Asianet Suvarna News Asianet Suvarna News

ಆಹಾರ ಪಾರ್ಸೆಲ್‌ ತಲುಪಿಸಲು ಈಗ ಡೆಲಿವರಿ ಗರ್ಲ್ಸ್!

ಆಹಾರ ಪಾರ್ಸೆಲ್‌ ತಲುಪಿಸಲು ಈಗ ಡೆಲಿವರಿ ಗರ್ಲ್ಸ್| ಮನೆಮನೆಗೆ ಆಹಾರ ತಲುಪಿಸುವ ಕಾಯಕದಲ್ಲಿ ಮೂವರು ಹುಡುಗಿಯರು| ಎಂಎನ್‌ಸಿ ಬಿಟ್ಟು ಫುಡ್‌ ಡೆಲಿವರಿ ಮಾಡುತ್ತಿದ್ದಾಳೆ ಮಂಗಳೂರಿನ ಮೇಘನಾ|

Girls to enter field of food delivery in Karnataka
Author
Bangalore, First Published Jun 17, 2019, 10:49 AM IST

ಸಂದೀಪ್‌ ವಾಗ್ಲೆ, ಕನ್ನಡಪ್ರಭ

ಮಂಗಳೂರು[ಜೂ.17]: ಝೊಮಾಟೊ, ಉಬರ್‌ ಈಟ್ಸ್‌, ಸ್ವಿಗ್ಗಿ ಮೂಲಕ ಆಹಾರ ಪಾರ್ಸೆಲ್‌ಗೆ ಆರ್ಡರ್‌ ಮಾಡ್ತೀರಿ. ಪ್ರತಿಸಲವೂ ಸಮವಸ್ತ್ರ ತೊಟ್ಟಹುಡುಗರೇ ಬೈಕಲ್ಲಿ ಬಂದು ಪಾರ್ಸೆಲ್‌ ಡೆಲಿವರಿ ಮಾಡ್ತಾರೆ. ಕ್ಷಿಪ್ರ ಓಡಾಟದ ಈ ಕೆಲಸಕ್ಕೆ ಹುಡುಗರೇ ಫಿಟ್‌ ಅಂದುಕೊಳ್ತೀರಿ. ಅದು ಸುಳ್ಳು ಎಂದು ಮಂಗಳೂರಿನ ಮೇಘನಾ ತೋರಿಸಿಕೊಡುತ್ತಿದ್ದಾರೆ.

ವಿಶೇಷ ಚೇತನ Zomato ಉದ್ಯೋಗಿಗೆ ಸಿಕ್ತು ಎಲೆಕ್ಟ್ರಿಕ್ ವಾಹನ!

ಮಂಗಳೂರಿನಲ್ಲಿ ಈ ಥರ ಆಹಾರ ಪಾರ್ಸೆಲ್‌ ಡೆಲಿವರಿ ಕೆಲಸಕ್ಕೆ ಮೂವರು ಯುವತಿಯರು ಸೇರಿದ್ದಾರೆ. ಅವರಲ್ಲೊಬ್ಬರು ಮೇಘನಾ. ಮಂಗಳೂರಿನ ಉರ್ವದವರು. ಯುವಕರಷ್ಟೇ ಉತ್ಸಾಹದಿಂದ ಕೆಲಸ ಮಾಡುತ್ತ, ಲವಲವಿಕೆಯಿಂದ ಕೆಲಸವನ್ನು ಆಸ್ವಾದಿಸುತ್ತ, ಸಹೋದ್ಯೋಗಿ ಯುವಕರಷ್ಟೆ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ದುಡಿಮೆಯ ಗಳಿಕೆ ಮಾಡುತ್ತ ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಡಿಗ್ರಿ, ಪಿಜಿ ಕಲಿತು ಸಣ್ಣ ಉದ್ಯೋಗ ಮಾಡುತ್ತಿರುವ ಬಹುತೇಕರಿಗಿಂತ ಹೆಚ್ಚಿನ ಗಳಿಕೆ ಮಾಡುತ್ತಿದ್ದಾರೆ.

