ಅಯ್ಯೋ, ದತ್ತು ಪಡೆದ ಮಗನಿಂದಲೇ ಹೆಣವಾದ ತಾಯಿ, ಅಮ್ಮಂದಿರ ದಿನ ಇದೆಂಥ ಸುದ್ದಿ?
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಾಕು ಮಗನೇ ತಾಯಿಗೆ ಯಮನಾಗಿದ್ದಾನೆ. ಅಮ್ಮನನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಮಗ, ಹೆಣವನ್ನು ಮುಚ್ಚಿಟ್ಟು, ನಾಪತ್ತೆ ನಾಟಕವಾಡಿದ್ದಾನೆ. ಕೊನೆಗೂ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ.
ಮಕ್ಕಳ ಮೇಲೆ ಪಾಲಕರಿಗೆ ಅಪಾರ ಪ್ರೀತಿ. ಮಕ್ಕಳಿಗಾಗಿ ಏನು ಮಾಡಲೂ ಅವರು ಸಿದ್ಧವಿರ್ತಾರೆ. ತಮ್ಮ ವೃದ್ಧಾಪ್ಯದಲ್ಲೂ ಮಕ್ಕಳ ಏಳ್ಗೆಯನ್ನು ಬಯಸುವ ಪಾಲಕರು, ಮಕ್ಕಳು ಆ ಸಮಯದಲ್ಲಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳದೆ ಹೋದ್ರೂ ಬೇಸರಪಟ್ಟುಕೊಳ್ಳೋದಿಲ್ಲ. ಮಕ್ಕಳಿಲ್ಲದ ದಾಂಪತ್ಯ ರಸವಿಲ್ಲದ ಹಣ್ಣಿನಂತೆ ಎಂದು ಭಾವಿಸುವ ಜನರು, ತಮಗೆ ಮಕ್ಕಳಾಗಿಲ್ಲ ಎಂದಾಗ ಮಕ್ಕಳನ್ನು ದತ್ತು ಪಡೆದು ಸಾಕುತ್ತಾರೆ. ಈ ದಂಪತಿ ಕೂಡ ಗಂಡು ಮಗುವನ್ನು ದತ್ತು ಪಡೆದು ಸಾಕಿದ್ದರು. ಆದ್ರೆ ದತ್ತು ಪುತ್ರನೇ ಶಾಪವಾಗಿದ್ದಾನೆ. ವೃದ್ಧೆ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ಕೈನಲ್ಲಿದ್ದ ಹಣವೇ ಸಾವಿಗೆ ಕಾರಣವಾಗಿದೆ. ಸಾಕಿ ಸಲಹಿದ ತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಮೆಟ್ಟಿಲಿನಿಂದ ಬೀಳಿಸಿದ್ದಲ್ಲದೆ ತಲೆ ಜಜ್ಜಿ ಹತ್ಯೆ ಮಾಡಿದ್ದಾನೆ. ಇದನ್ನು ಮುಚ್ಚಿಡಲು ಬಾತ್ ರೂಮಿನಲ್ಲಿ ಹೆಣ ಹೂತಿದ್ದಾನೆ.
ತಾಯಿಯನ್ನೇ ಕೊಂದ ಪಾಪಿ : ಮಧ್ಯಪ್ರದೇಶ (Madhya Pradesh) ದ ಶಿಯೋಪುರದಲ್ಲಿ ಈ ಹತ್ಯೆ (Murder) ನಡೆದಿದೆ. ಇಲ್ಲಿನ ರೈಲ್ವೆ ಕಾಲೋನಿ ನಿವಾಸಿ ಭುವನೇಂದ್ರ ಪಚೌರಿ ಮತ್ತು ಉಷಾ ಪಚೌರಿ ದಂಪತಿಗೆ ಮಕ್ಕಳಿರಲಿಲ್ಲ. ಅನಾಥಾಶ್ರಮದಿಂದ 20 ವರ್ಷಗಳ ಹಿಂದೆ ಮೂರ ವರ್ಷದ ಬಾಲಕನನ್ನು ದೀಪಕ್‌ನನ್ನು ಭುವನೇಂದ್ರ ಪಚೌರಿ ಮತ್ತು ಉಷಾ ಪಚೌರಿ ದತ್ತು ಪಡೆದಿದ್ದರು. ಅಲ್ಲಿಂದ ದೀಪಕ್, ಇವರ ಜೊತೆ ವಾಸವಾಗಿದ್ದ.
