೊಸ ಮೀನು ಕಂಡ ಮೀನುಗಾರರು ಆ ಕಾಲದ ಬಹುಚರ್ಚಿತ ಕಾರ್ಗಿಲ್‌ ಹೆಸರನ್ನೇ ಇಟ್ಟುಬಿಟ್ಟಿದ್ದರು. ಅದೇ ಹೆಸರು ಈಗಲೂ ಮುಂದುವರಿದಿದೆ’ ಎಂದು ಮಲ್ಪೆ ಮೀನುಗಾರರ ಎಸೋಸಿಯೇಶನ್‌ ಮಾಜಿ ಅಧ್ಯಕ್ಷ ಸತೀಶ್‌ ಕುಂದರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮತ್ತೆ ಮಲಯಾಳಂ ಶಿಕ್ಷಕರು

‘ಕಾರ್ಗಿಲ್‌ ಮೀನು ಗಾಢ ಕಂದು- ಕಪ್ಪು ಬಣ್ಣದಿಂದ ಕೂಡಿದ್ದು, ಸಮುದ್ರ ನೀರಿನಲ್ಲಿ ಹಿಂಡಾಗಿ ಚಲಿಸುವಾಗ ಸೈನಿಕರ ಸಮವಸ್ತ್ರದ ಬಣ್ಣದಂತೆ ಕಾಣುತ್ತಿತ್ತು. ಆಗ ಕಾರ್ಗಿಲ್‌ ಯುದ್ಧ ಬೇರೆ ನಡೆಯುತ್ತಿದ್ದುದರಿಂದ ಇದೇ ಹೆಸರನ್ನು ಹೊಸ ಮೀನಿಗೆ ಮೀನುಗಾರರು ಇಟ್ಟಿದ್ದರು. ಅದಾದ ಬಳಿಕ ರಾಜ್ಯದ ಕರಾವಳಿಯಲ್ಲಿ ಕಾರ್ಗಿಲ್‌ ಹೆಸರೇ ಜನಜನಿತವಾಗಿದೆ’ ಎಂದು ಇನ್ನೋರ್ವ ಮೀನುಗಾರರು ಹೇಳುತ್ತಾರೆ.

ನಷ್ಟದ ಬಲೆಯಲ್ಲಿ ಮೀನುಗಾರರು:

ಕಾರ್ಗಿಲ್‌ ಯುದ್ಧದ ಬಳಿಕವೂ ಆಗಾಗ ಈ ಮೀನು ಕಾಣಿಸಿಕೊಳ್ಳುತ್ತಿತ್ತು. ಆಳಸಮುದ್ರ ಮೀನುಗಾರರಿಗೆ ಅಪರೂಪಕ್ಕೆ ಒಮ್ಮೊಮ್ಮೆ 500-1000 ಕೆಜಿ ಸಿಗುತ್ತಿತ್ತು. ಆದರೆ ಇಷ್ಟುದೊಡ್ಡ ಪ್ರಮಾಣದಲ್ಲಿ- ಸಾಮೂಹಿಕವಾಗಿ ಪಶ್ಚಿಮ ಕರಾವಳಿಯುದ್ದಕ್ಕೂ ಕಂಡುಬಂದಿರುವುದು ಇದೇ ಮೊದಲು.

ಕಡಲ ಮಕ್ಕಳ ಕಂಗೆಡಿಸಿವೆ ಬಲೆಗೆ ಬಿದ್ದ ಕಾರ್ಗಿಲ್‌ ಮೀನು

ಈಗ ಆಳಸಮುದ್ರ ಮೀನುಗಾರರಿಗೆ ಇದೇ ದೊಡ್ಡ ಚಿಂತೆಯಾಗಿ ಬೇರೆ ಯಾವುದೇ ಮೀನು ಸಿಗದೆ ನಷ್ಟದಲ್ಲಿದ್ದಾರೆ. ಪ್ರತಿ ಬೋಟ್‌ನವರಿಗೆ ಒಂದು ಟನ್‌ನಿಂದ 20 ಟನ್‌ವರೆಗೂ ಕಾರ್ಗಿಲ್‌ ಮೀನೇ ಸಿಗುತ್ತಿದೆ. ಇದನ್ನು ತಿನ್ನಲು ಅಸಾಧ್ಯವಾಗಿರುವುದರಿಂದ ಕೇವಲ 12-15 ರುಪಾಯಿ ಜುಜುಬಿ ಮೊತ್ತಕ್ಕೆ ಫಿಶ್‌ಮಿಲ್‌ಗಳಿಗೆ ಮಾರಾಟ ಮಾಡುವಂತಾಗಿದೆ. ಬೋಟ್‌ನ ಡೀಸೆಲ್‌ ವೆಚ್ಚವನ್ನೂ ಭರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಸತೀಶ್‌ ಕುಂದರ್‌ ಖೇದ ವ್ಯಕ್ತಪಡಿಸಿದರು.

ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ.

ಈ ವರ್ಷ ಸಮುದ್ರದಲ್ಲಿ ಚಂಡಮಾರುತ ಮತ್ತಿತರ ಕಾರಣಗಳಿಂದಾಗಿ ಮೀನುಗಾರಿಕೆ ಆರಂಭವಾದದ್ದೇ ಒಂದೂವರೆ ತಿಂಗಳ ಬಳಿಕ. ಆದರೂ ಉತ್ತಮ ಮೀನುಗಳ ನಿರೀಕ್ಷೆಯಲ್ಲಿದ್ದೆವು. ಆದರೆ ಮೀನುಗಾರಿಕೆಯ ಆರಂಭದಿಂದಲೂ ಕಾರ್ಗಿಲ್‌ ಮೀನುಗಳ ಹಾವಳಿ ಶುರುವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮೀನುಗಾರರು ನಷ್ಟಕ್ಕೊಳಗಾಗಿ ಬೀದಿಪಾಲಾಗಲಿದ್ದಾರೆ ಎಂದವರು ಆತಂಕ ತೋಡಿಕೊಂಡರು.

ಕಾರ್ಗಿಲ್‌ ಇದ್ದೆಡೆ ಬೇರೆ ಮೀನೇ ಬರಲ್ಲ:

ಕಾರ್ಗಿಲ್‌ ಮೀನು ಅಸಹ್ಯಕರ ವಾಸನೆಯನ್ನೂ, ಅಂಟು ಗುಣವನ್ನೂ ಹೊಂದಿವೆ. ಅತಿದೊಡ್ಡ ಪ್ರಮಾಣದಲ್ಲಿ ಹಿಂಡಾಗಿ ಸಂಚರಿಸುವ ಇವು ಆಕ್ರಮಣಕಾರಿಯಾಗಿದ್ದು, ತನ್ನ ಬೇಟೆಗೆ ಸಿಕ್ಕ ಇತರ ಮೀನುಗಳನ್ನು ಭಕ್ಷಿಸಿ ಜೀವಿಸುತ್ತವೆ. ಹಾಗಾಗಿ ಇವು ಇರುವ ಕಡೆಗಳಲ್ಲಿ ಇತರ ಜಾತಿಯ ಮೀನುಗಳು ಕಾಣಸಿಗದೆ ಪಲಾಯನ ಮಾಡುತ್ತವೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ ಬೂತಾಯಿ, ಬಂಗುಡೆ, ಅಂಜಲ್‌ನಂತಹ ಮೀನುಗಳೂ ಈ ಬಾರಿ ಸಿಗುತ್ತಿಲ್ಲ. ಕಾರ್ಗಿಲ್‌ ಮೀನುಗಳ ಹಾವಳಿಯಿಂದ ಪಾರಾಗುವುದು ಹೇಗೆ ಎಂದು ಮೀನುಗಾರರು ಪ್ರಶ್ನಿಸತೊಡಗಿದ್ದಾರೆ.

ಸದ್ದಾಂ ಮೀನೂ ಉಂಟು!

ಈ ಬಾರಿ ಕಾರ್ಗಿಲ್‌ ಮೀನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದರಿಂದ ಎಲ್ಲೆಡೆ ಈ ಹೆಸರೇ ಫೇಮಸ್ಸಾಗಿದೆ. ಆದರೆ ಇನ್ನೊಂದು ಅಪರೂಪದ ಮೀನಿಗೆ ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ಹೆಸರಿಟ್ಟಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. 1990ರ ವೇಳೆಗೆ ಕುವೈಟ್‌- ಇರಾಕ್‌ ಯುದ್ಧದ ಸಂದರ್ಭದಲ್ಲಿ ಹೊಸ ಮೀನೊಂದು ಕಡಲ ಮಕ್ಕಳಿಗೆ ದೊರೆತಿತ್ತು. ಪ್ರಪಂಚದೆಲ್ಲೆಡೆ ಆಗ ಸದ್ದಾಂ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದ್ದುದರಿಂದ ಅದೇ ಹೆಸರನ್ನು ಮೀನುಗಾರರು ನಾಮಕರಣ ಮಾಡಿದ್ದರು. ಕಪ್ಪು ಅಂಜಲ್‌ ಟೇಸ್ಟ್‌ ಇರುವ ಈ ಮೀನು ಈಗಲೂ ಅಲ್ಪಸ್ವಲ್ಪ ಸಿಗುತ್ತಲೇ ಇರುತ್ತದೆ.

-ಸಂದೀಪ್‌ ವಾಗ್ಲೆ

Follow Us:
Download App:
  • android
  • ios