ಮಂಗಳೂರು(ಅ.25): ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಿನವಿಡಿ ಮಳೆಯಾಗಿದೆ.

ಉಳ್ಳಾಲ ತೀರ ಪ್ರದೇಶದಲ್ಲಿ ಕಡಲು ಬಿರುಸಾಗಿದ್ದು, ಕಡಲ್ಕೊರೆತಕ್ಕೆ ಹಾಕಿರುವ ತಾತ್ಕಾಲಿಕ ತಡೆಗೋಡೆ ಸಮುದ್ರ ಪಾಲಾಗಿದೆ. ಕರಾವಳಿ ಪ್ರದೇಶದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ರಾಮದುರ್ಗ: ಹೊಂಡದಲ್ಲಿ ಈಜಲು ಹೋದ ಸ್ನೆಹಿತರಿಬ್ಬರ ದುರ್ಮರಣ

ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂದಿನ 2 ದಿನಗಳ ಕಾಲ 115.5 ಮಿ.ಮೀ. ನಿಂದ 204.4 ಮಿ.ಮೀ ಮಳೆ ಬೀಳುವ ಸಾಧ್ಯತೆಯನ್ನು ಅಂದಾಜಿಸಿದೆ. ಈ ಸಮಯದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಯಾವುದೇ ಕ್ಷಣದಲ್ಲೂ ಚಂಡಮಾರುತ:

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶವು ಪ್ರಸ್ತುತ ಪೂರ್ವ ಮಧ್ಯ ಭಾಗದಲ್ಲಿದ್ದು, ಶುಕ್ರವಾರದ ವೇಳೆಗೆ ಇದು ವಾಯುವ್ಯ ದಿಕ್ಕಿನಲ್ಲಿ ಚಲಿಸಲು ಆರಂಭಿಸಲಿದೆ. ಈ ಸಂದರ್ಭ ಸೈಕ್ಲೋನ್‌ ಮತ್ತಷ್ಟುತೀವ್ರಗೊಳ್ಳಲಿದ್ದು, ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಈ ಸಂಭಾವ್ಯ ಚಂಡ ಮಾರುತಕ್ಕೆ ‘ಕ್ಯಾರ್‌’ ಎಂದು ಹೆಸರಿಸಲಾಗಿದೆ. ಆದ್ದರಿಂದ ಮುಂದಿನ 2 ದಿನ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಉಳ್ಳಾಲದಲ್ಲಿ ಕಡಲ್ಕೊರೆತ ಭೀತಿ:

ವಾಯುಭಾರ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮಳೆ ಸುರಿಯತೊಡಗಿತ್ತು. ಸಂಜೆವರೆಗೂ ಬಿಡದೇ ನಿರಂತರವಾಗಿ ಮಳೆಯಾಗಿದೆ. ಆದರೆ ಭಾರೀ ಮಳೆಯಾಗದೆ ಇದ್ದುದರಿಂದ ಹಾನಿ ವರದಿಯಾಗಿಲ್ಲ. ಆದರೆ ಉಳ್ಳಾಲದ ಕೈಕೋ, ಕಿಲಿರಿಯಾನಗರ, ಮೊಗವೀರಪಟ್ಣ ಸಮೀಪ ಕಡಲು ಬಿರುಸಾಗಿರುವುದರಿಂದ ಕಡಲ್ಕೊರೆತದ ಭೀತಿ ಆವರಿಸಿದೆ.

ಮಳೆ ವಿವರ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಸರಾಸರಿ 59.1 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ ಅತಿ ಹೆಚ್ಚು 81.8 ಮಿ.ಮೀ. ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ 56.5 ಮಿ.ಮೀ., ಮಂಗಳೂರಿನಲ್ಲಿ 63.6 ಮಿ.ಮೀ., ಪುತ್ತೂರಿನಲ್ಲಿ 63.4 ಮಿ.ಮೀ., ಸುಳ್ಯದಲ್ಲಿ 30.4 ಮಿ.ಮೀ. ಮಳೆ ದಾಖಲಾಗಿದೆ.

ಹುನಗುಂದ: ಸಂಗಮನಾಥನ ದೇವಾಲಯ ಪ್ರವಾಹ ನೀರಿನಿಂದ ಮುಕ್ತ