ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ಶಾಲಾ ಬಸ್ಸಿನ ಮೇಲೆ ಉರುಳಿಬಿದ್ದಿದೆ. ಈ ಭೀಕರ ದುರಂತದಲ್ಲಿ 6 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ.
ಬಂಟ್ವಾಳ, ದಕ್ಷಿಣ ಕನ್ನಡ (ಜು.22): ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಭೀಕರ ದುರಂತ ನಡೆದಿದೆ. ಶಾಲೆ ಮುಗಿಸಿ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ಶಾಲಾ ಬಸ್ಸಿನ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಪರಿಣಾಮವಾಗಿ 6 ವರ್ಷದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದರೆ, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ಬರಿಮಾರು ಸಮೀಪದ ಕಲ್ಲೆಟ್ಟಿ ಬಳಿ ಮರವೊಂದು ರಸ್ತೆಗೆ ವಾಲಿತ್ತು. ಸರಿ ಅದೇ ಸಮಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಆ ಸ್ಥಳದಲ್ಲಿ ಹಾದುಹೋಗುತ್ತಿದ್ದಾಗ ದಿಢೀರನೆ ಬೃಹತ್ ಗಾತ್ರದ ಮರ ಬಸ್ಸಿನ ಮೇಲೆಯೇ ಉರುಳಿ ಬಿದ್ದಿದೆ.
ಸ್ಥಳೀಯರ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ
ಅಪಘಾತ ಸಂಭವಿಸುತ್ತಿದ್ದಂತೆ ಸದ್ದು ಕೇಳಿ ಧಾವಿಸಿ ಬಂದ ಸ್ಥಳೀಯರು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದಿದ್ದಾರೆ. ಬಸ್‌ನೊಳಗೆ ಸಿಲುಕಿ ಚೀರಾಡುತ್ತಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಹಲವು ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಹತ್ತಿರದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಮರದ ಬೇರು ಸಡಿಲಗೊಂಡು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