ದುಬೈ ಕೆಲಸ ಬಿಟ್ಟು ಬಂದ್ರು:

ಮೇಘನಾ ಕಲಿತದ್ದು ಬಿಎ ಲಿಟರೇಚರ್‌. ಝೊಮಾಟೊಗೆ ಸೇರುವುದಕ್ಕೆ ಮೊದಲು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿ ಹ್ಯಾವ್ಲೆಟ್‌ ಪ್ಯಾಕಾರ್ಡ್‌ನಲ್ಲಿ ಟೆಕ್ನಿಕಲ್‌ ಸಪೋರ್ಟ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ದುಬೈಗೆ ತೆರಳಿ ಅಲ್ಲಿನ ಕಂಪೆನಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದರು. ಅದೆಲ್ಲ ಬಿಟ್ಟು ಮರಳಿ ಊರಿಗೆ ಬಂದು ಕೆಲಸ ಹುಡುಕಿದರೆ 10-15 ಸಾವಿರ ರು. ಸಂಬಳಕ್ಕೆ ಸೇರಬೇಕಿತ್ತು. ಅದು ಬೇಡವೆಂದು ಈಗ ಫುಡ್‌ ಡೆಲಿವರಿಗೆ ಇಳಿದಿದ್ದಾರೆ. ದಿನಕ್ಕೆ ಏನಿಲ್ಲವೆಂದರೂ 900 ರು.ನಿಂದ 1200 ರು.ವರೆಗೂ ದುಡಿಯುತ್ತಿದ್ದಾರೆ.

ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!

ಈ ಕೆಲಸ ಮೇಘನಾ ಅವರಿಗೆ ಬಹು ಇಷ್ಟವಾಗಿದೆಯಂತೆ. ಬೇಕಾದಾಗ ಕೆಲಸ, ಬೇಕಾದಾಗ ರಜೆ. ಆರ್ಡರ್‌ ಬಂದರೆ ಸ್ವೀಕರಿಸಬಹುದು, ಬೇಡವಾದರೆ ತಿರಸ್ಕರಿಸಬಹುದು. ಕಚೇರಿ ಕಿರುಕುಳವಿಲ್ಲ, ಬಾಸ್‌ಗಳ ದರ್ಬಾರಿಲ್ಲ. ತಿಂಗಳಾಂತ್ಯದ ಟಾರ್ಗೆಟ್‌ ಒತ್ತಡವಿಲ್ಲ. ಸಹೋದ್ಯೋಗಿಗಳೊಂದಿಗೆ ಕುಟುಂಬದಲ್ಲಿದ್ದಂತೆ ಖುಷಿಯಾಗಿದ್ದಾರೆ.

ಇನ್ನಷ್ಟು ಯುವತಿಯರು ಬರಲಿ:

ನಗರದ ಹೊಟೇಲೊಂದರ ಎದುರುಗಡೆ ಪಾರ್ಸೆಲ್‌ಗಾಗಿ ಕಾಯುತ್ತಿದ್ದ ಮೇಘನಾ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಈ ಕೆಲಸ ಮಾಡಲು ಮುಜುಗರ ಏಕೆ? ಕದ್ದು ತಿನ್ನುತ್ತಿಲ್ಲ. ದುಡಿದೇ ತಿನ್ನುತ್ತೇನಲ್ಲ. ಊಟ ಕೊಡೋದು ಶ್ರೇಷ್ಠ ಕೆಲಸ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಡಿಗ್ರಿ ಕಲಿತು ಈ ಕೆಲಸಕ್ಕೆ ಬರೋದರ ಬಗ್ಗೆ ಸ್ವಲ್ಪ ಹಿಂಜರಿಕೆಯಿದೆ. ಆದರೆ ಬೇರೆ ಕೆಲಸಕ್ಕಿಂತ ಇಲ್ಲಿ ಹೆಚ್ಚು ಗಳಿಕೆ ಮಾಡಲು ಸಾಧ್ಯವಿದೆ. ಇನ್ನಷ್ಟುಯುವತಿಯರು ಕೆಲಸಕ್ಕೆ ಸೇರಿ ದುಡಿಮೆ ಗಳಿಕೆಯನ್ನು ಸ್ವಂತಕ್ಕೆ, ಕುಟುಂಬಕ್ಕೆ ಬಳಕೆ ಮಾಡಬಹುದು. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಯ ಸಿಕ್ಕಾಗಲೆಲ್ಲ ಕೆಲಸ ಮಾಡಿ, ಮನೆಯ ಆದಾಯವನ್ನೂ ಹೆಚ್ಚಿಸಬಹುದು ಎಂದು ಕಿವಿಮಾತು ಹೇಳಿದರು.