ಈ ದೇಶದಲ್ಲಿ ಡಿವೋರ್ಸ್ ಜಾಸ್ತಿಯಂತೆ; ಅತಿ ಹೆಚ್ಚು ವಿಚ್ಛೇದನ ಆಗೋ ದೇಶಗಳಿವು
2015ರಲ್ಲಿ ಭುವನೇಂದ್ರ ಪಚೌರಿ ಕೆಲಸದಿಂದ ನಿವೃತ್ತಿ (Retirement)ಯಾಗಿದ್ದು, 2016ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಆ ನಂತ್ರ ಮಗ ದೀಪಕ್ ಜೊತೆ ಉಷಾ ವಾಸವಾಗಿದ್ದಳು. ಆದ್ರೆ ಉಷಾ ಹಾಗೂ ದೀಪಕ್ ಗೆ ಹೊಂದಾಣಿಕೆ ಆಗ್ತಿರಲಿಲ್ಲ. ಹಾಗಾಗಿ ದೀಪಕ್ ದೆಹಲಿಗೆ ಹೋಗಿ ವಾಸವಾಗಿದ್ದ. ದೆಹಲಿಯಲ್ಲಿ ಆರಾಮವಾಗಿ ಜೀವನ ನಡೆಸುತ್ತಿದ್ದ ದೀಪಕ್ ತನ್ನ ಖರ್ಚಿಗೆ ಹೆಚ್ಚು ಹಣ ನೀಡುವಂತೆ ಉಷಾರನ್ನು ಪೀಡಿಸ್ತಿದ್ದ.
ಉಷಾ, ಮಗನಿಗೆ ಹಣ ನೀಡಲು ನಿರಾಕರಿಸಿದ್ದಳು. ಆಗಾಗ ಇಬ್ಬರ ಮಧ್ಯೆ ಹಣಕಾಸಿನ ವಿಷ್ಯಕ್ಕೆ ಗಲಾಟೆ ನಡೆಯುತ್ತಿತ್ತು. ಉಷಾ ಹೆಸರಿನಲ್ಲಿ 30 ಲಕ್ಷದ ಎಫ್ ಡಿ ಇತ್ತು. ಇದ್ರ ಮೇಲೆ ದೀಪಕ್ ಕಣ್ಣಿಟ್ಟಿದ್ದ.
ಘಟನೆಗೂ ಮುನ್ನ ಊರಿಗೆ ಬಂದಿದ್ದ ದೀಪಕ್, ಉಷಾಗೆ ಹಣ ನೀಡುವಂತೆ ಕೇಳಿದ್ದಾನೆ. ಅದಕ್ಕೆ ಉಷಾ ನಿರಾಕರಿಸಿದ್ದಾಳೆ. ಇದ್ರಿಂದ ಕೋಪಗೊಂಡ ದೀಪಕ್, ತಾಯಿಯನ್ನು ಮೆಟ್ಟಿಲ ಕೆಳಗೆ ತಳ್ಳಿದ್ದಾನೆ. ನಂತ್ರ ಆಕೆ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ವಿಷ್ಯ ಬೇರೆಯವರಿಗೆ ತಿಳಿಯಬಾರದು ಎನ್ನುವ ಕಾರಣಕ್ಕೆ ಬಾತ್ ರೂಮಿನಲ್ಲಿ ಹೊಂಡತೋಡಿ ಉಷಾ ಮೃತದೇಹವನ್ನು ಮುಚ್ಚಿದ್ದಾನೆ. ಆ ನಂತ್ರ ದೀಪಕ್ ತನಗೇನೂ ತಿಳಿದಿಲ್ಲ ಎನ್ನುವಂತೆ ವರ್ತಿಸಿದ್ದಾನೆ.
ಸಂಬಂಧಿಕರಿಗೆ ಕರೆ ಮಾಡಿದ ದೀಪಕ್, ಅಮ್ಮ ಉಷಾ ನಾಪತ್ತೆಯಾಗಿದ್ದಾಳೆ. ಆಕೆ ಎಲ್ಲೂ ಕಾಣಿಸ್ತಿಲ್ಲ ಎಂದಿದ್ದಾನೆ. ಅಲ್ಲಿ ಇಲ್ಲಿ ಹುಡುಕಾಟ ನಡೆಸಿದ ಸಂಬಂಧಿಕರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಮೊದಲು ದೀಪಕ್ ಮೇಲೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದರು. ಆರಂಭದಲ್ಲಿ ಯಾವ ವಿಷ್ಯವನ್ನೂ ಬಾಯ್ಬಿಡದ ದೀಪಕ್, ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಂತೆ ಸತ್ಯ ಬಾಯ್ಬಿಟ್ಟಿದ್ದಾನೆ.
ನಟಿ ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಕೊಲೆಯೋ; ಪದೇಪದೇ ಚರ್ಚೆ ಆಗುತ್ತಿರುವುದೇಕೆ?
ತಾಯಿ ಉಷಾ ಹತ್ಯೆ ಮಾಡಿ, ಬಾತ್ ರೂಮಿನಲ್ಲಿ ಹೂತಿರೋದಾಗಿ ಹೇಳಿದ್ದಾನೆ. ಆತನ ಮಾಹಿತಿ ಮೇರೆಗೆ ಅಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಶವ ಸಿಕ್ಕಿದೆ. ಶವದ ಪರೀಕ್ಷೆ ನಡೆಯುತ್ತಿದ್ದು, ವರದಿಗಾಗಿ ಪೊಲೀಸರು ಕಾಯ್ತಿದ್ದಾರೆ. ಮಗನೇ ತಾಯಿ ಹತ್ಯೆ ಮಾಡಿದ ವಿಷ್ಯ ತಿಳಿದ ಸಂಬಂಧಿಕರು ದಂಗಾಗಿದ್ದಾರೆ.