ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ, ತನ್ನ ಗುಂಪನ್ನು ತೊರೆದು ಪರ್ವತದತ್ತ ಸಾಗುತ್ತಿರುವ ಒಂಟಿ ಪೆಂಗ್ವಿನ್ ವಿಡಿಯೋದ ಅಸಲಿ ಕಥೆ ಬೇರೆಯೇ ಇದೆ. ಹಾಗಿದ್ದರೆ ಈ ಪೆಂಗ್ವಿನ್‌ನ ನಿಜವಾದ ಸ್ಟೋರಿ ಏನು?
ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ಗೆ ಹೋದ್ರೆ ಸಾಕು ಎಲ್ಲಿ ನೋಡಿದರು ಈ ಸಿಂಗಲ್ ಪೆಂಗ್ವಿನ್‌ಗಾಗಿ ಮರುಗುವವರೇ ಎಲ್ಲಾ..! ತನ್ನ ಗುಂಪನ್ನು ಬಿಟ್ಟು ಪರ್ವತದ ಕಡೆಗೆ ಒಂಟಿಯಾಗಿ ನಡೆದು ಹೋಗುತ್ತಿರುವ ಈ ಪೆಂಗ್ವಿನ್‌ನನ್ನು ನೋಡಿ ಎಲ್ಲರೂ ಮರುಗುತ್ತಿದ್ದಾರೆ. ಪೆಂಗ್ವಿನ್ ಒಂಟಿಯಾಗಿದೆ, ವಿರಹ ವೇದನೆಯಿಂದ ಬಳಲುತ್ತಿರುವ ಪೆಂಗ್ವಿನ್‌ಗೆ ವೈರಾಗ್ಯ ಕಾಡ್ತಿದೆ ಎಂದೆಲ್ಲಾ ಬೇಸರಿಸುತ್ತಿದ್ದಾರೆ. ಹಾಗಿದ್ದರೆ ಈ ಪೆಂಗ್ವಿನ್‌ನ ನಿಜವಾದ ಸ್ಟೋರಿ ಏನು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಲವು ಮೀಮ್ಸ್ ಗಳಲ್ಲಿ, ತನ್ನ ಗೆಳತಿಯನ್ನು ಕಳೆದುಕೊಂಡ ಒಂಟಿ ಪೆಂಗ್ವಿನ್ ಒಂದು ತನ್ನ ಹಿಂಡನ್ನು ತೊರೆದು ಪರ್ವತ ಪ್ರದೇಶದತ್ತ ದಾಪುಗಾಲಿಡುತ್ತದೆ. ಸುಮಾರು 60ರಿಂದ 70 ಕಿಲೋ ಮೀಟರ್ ದೂರ ಅದು ನಡೆಯುತ್ತಾ ಪರ್ವತ ಪ್ರದೇಶವನ್ನು ತಲುಪುತ್ತದೆ. ಆದರೆ ಈ ಪರ್ವತ ಪ್ರದೇಶಗಳು ಪೆಂಗ್ವಿನ್‌ಗಳಿಗೆ ವಾಸಕ್ಕೆ ಯೋಗ್ಯವಲ್ಲ, ಅಲ್ಲಿ ಅವುಗಳಿಗೆ ಸಂತಾನೋತ್ಪತಿಗೆ ತಕ್ಕಂತಹ ವಾತಾವರಣವಿಲ್ಲ, ಜೊತೆಗೆ ಆಹಾರವೂ ಸಿಗುವುದಿಲ್ಲ, ಹೀಗಿದ್ದು, ಪೆಂಗ್ವಿನ್ ವಿರಹ ವೇದನೆಯಿಂದಾಗಿ ಕುಟುಂಬದಿಂದ ದೂರಾಗಿ ಹೊರಟಿದೆ ಎಂಬೆಲ್ಲಾ ಮೀಮ್ಸ್‌ಗಳು, ಮೀಮ್ಸ್‌ಗೆ ತಕ್ಕಂತೆ ವೀಡಿಯೋವೊಂದರಲ್ಲಿ ಪೆಂಗ್ವಿನ್ ಒಂದು ಪರ್ವತದತ್ತ ನಡೆದು ಹೋಗುತ್ತಿರುವುದು ವೈರಲ್ ಆಗಿದ್ದವು.
ಇದನ್ನೂ ಓದಿ: ಪ್ರೇಮಿಗಳ ದಿನದಂದು ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್
ಆದರೆ ನಿಜವಾಗಿಯೂ ಇದು ಏನು? ಇದು ನಿಜವಾಗಿಯೂ ನಡೆದಿರುವ ಘಟನೆಯೇ? ಖಂಡಿತ ಅಲ್ಲ, ಈ ಮೀಮ್ಸ್‌ನಲ್ಲಿ ಕಾಣಿಸಿಕೊಂಡಿರುವ ಪೆಂಗ್ವಿನ್‌ನ ಅಸಲಿ ಕತೆ ಬೇರೆಯೇ ಇದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯವಾಗಿದೆ. ಚಲನಚಿತ್ರ ನಿರ್ಮಾಪಕ ವರ್ನರ್ ಹೆರ್ಜಾಗ್ ಅವರ 2007 ರ ಸಾಕ್ಷ್ಯಚಿತ್ರ 'ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್' ನಲ್ಲಿ ಇರುವ ದೃಶ್ಯ ಇದಾಗಿದೆ. ಈ ದೃಶ್ಯದಲ್ಲಿ, ಒಂದು ವಯಸ್ಸಿಗೆ ಬಂದಿರುವ ಪೆಂಗ್ವಿನ್ ತನ್ನ ಕರಾವಳಿ ನೆಲೆಯನ್ನು ಬಿಟ್ಟು ಸಮುದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಹಿಮಾವೃತ ಪರ್ವತ ಶ್ರೇಣಿಗಳ ಕಡೆಗೆ ನಡೆದು ಹೋಗುತ್ತದೆ.
