*   ಪರಿಚಿತನಿಂದಲೇ ಕೃತ್ಯ*  ಯಲಹಂಕ ಠಾಣಾ ವ್ಯಾಪ್ತಿ ನಡೆದ ಘಟನೆ*  ಕಟ್ಟಿಗೇನಹಳ್ಳಿ ನಿವಾಸಿ ಸಿದ್ದಮ್ಮ ಕೊಲೆಯಾದ ಮಹಿಳೆ 

ಬೆಂಗಳೂರು(ಜ.22):  ಬಡ್ಡಿ ಕೇಳಲು ಬಂದ ಪರಿಚಿತ ಮಹಿಳೆಯನ್ನು(Woman) ಕೊಂದು ಬಳಿಕ ಚಿನ್ನಾಭರಣ ದೋಚಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಟ್ಟಿಗೇನಹಳ್ಳಿ ನಿವಾಸಿ ಸಿದ್ದಮ್ಮ(55) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತರ ಪರಿಚಿತ ನಾಟಿ ವೈದ್ಯನ ಪತ್ತೆಗೆ ಮೂರು ವಿಶೇಷ ತಂಡಗಳನ್ನು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ರಚಿಸಿದ್ದಾರೆ. ಮನೆ ಹತ್ತಿರದ ನಾಟಿ ವೈದ್ಯನ ಮನೆಗೆ ಗುರುವಾರ ಬೆಳಗ್ಗೆ ಸಿದ್ದಮ್ಮ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದಮ್ಮ ಅವರ ಪತಿ ಮೃತರಾಗಿದ್ದು, ತಮ್ಮ ಮಕ್ಕಳ ಜತೆ ಅವರು ನೆಲೆಸಿದ್ದರು. ಬಿಹಾರ(Bihar) ಮೂಲದ ಸಲೀಂ, ಹಲವು ವರ್ಷಗಳಿಂದ ಕಟ್ಟಿಗೇಹನಳ್ಳಿಯಲ್ಲೇ ತನ್ನ ಪತ್ನಿ ಜತೆ ವಾಸವಾಗಿದ್ದ. ಗಾರೆ ಕೆಲಸ ಮಾಡುತ್ತಿದ್ದ ಆತ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಗೆ ನಾಟಿ ಔಷಧಿಯನ್ನು ಕೊಡುತ್ತಿದ್ದ. ಅಂತೆಯೇ ಮಧುಮೇಹದಿಂದ ಬಳಲುತ್ತಿದ್ದ ಸಿದ್ದಮ್ಮ ಅವರು, ಐದು ತಿಂಗಳಿಂದ ಸಲೀಂ ಬಳಿ ಔಷಧಿ ಪಡೆಯುತ್ತಿದ್ದರು. ಅದೇ ಸ್ನೇಹ, ವಿಶ್ವಾಸದಲ್ಲಿ ಸಿದ್ದಮ್ಮ ಅವರಿಂದ ಆರೋಪಿ ಸಾಲ ಪಡೆದಿದ್ದ.

Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

ಆದರೆ ಸಕಾಲಕ್ಕೆ ಬಡ್ಡಿ(Interest) ಪಾವತಿಸದ ಕಾರಣಕ್ಕೆ ಹಣ ಕೇಳುವ ಸಲುವಾಗಿ ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಸಲೀಂ ಮನೆಗೆ ಸಿದ್ದಮ್ಮ ತೆರಳಿದ್ದಾರೆ. ಆ ವೇಳೆ ಸಲೀಂ ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದಳು. ಹೀಗಾಗಿ ಮನೆಯಲ್ಲಿ ಒಬ್ಬನೇ ಇದ್ದ ಆರೋಪಿ, ಸಿದ್ದಮ್ಮ ಅವರನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಅವರು ಧರಿಸಿದ್ದ ಓಲೆಗಳು ಹಾಗೂ ಚಿನ್ನದ ಸರ ದೋಚಿ ಕಾಲ್ಕಿತ್ತಿದ್ದಾನೆ. ಕೆಲಸ ಮುಗಿಸಿಕೊಂಡು ಸಂಜೆ ಆರೋಪಿ ಪತ್ನಿ ಶಾಹೀನಾ ಬೇಗಂ ಮನೆಗೆ ಬಂದಾಗ ಹತ್ಯೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಲೀಂ ಅವರಿಗೆ ಸಿದ್ದಮ್ಮ ಎಷ್ಟು ಸಾಲ(Loan) ಕೊಟ್ಟಿದ್ದರು ಎಂಬುದು ಮೃತರ ಕುಟುಂಬದವರಿಗೂ ಗೊತ್ತಿಲ್ಲ. ಹೀಗಾಗಿ ಆರೋಪಿ ಬಂಧನ ಬಳಿಕ ಹಣಕಾಸು ವಿಚಾರದ ಸ್ಪಷ್ಟಮಾಹಿತಿ ಸಿಗಲಿದೆ. ಸಲೀಂ ಪತ್ನಿ ಸ್ವಂತ ಊರು ರಾಯಚೂರು(Raichur) ಆಗಿದ್ದು, ತನ್ನ ತವರು ಮನೆಯಲ್ಲೇ ಮಗಳನ್ನು ಬಿಟ್ಟಿದ್ದಳು. ಕೃತ್ಯ ಎಸಗಿ ಬಳಿಕ ತಪ್ಪಿಸಿಕೊಂಡಿರುವ ಆರೋಪಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದುವಾಡ: ಯುವಕನ ಕತ್ತು ಸೀಳಿ ಹತ್ಯೆ

ದಾವಣಗೆರೆ(Davanagere): ಮದುವೆಗೆ ಬಟ್ಟೆ ಖರೀದಿಗೆಂದು ದಾವಣಗೆರೆಗೆ ಬೈಕ್‌ನಲ್ಲಿ ಬಂದಿದ್ದ ಯುವಕನ ಕುತ್ತಿಗೆಯನ್ನು ಬರ್ಬರವಾಗಿ ಕೊಯ್ದು ಹತ್ಯೆ(Murder) ಮಾಡಿದ್ದು, ಆತನ ಜೊತೆಗಿದ್ದ ವ್ಯಕ್ತಿ ಹಾಗೂ ಬೈಕ್‌ ನಾಪತ್ತೆಯಾದ ಘಟನೆ ನಗರದ ಹೊರವಲಯದ ಕುಂದುವಾಡ ಕೆರೆ ಸಮೀಪದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಹರಿಹರದ ವಿದ್ಯಾನಗರ ವಾಸಿಯಾದ ಮಹಮ್ಮದ್‌ ಅಲ್ತಾಫ್‌ ಬರ್ಬರವಾಗಿ ಹತ್ಯೆಯಾಗಿರುವ ಯುವಕ. ತನ್ನ ಊರಿನಿಂದ ಸಂಬಂಧಿ ಇಬ್ರಾಹಿಂ ಜೊತೆಗೆ ಮದುವೆ ಬಟ್ಟೆಖರೀದಿಗೆಂದು ಜ.18ರಂದು ಸಂಜೆ 6ರ ವೇಳೆ ಮಹಮ್ಮದ್‌ ಅಲ್ತಾಫ್‌ ಹಾಗೂ ಇಬ್ರಾಹಿಂ ಇಬ್ಬರೂ ದಾವಣಗೆರೆಗೆ ಬಂದಿದ್ದರು.

ದೂರು ದಾಖಲು:

