ಗೆಳತಿಯೊಂದಿಗೆ ಮಾತಾಡಿದ್ದಕ್ಕೆ 19 ವರ್ಷದ ಸ್ನೇಹಿತನನ್ನು ಕೊಂದ ಯುವಕ
Crime News: ತನ್ನ ಗೆಳತಿಗೆ ಮೇಸೆಜ್ ಮಾಡಿದ್ದಕ್ಕಾಗಿ 19 ವರ್ಷದ ಸ್ನೇಹಿತನನ್ನು ಯುವಕ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದದಲ್ಲಿ ನಡೆದಿದೆ
ಆಂಧ್ರಪ್ರದೇಶ (ಅ. 28): ತನ್ನ ಗೆಳತಿಗೆ ಮೇಸೆಜ್ ಮಾಡಿದ್ದಕ್ಕಾಗಿ 19 ವರ್ಷದ ಸ್ನೇಹಿತನನ್ನು ಯುವಕ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದಿದೆ. ಅಕ್ಟೋಬರ್ 25 ರಂದು ದ್ವಾರಪುಡಿ ಪ್ರದೇಶದ ರೈಲ್ವೆ ಹಳಿ ಬಳಿ ವಿಜಯನಗರದ ಕೆಎಲ್ ಪುರಂ ನಿವಾಸಿ ತೊರ್ತು ನವೀನ್ ಶವ ಪತ್ತೆಯಾಗಿತ್ತು. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್‌ನ ಸ್ನೇಹಿತ ಹಾಗೂ ನೆರೆಮನೆಯವನಾದ ಬೊಡ್ಡೂರು ಬ್ರಹ್ಮಾಜಿ ಅಲಿಯಾಸ್ ಬಾಲು (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲು ಮತ್ತು ನವೀನ್ ಉತ್ತಮ ಸ್ನೇಹಿತರಾಗಿದ್ದರು. ಆದರೆ ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ನವೀನ್‌ನನ್ನು ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೀನ್ ಕೊಲೆಯಾಗಿರುವುದು ದೃಢ: ದೀಪಾವಳಿಯ ದಿನ (ಅಕ್ಟೋಬರ್ 24) ನವೀನ್ ಪಟಾಕಿಗಳೊಂದಿಗೆ ತನ್ನ ಮನೆಯಿಂದ ಹೊರಗೆ ಹೋಗಿದ್ದ, ಆದರೆ ಹಿಂತಿರುಗಿರಲಿಲ್ಲ. ನವೀನ್‌ನ ಕುಟುಂಬಸ್ಥರು ಮತ್ತು ಸಂಬಂಧಿಕರು ತೀವ್ರ ಹುಡುಕಾಟ ನಡೆಸಿದಾಗ ರೈಲು ಹಳಿಗಳ ಬಳಿ ನವೀನ್ ಶವವಾಗಿ ಪತ್ತೆಯಾಗಿದ್ದಾನೆ. ನಂತರ ನವೀನ್‌ನ ದೇಹದ ಮೇಲಿದ್ದ ಗಾಯಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ವಿಚಾರಣೆ ಬಳಿಕ ನವೀನ್ ಕೊಲೆಯಾಗಿರುವುದು ದೃಢಪಟ್ಟಿದೆ. ರೈಲ್ವೇ ಹಳಿಗಳ ಬಳಿ ನಡೆದುಕೊಂಡು ಹೋಗುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ರೈಲಿಗೆ ಡಿಕ್ಕಿ ಹೊಡೆದು ನವೀನ್ ನಾಪತ್ತೆಯಾಗಿದ್ದಾನೆ ಎಂದು ನವೀನ್‌ನ ಸ್ನೇಹಿತ ಬಾಲು ಕೆಲವರಿಗೆ ತಿಳಿಸಿದ್ದಾಗಿ ಪೊಲೀಸರು ತನಿಖೆಯ ಸಮಯದಲ್ಲಿ ಕಂಡುಕೊಂಡಿದ್ದಾರೆ.
ಆರೋಪಿ ಗೆಳತಿಗೆ ಮೆಸೇಜ್: ಕೊಲೆಯಾದ ಮರುದಿನ ಕೆಎಲ್ ಪುರಂನಲ್ಲಿ ಬಾಲು ನಾಪತ್ತೆಯಾಗಿದ್ದನ್ನು ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು. ಈ ಬೆನ್ನಲ್ಲೇ ಆರೋಪಿ ಬಾಲುನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಬಾಲು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನವೀನ್ ಕೆಎಲ್ ಪುರಂ ಮೂಲದ ತನ್ನ ಗೆಳತಿಗೆ ವಾಟ್ಸಾಪ್ ಮೂಲಕ ಕರೆ ಮಾಡಿ ಸಂದೇಶ ಕಳುಹಿಸುತ್ತಿದ್ದ ಎಂದು ವಿಚಾರಣೆ ವೇಳೆ ಬಾಲು ಬಹಿರಂಗಪಡಿಸಿದ್ದಾನೆ.
ದೀಪಾವಳಿ ಜೂಜು ಕೊಲೆಯಲ್ಲಿ ಅಂತ್ಯ: ಹಣದ ವಿಚಾರಕ್ಕೆ ಗೆಳೆಯನನ್ನೇ ಕೊಂದ ಸ್ನೇಹಿತರು
ಆಕೆ ನವೀನ್‌ನನ್ನು ತನ್ನ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಿರ್ಬಂಧಿಸಿದ್ದರೂ, ನವೀನ್ ಆಕೆಗೆ ಕರೆ ಮಾಡಿ ಹೊಸ ಮೊಬೈಲ್ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದರಿಂದ ಅವಳು ಅಸಮಾಧಾನಗೊಂಡಿದ್ದಳು ಎಂದು ಆರೋಪಿ ಹೇಳಿದ್ದಾನೆ. ಅಲ್ಲದೇ ಈ ಸಂಬಂಧ ಹಲವು ಬಾರಿ ಎಚ್ಚರಿಸಿದ್ದರೂ ನವೀನ್ ತನ್ನ ಗೆಳತಿಗೆ ಸಂದೇಶಗಳನ್ನು ಕಳುಹಿಸುವುದನ್ನು ಮತ್ತು ಕರೆಗಳನ್ನು ಮಾಡುವುದನ್ನು ಮುಂದುವರೆಸಿದ್ದ.
ಹೀಗಾಗಿ ಸ್ನೇಹಿತ ನವೀನ್ ಮೇಲೆ ಬಾಲು ಕೋಪಗೊಂಡಿದ್ದ. ಆದರೆ ನವೀನ್ ಮಾತ್ರ ಪದೇ ಪದೇ ವಿವಿಧ ನಂಬರ್‌ಗಳಿಂದ ಕರೆ ಮಾಡುವುದನ್ನು ಮುಂದುವರೆಸಿದ್ದ. ನವೀನ್ ವರ್ತನೆಯಿಂದ ಬೇಸತ್ತು ಬಾಲು ನವೀನನ್ನು ಮುಗಿಸಲು ನಿರ್ಧರಿಸಿದ್ದ. ದೀಪಾವಳಿ ದಿನದಂದು ನವೀನ್ ಮತ್ತು ಬಾಲು ಮಧ್ಯಾಹ್ನ ಮದ್ಯ ಸೇವಿಸಿ ರಾತ್ರಿ ದ್ವಾರಪುಡಿ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ತನ್ನ ಗೆಳತಿಗೆ ನವೀನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಬಾಲು ಮತ್ತು ನವೀನ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಬಾಲು ನವೀನ್‌ನನ್ನು ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.