Zomato ಫುಡ್ ಡೆಲಿವರಿ ಮಾಡುವ ವಿಶೇಷ ಚೇತನ: ವೀಡಿಯೋ ಫುಲ್ ವೈರಲ್

ಚಾಕಲೇಟ್‌, ಟಿಫ್ಸ್‌ ಕೊಡ್ತಾರೆ: ಡೆಲಿವರಿಗೆ ಮನೆಗಳಿಗೆ ಹೋಗುವಾಗ ಯುವತಿಯರು ಈ ಕೆಲಸ ಮಾಡುತ್ತಿರುವುದಕ್ಕೆ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಾರಂತೆ. ‘ಫುಡ್‌ ಡೆಲಿವರಿ ಮಾಡುವ ಮೊದಲ ಹುಡುಗಿಯಾ ನೀವು’ ಅಂತ ಕೇಳುತ್ತಾರೆ. ಕೆಲವರಂತೂ ಚಾಕಲೇಟ್‌, ಟಿಫ್ಸ್‌ ನೀಡಿ ಪ್ರೋತ್ಸಾಹಿಸುತ್ತಾರೆ’ ಎಂದು ಮೇಘನಾ ಖುಷಿಯಿಂದ ಹೇಳುತ್ತಾರೆ.

ಆಹಾರ ಡೆಲಿವರಿ ಮಾಡುವ ಯುವಕ, ಯುವತಿಯರಿಗೆ ಪ್ರತಿ ಡೆಲಿವರಿಗೆ 5 ಕಿ.ಮೀ. ವ್ಯಾಪ್ತಿಯೊಳಗೆ .25 ಸಿಗುತ್ತದೆ. 5 ಕಿ.ಮೀ.ಗಿಂತ ಹೆಚ್ಚಿದ್ದರೆ ಕಿ.ಮೀ.ಗೆ 10 ರು.ಗಳಂತೆ ಎಕ್ಸ್‌ಟ್ರಾ ಹಣ. ಇದನ್ನು ಹೊರತುಪಡಿಸಿ ದಿನಕ್ಕೆ 11 ಆರ್ಡರ್‌ ಅಟೆಂಡ್‌ ಮಾಡಿದರೆ .200, 16 ಮಾಡಿದರೆ .320, 20 ಮಾಡಿದರೆ .450, 24 ಮಾಡಿದರೆ .500ಗೂ ಅಧಿಕ ಹಣ ಖಾತೆಗೆ ನೇರ ಕಂಪೆನಿಯಿಂದ ಜಮೆಯಾಗುತ್ತದೆ. ಪ್ರತಿವಾರ ಇವರ ದುಡಿಮೆಯ ಹಣ ಕೈಸೇರುತ್ತದೆ.

ವಿದ್ಯಾವಂತರೇ ಹೆಚ್ಚು!

ಮಂಗಳೂರು ನಗರವೊಂದರಲ್ಲೇ ಮೂರು ಆಹಾರ ಡೆಲಿವರಿ ಕಂಪೆನಿಗಳಲ್ಲಿ ಸುಮಾರು 1500ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಶೇ.80ರಷ್ಟುಮಂದಿ ಡಿಗ್ರಿ, ಸ್ನಾತಕೋತ್ತರ ಪದವೀಧರರೇ ಇದ್ದಾರೆ. ವೈದ್ಯರು, ಎಂಜಿನಿಯರ್‌ಗಳೂ ಇದೇ ಕೆಲಸ ನೆಚ್ಚಿಕೊಂಡಿದ್ದಾರೆ ಎನ್ನುವುದು ಸಾಮಾಜಿಕ ವ್ಯವಸ್ಥೆಗೆ ಕೈಗನ್ನಡಿ ಹಿಡಿದಂತಿದೆ.

Follow Us:
Download App:
  • android
  • ios