ಪೆಂಗ್ವಿನ್‌ಗಳು ಸಾಮಾನ್ಯವಾಗಿ ಕರಾವಳಿಗೆ ಹತ್ತಿರದಲ್ಲಿಯೇ ಇರುತ್ತವೆ, ಅಲ್ಲಿ ಅವು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಬೇಟೆಯಾಡುತ್ತವೆ. ದೀರ್ಘ, ಉದ್ದೇಶಪೂರ್ವಕ ಈ ರೀತಿಯ ಪರ್ವತದ ಕಡೆಗಿನ ಅವುಗಳ ಚಾರಣಗಳು ಬಹಳಅಪರೂಪ ಅಥವಾ ಇಲ್ಲವೇ ಇಲ್ಲ. ಅದು ಅವುಗಳ ಬದುಕುಳಿಕೆಗೆ ಮಾರಕ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅನೇಕರು ಹಾರ್ಟ್‌ಬ್ರೇಕ್ ಮಾಡಿಕೊಂಡು ಒಂಟಿಯಾಗಿ ಯಾತನೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ, ಸೋಶಿಯಲ್ ಮೀಡಿಯಾವೂ ಬಹಳ ಜನಪ್ರಿಯವಾಗಿರುವುದರಿಂದ ಈ 2007ರ ವೀಡಿಯೋ ಕ್ಲಿಪ್ ಈಗ ವೈರಲ್ ಆಗ್ತಿದ್ದು, ಅದನ್ನು ಜನ ತಮಗೆ ತಕ್ಕಂತೆ ವಿಶ್ಲೇಷಿಸುತ್ತಿದ್ದಾರೆ. ಬರೋಬ್ಬರಿ 19 ವರ್ಷಗಳ ನಂತರ ಈ ವೀಡಿಯೋ ಈಗ ಸಖತ್ ಫೇಮಸ್ ಆಗ್ತಿದ್ದು, 2010ರಲ್ಲಿಈ ವೀಡಿಯೋ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿತ್ತು.
ಇದನ್ನೂ ಓದಿ: ಕುಡಿಯುವ ನೀರಿಗೂ ಹಣ ಪಡೆದ ಹೊಟೇಲ್ ಮೇಲೆ ಕೇಸ್ ಹಾಕಿ ಗೆದ್ದ ಗ್ರಾಹಕ: ಸಿಕ್ಕಿದ ಪರಿಹಾರ ಎಷ್ಟು?
ಈ ಪೆಂಗ್ವಿನ್‌ಗೆ ನೆಟ್ಟಿಗರು ನಿಹಿಲಿಸ್ಟ್ ಪೆಂಗ್ವಿನ್ ಎಂದು ಹೆಸರಿಟ್ಟಿದ್ದಾರೆ. ನಾನು ನನ್ನ ಸಮಸ್ಯೆಗಳಿಂದ ದೂರ ಹೋಗುತ್ತಿದ್ದೇನೆ ಎಂದು ಒಬ್ಬರು ಬಣ್ಣಿಸಿದರೆ, ನೀವು ಎಲ್ಲವನ್ನು ಮುಗಿಸಿದಾಗ ಎಂದು ಮತ್ತೊಬ್ಬರು ಬರೆದಿದ್ದಾರೆ.
ಪೆಂಗ್ವಿನ್ ನಡವಳಿಕೆಯ ಬಗ್ಗೆ ವನ್ಯಜೀವಿ ತಜ್ಞರು ಏನಂತಾರೆ?
ವಿಜ್ಞಾನಿಗಳು ಹೇಳುವಂತೆ ಪೆಂಗ್ವಿನ್‌ಗಳ ವರ್ತನೆಗೆ ಹಲವಾರು ಸಂಭಾವ್ಯ ಕಾರಣಗಳಿವೆ. ಇವುಗಳಲ್ಲಿ ವಿಶೇಷವಾಗಿ ಕಿರಿಯ ಅಥವಾ ಅನನುಭವಿ ಪೆಂಗ್ವಿನ್‌ಗಳು ದಿಗ್ಭ್ರಮೆಗೆ ಒಳಗಾಗುತ್ತವೆ. ಕೆಲವೊಮ್ಮೆ ನರಗಳಲ್ಲಿ ಸಮಸ್ಯೆ ಆದಾಗ ಅನಾರೋಗ್ಯ ಆದಾಗ ದೂರ ಸಾಗುವ ಅಪರೂಪದ ನಿದರ್ಶನಗಳಿವೆ. ಪೆಂಗ್ವಿನ್‌ಗಳು ಬಂಡೆಗೆ ತಲೆ ಬಡಿದುಕೊಳ್ಳುವುದನ್ನು ನಾನು ಎಂದಿಗೂ ನೋಡಿಲ್ಲ. ಆದರೆ ಅವುಗಳು ದಿಗ್ಭ್ರಮೆಗೆ ಒಳಗಾಗುತ್ತವೆ ಎಂದು ಖ್ಯಾತ ಪಕ್ಷಿತಜ್ಞ ಡಾ ಡೇವಿಡ್ ಐನ್ಲೆ ಹೇಳುತ್ತಾರೆ.

