ರಾಮದುರ್ಗ[ಅ.25]: ಸ್ನಾನಕ್ಕೆಂದು ತೆರಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಹತ್ತಿರದ ಶಬರಿಕೊಳ್ಳದ ಜಲಪಾತದ ಮೇಲಿರುವ ಹೊಂಡದಲ್ಲಿ ಗುರುವಾರ ನಡೆದಿದೆ. ಮನಿಹಾಳ-ಸುರೇಬಾನ ಗ್ರಾಮದ ಸಾಗರ ಉರ್ಫ ಹರ್ಷವರ್ದನ ದೇವರಡ್ಡಿ ಅಪ್ಪಣ್ಣವರ (20) ಹಾಗೂ ವಿನಾಯಕ ಶಿವಾನಂದ ಶಿರೂರ (20) ಮೃತಪಟ್ಟ ಯುವಕರು. 

ಇನ್ನೊಬ್ಬ ವಿದ್ಯಾರ್ಥಿ ಅನಾರೋಗ್ಯದ ಹಿನ್ನೆಲೆಯಲ್ಲಿ ಈಜಲು ಹೋಗದೆ ಹೊಂಡದ ಬದಿಯಲ್ಲಿ ಕುಳಿತಿದ್ದ. ಮೃತ ವಿದ್ಯಾರ್ಥಿಗಳು ಸ್ಥಳೀಯ ಎಸ್‌ಎಫ್‌ಎಸ್‌ ಶಿಕ್ಷಣ ಸಂಸ್ಥೆಯ ಎಸ್.ಎ.ಸಾರಂಗಮಠ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿನಾಯಕ ಬಿಕಾಂ ಎರಡನೇ ವರ್ಷ ಹಾಗೂ ಸಾಗರ ಅಪ್ಪಣ್ಣವರ ಬಿಎ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುವಾರ ಬೆಳಗ್ಗೆ 11  ಗಂಟೆಗೆ ಸ್ನಾನ ಮಾಡಲೆಂದು ಮೂವರು ಸ್ನೇಹಿತರು ಸುರೇಬಾನ ಹತ್ತಿರದ ಶಬರಿಕೊಳ್ಳದ ಜಲಪಾದ ಮೇಲಿರುವ ಹೊಂಡಕ್ಕೆ ಹೋಗಿದ್ದಾರೆ. ನೀರಿನಲ್ಲಿ ಇಳಿದ ಇಬ್ಬರು ನೀರುಪಾಲಾಗಿದ್ದಾರೆ. ಅದೃಷ್ಟವಶಾತ್ ಓರ್ವ ಯುವಕ ಅನಾರೋಗ್ಯಕಾರಣ ಸ್ನಾನಕ್ಕೆ ಹೋಗದೇ ದಡದಲ್ಲಿಯೇ ಕುಳಿತಿದ್ದಾನೆ. 

ಮೂವರು ವಿದ್ಯಾರ್ಥಿಗಳು ಕಳೆದ ಎರಡು ದಿನಗಳ ಹಿಂದೆಯೇ ಪರೀಕ್ಷಾ ಶುಲ್ಕ ಕಟ್ಟಿದ್ದರು. ಜತೆಗೆ ಮನೆಯಲ್ಲಿ ಓದಿಕೊಳ್ಳುವುದಾಗಿ ಹೇಳಿ ಈಜಾಡಲು ಈ  ಹೊಂಡಕ್ಕೆ ಬಂದಿದ್ದರು ಎಂದು ಹೇಳಲಾಗಿದೆ. ಘಟನೆಯ ವಿಷಯ ತಿಳಿದ ರಾಮದುರ್ಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗುಡ್ಡದ ಹೊಂಡದ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. 

ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ ಈ ಘಟನೆಯ ವಿಚಾರ ತಿಳಿದು ತಕ್ಷಣವೇ ಶಬರಿ ದೇವಸ್ಥಾನಕ್ಕೆ ಆಗಮಿಸಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಕುರಿತು ರಾಮದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.