ಮಂಗಳೂರು(ಅ.17): ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ನೇಮಕದ ಪಟ್ಟಿಹೊರಬಿದ್ದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತಗೊಂಡಿದೆ.

16 ಅಕಾಡೆಮಿಗಳ ಪೈಕಿ ಕರಾವಳಿಗೆ ಪ್ರಾಮುಖ್ಯ ಎನಿಸಿರುವ ಆರು ಅಕಾಡೆಮಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕದಲ್ಲಿ ಅನುಸರಿಸಿದ ಮಾನದಂಡ ಬಿಜೆಪಿ ಸಕ್ರಿಯ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಬೇಗುದಿ ಹೆಚ್ಚಲು ಕಾರಣವಾಗಿದೆ. ಈ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ನೇಮಕಗೊಂಡವರಲ್ಲಿ ಬಹುತೇಕ ಮಂದಿ ಬಲಪಂಥೀಯ ಹಾಗೂ ಸಂಘಪರಿವಾರಕ್ಕೆ ಸಮೀಪವಾಗಿರುವವರು ಎಂಬುದೇ ಬಿಜೆಪಿಗರ ಅತೃಪ್ತಿಗೆ ಕಾರಣ ಎಂದು ಹೇಳಲಾಗಿದೆ.

ಮಂಗಳೂರು: ಜಿಲ್ಲಾದ್ಯಂತ ಬಿಜೆಪಿ ಧ್ವಜ ರಹಿತ ಪಾದಯಾತ್ರೆ

ಅನುವಾದ ಮತ್ತು ವಿಚಾರಗೋಷ್ಠಿಗಳಿಗೆ ಆದ್ಯತೆ ನೀಡುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಜಕ್ಕಳ ಗಿರೀಶ್‌ ಭಟ್‌, ಕರಾವಳಿಯ ಯಕ್ಷಗಾನ ಕಲೆಗೆ ಸಂಬಂಧಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರಾಗಿ ಎಂ.ಎ.ಹೆಗಡೆ, ತುಳು ಭಾಷೆಯ ಅಭ್ಯುದಯಕ್ಕೆ ಶ್ರಮಿಸುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ದಯಾನಂದ ಕತ್ತಲ್‌ಸಾರ್‌, ಕೊಂಕಣಿ ಭಾಷಾ ಅಭಿವೃದ್ಧಿಯ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ.ಜಗದೀಶ್‌ ಪೈ, ಬ್ಯಾರಿ ಭಾಷಾ ಸಾಹಿತ್ಯ ಉನ್ನತಿಯ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಹೀಂ ಉಚ್ಚಿಲ, ಅರೆಭಾಷೆ ಮಾತನಾಡುವವರ ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೇನಾರಾಯಣ ಕಜೆಗದ್ದೆ ಇವರನ್ನು ನೇಮಕ ಮಾಡಲಾಗಿದೆ.

ಇವರಲ್ಲಿ ರಹೀಂ ಉಚ್ಚಿಲ ಅವರನ್ನು ಹೊರತುಪಡಿಸಿ ಬೇರೆ ಯಾರೂ ಬಿಜೆಪಿ ಕಾರ್ಯಕರ್ತರಲ್ಲ ಎಂಬುದೇ ಬಿಜೆಪಿಗರ ಅಸಂತೋಷಕ್ಕೆ ಕಾರಣವಾಗಿದೆ.

ಸರ್ಕಾರಿ ನೌಕರರಿಗೆ ಇಕ್ಕಟ್ಟು!

ಅಕಾಡೆಮಿಗಳಿಗೆ ನೇಮಕಗೊಂಡ ಅಧ್ಯಕ್ಷ ಹಾಗೂ ಸದಸ್ಯರ ಪೈಕಿ ಸರ್ಕಾರಿ ಉದ್ಯೋಗದಲ್ಲಿ ಇರುವವರೂ ಇದ್ದಾರೆ. ಇವರಿಗೆ ಅಕಾಡೆಮಿಯಲ್ಲಿ ಹೇಗೆ ಮುಂದುವರಿಯಬೇಕು ಎಂಬ ಜಿಜ್ಞಾಸೆ ತಲೆದೋರಿದೆ. ಹೀಗಾಗಿ ತಮ್ಮ ಇಲಾಖೆಯ ಮುಖ್ಯಸ್ಥರ ಅನುಮತಿ ಹಾಗೂ ತಾಂತ್ರಿಕ ತೊಡಕು ನಿವಾರಣೆಗೆ ಮುಂದಾಗಿದ್ದಾರೆ.

ನಾನು ಮಾಜಿ ಪ್ರಧಾನಿ ಎಂಬುದೇ ಜನರಿಗೆ ಮರೆತು ಹೋಗಿದೆ: ದೇವೇಗೌಡ ವಿಷಾದ

ತುಳು ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡ ದಯಾನಂದ ಕತ್ತಲ್‌ಸಾರ್‌ ಅವರು ಕೇಂದ್ರ ಸರ್ಕಾರದ ಉದ್ಯೋಗಿ. ಅಂಚೆ ಇಲಾಖೆಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭೂತಾರಾಧನೆಯಲ್ಲೂ ತೊಡಗಿಸಿಕೊಂಡಿರುವ ಇವರು ಜಾನಪದ ಸಾಹಿತ್ಯದಲ್ಲಿ ಸಿದ್ಧಹಸ್ತರು. ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅಧ್ಯಕ್ಷರಾಗಿದ್ದಾಗ ಮೂರು ವರ್ಷಕಾಲ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.