ಬಟ್ಟೆ ಖರೀದಿಗೆ ಹೋದ ಮಹಮ್ಮದ್‌ ಅಲ್ತಾಫ್‌ ಹಾಗೂ ಇಬ್ರಾಹಿಂ ರಾತ್ರಿಯಾದರೂ ಮನೆಗೆ ಬರದ ಕಾರಣ ತಂದೆ ಎಂ.ಮೆಹಬೂಬ್‌ ಪಾಷಾ ತಕ್ಷಣವೇ ಅಲ್ತಾಫ್‌ ಹಾಗೂ ಇಬ್ರಾಹಿಂ ಮೊಬೈಲ್‌ಗೆ(Mobile) ಕರೆ ಮಾಡಿದ್ದಾರೆ. ಆದರೆ, ಮೊಬೈಲ್‌ಗಳು ರಿಂಗ್‌ ಆದರೂ ಸಹ ಕರೆಯನ್ನು ಸ್ವೀಕರಿಸಲಿಲ್ಲ. ಎಲ್ಲಾ ಕಡೆಗೆ ಹುಡುಕಿದರೂ ಇಬ್ಬರ ಸುಳಿವು ಸಿಗಲಿಲ್ಲ. ಈ ಬಗ್ಗೆ ಜ.19ರಂದು ಹರಿಹರ ನಗರ ಪೊಲೀಸ್‌(Police) ಠಾಣೆಗೆ ತಮ್ಮ ಮಗ ಮಹಮ್ಮದ್‌ ಅಲ್ತಾಫ್‌ ಹಾಗೂ ಅಕ್ಕನ ಮಗ ಇಬ್ರಾಹಿಂ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.

Murder Case: ಹಳೆ ವೈಷಮ್ಯಕ್ಕೆ ಯುವಕನ ಬಲಿ: ನರ​ಗುಂದ​ದಲ್ಲಿ ಬಿಗು​ವಿನ ವಾತಾ​ವ​ರಣ

ದಾವಣಗೆರೆ ನಗರದ ಪೊಲೀಸರು ಬುಧವಾರ ಸಂಜೆ 4.45ರ ವೇಳೆ ಕರೆ ಮಾಡಿ, ಕುಂದುವಾಡ ಕೆರೆಯ ಸಮೀಪದ ಮಹಾಲಕ್ಷ್ಮಿ ಲೇಔಟ್‌ ಬಳಿ ಬರಲು ಸೂಚಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಮೆಹಬೂಬ್‌ ಪಾಶಾ ಅದು ತಮ್ಮ ಮಗ ಮೊಹಮ್ಮದ್‌ ಅಲ್ತಾಫ್‌ನ ಶವವೆಂಬುದನ್ನು ಗುರುತಿಸಿದ್ದಾರೆ. ಅಲ್ತಾಫ್‌ನ ಕುತ್ತಿಗೆಯನ್ನು ಬರ್ಬರವಾಗಿ ಕೊಯ್ದು, ಕೊಲೆ ಮಾಡಲಾಗಿತ್ತು. ಅಲ್ತಾಫ್‌ನ ಜೊತೆಗಿದ್ದ ಸಂಬಂಧಿ ಇಬ್ರಾಹಿಂ ಆಗಲೀ, ಇಬ್ಬರೂ ಬಂದಿದ್ದ ಬೈಕ್‌ ಆಗಲಿ ಕಾಣಲಿಲ್ಲ. ಯಾರೋ ದುಷ್ಕರ್ಮಿಗಳು ಯಾವುದೋ ವಿಚಾರಕ್ಕೆ ಅಲ್ತಾಫ್‌ನನ್ನು ಘಟನಾ ಸ್ಥಳದಲ್ಲಿ ಅಥವಾ ಬೇರೆ ಎಲ್ಲಿಯೋ ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ತಾಫ್‌ನ ತಂದೆ ಮೆಹಬೂಬ್‌ ಪಾಷ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಎಸ್ಪಿ ಭೇಟಿ:

ಅಲ್ತಾಫ್‌ ಶವ ಸಿಕ್ಕ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಟಸಿ.ಬಿ.ರಿಷ್ಯಂತ್‌, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ತನಿಖಾಧಿಕಾರಿ ಬಿ.ಎಸ್‌.ಬಸವರಾಜ ಭೇಟಿ ನೀಡಿ, ಪರಿಶೀಲಿಸಿದರು. ಕೊಲೆ ಆರೋಪಿಗಳ ಪತ್ತೆ, ಬಂಧನಕ್ಕಾಗಿ ಡಿವೈಎಸ್ಪಿ ಎಚ್‌.ಗುರುಬಸವರಾಜ ನೇತೃತ್ವದಲ್ಲಿ ಪಿಎಸ್‌ಐ ಪಿ.ಪ್ರಸಾದ್‌, ಜಿ.ಎಂ.ರೇಣುಕಾ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಿ, ಹತ್ಯೆ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.