ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಬ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ವಿದ್ಯಾರ್ಥಿಯೋರ್ವ ತನ್ನ ತಂದೆಗೆ ಚಾಕುವಿನಿಂದ ಹಿಗ್ಗಾಮುಗ್ಗಾ ಇರಿದು ಬಳಿಕ ಮನೆಯಲ್ಲಿದ್ದ ಬಂದೂಕುವಿನಿಂದ ಗುಂಡು ಹಾರಿಸಿಕೊಂಡು ತಾನು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ತಂದೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಡಬದ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.

ರಾಮಕುಂಜದ ಪಾದೆಯಲ್ಲಿ ನೆಲೆಸಿರುವ ವಸಂತ್ ಅಮೀನ್ ಎಂಬುವವರ ಪುತ್ರನೇ ಈ ರೀತಿಗೆ ತಂದೆಯ ಮೇಲೆ ಹಲ್ಲೆ ಮಾಡಿ ಬಳಿಕ ತಾನು ಸಾವಿಗೆ ಶರಣಾದ ಬಾಲಕ. ಮೃತ ಹದಿಹರೆಯದ ಬಾಲಕನನ್ನು ಮೋಕ್ಷ್ ಎಂದು ಗುರುತಿಸಲಾಗಿದೆ. ಮೋಕ್ಷ್ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ. ಘಟನೆಯಿಂದ ವಸಂತ್ ಅಮೀನ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ಸಿಂಗಲ್ ಪೆಂಗ್ವಿನ್‌ಗಾಗಿ ಮರುಗಿದ ನೆಟ್ಟಿಗರು: ವೈರಲ್ ಸ್ಟೋರಿಯ ಅಸಲಿಯತ್ತು?

ಕೇರಳದವರಾದ ವಸಂತ್ ಅಮೀನ್ ಅವರು ಕೆಲ ವರ್ಷಗಳ ಹಿಂದೆ ರಾಮಕುಂಜದ ಪಾದೆ ಎಂಬಲ್ಲಿಗೆ ಬಂದು ಅಲ್ಲಿಯೇ ಭೂಮಿ ಖರೀದಿಸಿ ಮನೆ ನಿರ್ಮಿಸಿಕೊಂಡು ಅಲ್ಲಿ ವಾಸ ಮಾಡುತ್ತಿದ್ದರು. ಜನವರಿ 24ರಂದು ಅಂದರೆ ನಿನ್ನೆ ಯಾವುದೋ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪ ಮಗನ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ತಂದೆಯ ಬಗ್ಗೆ ತೀವ್ರ ಆಕ್ರೋಶಗೊಂಡ ಮೋಕ್ಷ್, ಮನೆಯಲ್ಲಿದ್ದ ಚಾಕುವಿನಿಂದ ತಂದೆಗೆ ಇರಿದಿದ್ದಾನೆ. ಬಳಿಕ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ.

ಪರಿಚಯಸ್ಥರಿಗೆ ಫೋನ್ ಮಾಡಿ ವಿಚಾರ ತಿಳಿಸಿದ ವಸಂತ್ ಅಮೀನ್

ಮನೆಯಲ್ಲಿ ಶನಿವಾರ ಸಂಜೆ ವಸಂತ ಅಮೀನ್ ಅವರು ಪರಿಚಯಸ್ಥರಿಗೆ ಪೋನಾಯಿಸಿ ತನ್ನ ಮಗ ಮೋಕ್ಷ್‌ (17) ತನಗೆ ಚೂರಿಯಿಂದ ಇರಿದಿದ್ದಾನೆ . ಹಾಗೂ ಮಗ ಗುಂಡು ಹಾರಿಸಿಕೊಂಡಿದ್ದಾನೆಂದು ತಿಳಿಸಿದ ಹಿನ್ನೆಲೆಯಲ್ಲಿ ಪರಿಚಯಸ್ಥರು ಮನೆಗೆ ಭೇಟಿ ನೀಡಿದಾಗ ವಸಂತ ಅಮೀನ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದರೆಂದೂ, ಮಗ ಮೋಕ್ಷ್‌ ಗುಂಡೇಟಿನಿಂದ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದನೆಂದೂ ತಿಳಿಸಲಾಗಿದೆ.

ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯೇ ಮಗನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಪತ್ನಿ

ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ಮೋಕ್ಷಿತ್ ತಾಯಿ ಜಯಶ್ರೀ ಪೊಲೀಸರಿಗೆ ದೂರು ನೀಡಿದ್ದು, ತನ್ನ ಗಂಡನೇ ತನ್ನ ಮಗನನ್ನು ಕೊಂದಿರುವುದಾಗಿ ಆರೋಪಿಸಿದ್ದಾರೆ. ರಾಮಕುಂಜದ ಆಸ್ತಿಯು ತನ್ನ ಹೆಸರಿನಲ್ಲಿದ್ದು, ಅದನ್ನು ನಾನು ಗಂಡನ ಹೆಸರಿಗೆ ಬರೆದುಕೊಡಬೇಕೆಂದೂ ಗಂಡ ತಾಕೀತು ಮಾಡುತ್ತಿದ್ದನೆಂದೂ, ಅದಕ್ಕೆ ಮಗ ವಿರೋಧ ವ್ಯಕ್ತಪಡಿಸುತ್ತಿದ್ದನೆಂದೂ ಆರೋಪಿಸಿರುವ ಆಕೆ ತನ್ನೊಂದಿಗೆ ಪೆರ್ಲದಲ್ಲಿ ವಾಸವಾಗಿದ್ದ ಮಗನನ್ನು ಕಳೆದ ಒಂದು ತಿಂಗಳ ಹಿಂದೆ ರಾಮಕುಂಜಕ್ಕೆ ಕರೆದು ತಂದಿದ್ದು, ಶನಿವಾರ ವಿನಾ ಕಾರಣ ಚಿಕಿತ್ಸೆಯ ನೆಪದಲ್ಲಿ ಮಂಗಳೂರಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಮಗ ತನಗೆ ಏನಾದರೂ ಸಮಸ್ಯೆಯಾದರೆ ತಂದೆಯೇ ಕಾರಣವೆಂದು ನನಗೆ ಪೋನಾಯಿಸಿ ತಿಳಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಸ್ತಿಯ ವಿಚಾರದಲ್ಲಿ ವೈಮನಸ್ಸು ಮೂಡಿ ಪತ್ನಿ ಜಯಶ್ರೀ ಕಾಸರಗೊಡು ಜಿಲ್ಲೆಯ ಪೆರ್ಲದಲ್ಲಿನ ತನ್ನ ತವರು ಮನೆಯಲ್ಲಿ ವಾಸ್ತವ್ಯ ಇದ್ದು, ತನ್ನ ಏಕೈಕ ಮಗನನ್ನು ತನ್ನೊಂದಿಗೆ ಕರೆದೊಯ್ದಿದ್ದರು. ಆದರೆ ತಿಂಗಳ ಹಿಂದೆ ತಂದೆಯ ಕರೆಗೆ ಓಗೊಟ್ಟು ರಾಮಕುಂಜದ ಮನೆಗೆ ಬಂದಿದ್ದ ಮಗ ಈ ರೀತಿ ಸಾವನ್ನಪ್ಪಿರುವುದು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಪ್ರೇಮಿಗಳ ದಿನ ಪ್ರೇಮಿಗಳಿಗೆ ಶಾಕ್ ನೀಡೋದಕ್ಕೆ ಮುಂದಾದ ಸಿಂಗಲ್ಸ್‌

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಮಾತನಾಡಿ, ಗಾಯಾಳು ವಸಂತ ಅಮೀನ್ ನೀಡಿದ ಹೇಳಿಕೆಗೂ, ಮೃತ ಬಾಲಕನ ತಾಯಿ ನೀಡಿದ ಹೇಳಿಕೆಗೂ ಭಾರೀ ವ್ಯತ್ಯಾಸವಿದ್ದು, ಕೂಲಂಕಷ ತನಿಖೆಯ ಬಳಿಕವೇ ಸತ್ಯ ತಿಳಿಯಬೇಕಾಗಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜ್ , ಕಡಬ ಎಸೈ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777