ಬಿಜೆಪಿಯಲ್ಲಿ ಕಿತ್ತಾಟ: ಯತ್ನಾಳ್ ಗಂಡಸ್ತನ ಪ್ರಶ್ನಿಸಿದ ಸ್ವಪಕ್ಷದ ನಾಯಕ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ್‌ ಭಟ್‌ ಇವರು ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತಿ ಕೂಡ ಹೌದು. ಇವರಲ್ಲದೆ ಕೆಲವು ಅಕಾಡೆಮಿಗಳ ಸದಸ್ಯರಾಗಿ ನೇಮಕಗೊಂಡವರೂ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಇದು ತಾಂತ್ರಿಕ ತೊಡಕಿಗೆ ಕಾರಣವಾಗಿದ್ದು, ಇದನ್ನು ಬಗೆಹರಿಸಿದ ಬಳಿಕವೇ ಅಧಿಕಾರ ಸ್ವೀಕಾರ ನಡೆಸಲು ಉದ್ದೇಶಿಸಿದ್ದಾರೆ.

ಶಿಫಾರಸು ಮಾಡಿದ್ದು ಯಾರು?

ಈ ಬಾರಿ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ಹೆಸರನ್ನು ಶಿಫಾರಸು ಮಾಡಿದ್ದು ಯಾರು? ಈ ಪ್ರಶ್ನೆಯನ್ನು ಕೇಳುತ್ತಿರುವುದು ಸ್ವತಃ ನೇಮಕಗೊಂಡವರೇ ಎನ್ನುವುದು ಗಮನಾರ್ಹ ಸಂಗತಿ.

ಇಲ್ಲಿ ನೇಮಕಗೊಂಡವರ ಪೈಕಿ ಹೆಚ್ಚಿನವರು ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲ. ಸಾಮಾನ್ಯವಾಗಿ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನಿಗಮ ಮಂಡಳಿಯಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನೇ ನೇಮಕ ಮಾಡುವುದು ಹೆಚ್ಚು. ಹಾಗಿರುವಾಗ ಇಲ್ಲಿ ಪಕ್ಷದಿಂದ ಪ್ರಸ್ತಾಪ ಕಳುಹಿಸಿದ ಬಗ್ಗೆ ಸ್ವತಃ ನೇಮಕಗೊಂಡವರಿಗೂ ಮಾಹಿತಿ ಇಲ್ಲ. ಹಾಗಾದರೆ, ಇವರೆಲ್ಲರ ನೇಮಕಕ್ಕೆ ಶಿಫಾರಸು ಮಾಡಿದ್ದು ಯಾರು ಎಂಬುದು ಕುತೂಹಲದ ಪ್ರಶ್ನೆ ಕೇಳಿಬರುತ್ತಿದೆ. ಲಭ್ಯ ಮಾಹಿತಿ ಪ್ರಕಾರ, ಕೆಲವೊಂದು ಹೆಸರು ಹೊರತುಪಡಿಸಿದರೆ, ಬೇರೆ ಎಲ್ಲ ಹೆಸರುಗಳ ಹಿಂದೆ ಸಂಘಪರಿವಾರದ ಶಿಫಾರಸು ಇದೆ ಎಂದು ಹೇಳಲಾಗಿದೆ. ಈ ಪಟ್ಟಿಗೆ ಬದಲಾವಣೆ ತರಲು ಕರಾವಳಿಯ ಬಿಜೆಪಿ ಮುಖಂಡರು ಚಿಂತಿಸುತ್ತಿದ್ದಾರೆ.

ಬಿಜೆಪಿ ಶಾಸಕ ಪಿ.ರಾಜೀವ್‌ಗೆ ಮಹತ್ವದ ಹುದ್ದೆ ನೀಡಿದ ರಾಜ್ಯ ಸರ್ಕಾರ...

ಹಿರಿಯರು ನನ್ನ ಮೇಲಿನ ನಂಬಿಕೆಯಿಂದ ಈ ಹುದ್ದೆಗೆ ನೇಮಕ ಮಾಡಿದ್ದಾರೆ. ಇಲಾಖೆಯ ಉನ್ನತಾಧಿಕಾರಿಗಳ ಅನುಮತಿಯೊಂದಿಗೆ ಕೆಲವೇ ದಿನಗಳಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ. ತುಳು ಅಕಾಡೆಮಿಯಲ್ಲಿ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಇರಾದೆ ಇದೆ ಎಂದು ತುಳು ಸಾಹಿತ್ಯ ಅಕಾಡೆಮಿ ನಿಯೋಜಿತ ಅಧ್ಯಕ್ಷ ದಯಾನಂದ್‌ ಕತ್ತಲ್‌ಸಾರ್‌ ಹೇಳಿದ್ದಾರೆ.

-ಆತ್ಮಭೂಷಣ್‌