ಸಂದೀಪ್ ವಾಗ್ಲೆ 

ಮಂಗಳೂರು [ನ.02]:  ಅಂದು ಜೀವನೋಪಾಯಕ್ಕಾಗಿ ಮನೆ ಮನೆಗೆ ಆಹಾರ ಪಾರ್ಸೆಲ್ ವಿತರಣೆ ಮಾಡುವ ಫುಡ್ ಡೆಲಿವರಿ ಗರ್ಲ್ ಈಗ ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಅಭ್ಯರ್ಥಿ! -ಹೌದು. ದುಡ್ಡಿನ ಮೇಲಾಟ, ಲಾಬಿಯೇ ಮುಖ್ಯವಾಗಿರುವ ಪಾಲಿಕೆ ಚುನಾವಣೆಗೆ ಜನಸಾಮಾನ್ಯರೂ ನಿಲ್ಲಬಹುದು ಎನ್ನುವುದನ್ನು ಮಂಗಳೂರಿನ ಮೇಘನಾದಾಸ್ ತೋರಿಸಿಕೊಟ್ಟಿದ್ದಾರೆ.

ಮೇಘನಾದಾಸ್‌ಗೆ ಕಾಂಗ್ರೆಸ್ ಪಕ್ಷದಿಂದ ಮಣ್ಣಗುಡ್ಡೆ ವಾರ್ಡ್‌ಗೆ ಟಿಕೆಟ್ ಸಿಕ್ಕಿದೆ. ಗುರುವಾರವೇ ಅವರು ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿ ಚುರುಕಾಗಿ ತೊಡಗಿಸಿ ಕೊಂಡಿದ್ದಾರೆ.

‘ನಾನು ಚಿಕ್ಕಂದಿನಿಂದಲೇ ಕೈಲಾದ ಸಮಾಜ ಸೇವೆ ಮಾಡುತ್ತಿದ್ದೇನೆ. ಕಳೆದ ಪ್ರವಾಹ ಸಂದರ್ಭ ಸಂತ್ರಸ್ತರಿಗೆ ಆದಷ್ಟು ಅಕ್ಕಿ, ದೇಣಿಗೆ ನೀಡುತ್ತಿದ್ದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಪರಿಚಯವಾಗಿ, ಸಮಾಜಸೇವೆಯ ಇಚ್ಛೆಯಿದ್ದರೆ ಪಕ್ಷ ಸೇರುವಂತೆ ಆಹ್ವಾನ ನೀಡಿದರು.’ ಎಂದು  ತಿಳಿಸಿದ್ದಾರೆ.

ಕೂಡಿಟ್ಟ ಹಣದಿಂದಲೇ ಪ್ರಚಾರ: ತಾನೇ ಕಷ್ಟಪಟ್ಟು ದುಡಿದ ಗಳಿಕೆಯಲ್ಲೇ ಅವರುಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಅಭ್ಯರ್ಥಿಗಳು ಗುಂಪು ಕಟ್ಟಿ ಅದ್ಧೂರಿಯಾಗಿ ಮನೆ ಮನೆಗೆ ತೆರಳುತ್ತಿದ್ದರೆ ಇವರು ತಮ್ಮದೇ 3-4 ಹಿತೈಷಿಗಳನ್ನು  ಮಾತ್ರ ಕಟ್ಟಿಕೊಂಡು ಜನರ ಮನವೊಲಿಸುತ್ತಿದ್ದಾರೆ. ‘ಕೆಲಸ ಮಾಡಿ ಉಳಿಸಿದ ಅಲ್ಪಸ್ವಲ್ಪ ಹಣದಲ್ಲೇ ಕ್ಯಾಂಪೇನ್ ಮಾಡುತ್ತಿದ್ದೇನೆ. ಊಟ- ತಿಂಡಿಗೆ ಆಗುವಷ್ಟು ಮಾತ್ರ  ದುಡ್ಡಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಮೂಡಿದೆ’ ಎನ್ನುತ್ತಾರೆ ಮೇಘನಾ.

ಆಹಾರ ಪಾರ್ಸೆಲ್‌ ತಲುಪಿಸಲು ಈಗ ಡೆಲಿವರಿ ಗರ್ಲ್ಸ್!...

ಬಿಎ ಪದವೀಧರೆಯಾಗಿರುವ ಮೇಘನಾದಾಸ್ ಮಂಗಳೂರಿ ನಲ್ಲಿ ಹುಡುಗಿಯರು ಮಾಡಲು ಕಷ್ಟಕರವಾದ ಫುಡ್ ಡೆಲಿವರಿ ಕೆಲಸಕ್ಕೆ ಸೇರಿ ಸೈ ಎನಿಸಿಕೊಂಡಿದ್ದರು.  ಕಳೆದ ಜೂನ್ 17 ರಂದು ‘ಆಹಾರ ಪಾರ್ಸೆಲ್ ತಲುಪಿಸಲು ಈಗ ಡೆಲಿವರಿ ಗರ್ಲ್’ ಎಂಬ ವಿಶೇಷ ವರದಿ ಪ್ರಕಟಿಸಿ ಅವರನ್ನು ಬೆಳಕಿಗೆ ತಂದಿತ್ತು.