ಭಟ್ಕಳ ತಾಲೂಕಿನ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ, ಕೋರಿಯರ್‌ ನೀಡುವ ನೆಪದಲ್ಲಿ ಬಂದ ಇಬ್ಬರು ಕಳ್ಳರು 70 ವರ್ಷದ ವೃದ್ಧೆಯೊಬ್ಬರಿಗೆ ನೀರು ಕೇಳಿ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡ (ಡಿ.13) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಕೋರಿಯರ್‌ ನೀಡುವ ನೆಪದಲ್ಲಿ ಬಂದ ಇಬ್ಬರು ಕಳ್ಳರು 70 ವರ್ಷದ ಅಜ್ಜಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಕಿನ್ನರಿ ಸರವನ್ನು ಕಸಿದು ಪರಾರಿಯಾದ ಘಟನೆ ನಡೆದಿದೆ.

ಕೋರಿಯರ್ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಕಸಿದ ಕಳ್ಳರು:

ಬೆಳಕೆ ಗರಡಿ ಹಿತ್ತಲು ನಿವಾಸಿ ಹೊನ್ನಮ್ಮ ಮಾದೇವ ನಾಯ್ಕ (70) ಅವರು ಮನೆಯ ಸಮೀಪ ರಸ್ತೆಯ ಬಳಿಯಿದ್ದ ಸಂದರ್ಭ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಬೇರೊಬ್ಬರ ಹೆಸರನ್ನು ಹೇಳಿ ಕೋರಿಯರ್‌ ಇದೆ ಎಂದು ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಜಿ, 'ಇಲ್ಲಿ ಅಂತಹ ಯಾರೂ ವಾಸವಿಲ್ಲ' ಎಂದು ತಿಳಿಸಿದರೂ, ಕಳ್ಳರು ತಾವು ಇಲ್ಲಿಯ ಸ್ಥಳೀಯರು ಹಾಗೂ ಕೋರಿಯರ್‌ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಈ ವೇಳೆ ಕಳ್ಳರು ಅಜ್ಜಿಯ ಬಳಿ ನೀರು ಕೇಳಿದ್ದಾರೆ. ಅಜ್ಜಿ ಮನೆಯಿಂದ ನೀರು ತಂದು ಕೊಟ್ಟದ್ದನ್ನು ಬೈಕ್‌ನ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಕುಡಿದ ಬಳಿಕ ಮತ್ತೊಮ್ಮೆ ನೀರು ತರಲು ಕೇಳಿದ್ದಾನೆ. ಅಜ್ಜಿ ಮತ್ತೆ ನೀರು ತರಲು ತಿರುಗಿದ ಕ್ಷಣದಲ್ಲೇ, ಹಿಂಬದಿ ಕುಳಿತಿದ್ದ ವ್ಯಕ್ತಿ ಅಜ್ಜಿ ಧರಿಸಿದ್ದ ಚಿನ್ನದ ಸರವನ್ನು ಕಸಿದಿದ್ದು, ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಅಜ್ಜಿ ಕೂಗಿದ ಶಬ್ದ ಕೇಳಿ ಅಕ್ಕಪಕ್ಕದವರು ಕಳ್ಳರನ್ನು ಹಿಂಬಾಲಿಸಿದರೂ, ಅವರು ಶಿರೂರು ಟೋಲ್‌ಗೇಟ್‌ ಮಾರ್ಗವಾಗಿ ತಪ್ಪಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಮಹೇಶ್, ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ. ಘಟನೆ ಬಗ್ಗೆ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