ಚೆನ್ನೈ: ಆನ್‌ಲೈನ್ ರಮ್ಮಿಯಲ್ಲಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ಮಹಿಳೆ ಆತ್ಮಹತ್ಯೆ
ಲಾಕ್‌ಡೌನ್ ಸಮಯದಲ್ಲಿ ಭವಾನಿ ಆನ್‌ಲೈನ್‌ನಲ್ಲಿ ಜೂಜಾಡಲು ಪ್ರಾರಂಭಿಸಿದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಚೆನ್ನೈ (ಜೂ. 07): 29 ವರ್ಷದ ಮಹಿಳೆಯೊಬ್ಬರು ತನ್ನ ಸಹೋದರಿಯರಿಂದ ಸಾಲ ಪಡೆದ ₹3 ಲಕ್ಷ ಮತ್ತು ₹ 7.5 ಲಕ್ಷ ಮೌಲ್ಯದ 20 ಪವನ್ ಚಿನ್ನಾಭರಣಗಳನ್ನು ಆನ್‌ಲೈನ್ ರಮ್ಮಿ ಗೇಮ್‌ನಲ್ಲಿ ಕಳೆದುಕೊಂಡ ನಂತರ ಭಾನುವಾರ ಸಂಜೆ ಮನಾಲಿ ಹೊಸ ಪಟ್ಟಣದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ ಭವಾನಿ, ಬಿಎಸ್ಸಿ ಗಣಿತ ವಿಭಾಗದ ಪದವಿಧರೆ ಕಂದಂಚವಾಡಿಯ ಖಾಸಗಿ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಭಕ್ಕಿಯರಾಜ್ (32) ತೊರೈಪಾಕ್ಕಂನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ದಂಪತಿಗೆ ಆರು ವರ್ಷಗಳ ಹಿಂದೆ ಮದುವೆಯಾಗಿತ್ತು ಮತ್ತು 3 ಮತ್ತು 1 ವರ್ಷದ ಮಕ್ಕಳಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಭವಾನಿ ಆನ್‌ಲೈನ್‌ನಲ್ಲಿ ಜೂಜಾಡಲು ಪ್ರಾರಂಭಿಸಿದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮೊದಲು ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಿ ನಂತರ ಲಾಭ ಪಡೆದಾಗ ಹೆಚ್ಚೆಚ್ಚು ಹಣ ಅವಳು ಹೆಚ್ಚು ಹೂಡಿಕೆ ಮಾಡಿದ್ದಾಳೆ.
ಇದನ್ನೂ ಓದಿ: 15 ಬಾರಿ ಚಾಕುವಿನಿಂದ ಇರಿದು ಗಂಡನ ಕೊಲೆ: ಪತ್ನಿ, ಮಗನ ಬಂಧನ
ಆಕೆ ಹಣ ಕಳೆದುಕೊಳ್ಳಲು ಆರಂಭಿಸಿದಾಗ ಪತಿ ಭಕ್ಕಿಯರಾಜ್ ಮತ್ತು ಆಕೆಯ ಪೋಷಕರು ಆಟ ಆಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಭವಾನಿ ಆಟ ಮುಂದುವರಿಸಿದ್ದು, ಮುಂದೊಂದು ದಿನ ದೊಡ್ಡ ಮೊತ್ತ ಗಳಿಸುವ ಭರವಸೆಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
3ಲಕ್ಷ ಸಾಲ: ಕೆಲವು ತಿಂಗಳ ಹಿಂದೆ ಭವಾನಿ ತನ್ನ 20 ಪವನ್ ಚಿನ್ನಾಭರಣವನ್ನು ಅಡಮಾನವಿಟ್ಟು ಆನ್‌ಲೈನ್ ರಮ್ಮಿ ಗೇಮ್ ಆಡುತ್ತಾ ಹಣವನ್ನು ಕಳೆದುಕೊಂಡಿದ್ದಳು. ಈ ವಿಷಯ ತಿಳಿದ ಪತಿ ಆಕೆಯನ್ನು ಎದುರು ಹಾಕಿಕೊಂಡಾಗ ಚಿನ್ನಾಭರಣ ಹಿಂಪಡೆಯುವುದಾಗಿ ಹೇಳಿ ತಂಗಿ ಭಾರತಿ ಬಳಿ ₹1.5 ಲಕ್ಷ ಹಾಗೂ ಅಕ್ಕ ಕವಿತಾ ಬಳಿ ₹1.5 ಲಕ್ಷ ಸಾಲ ಪಡೆದಿದ್ದಾಳೆ. ಬದಲಾಗಿ, ಆಕೆ ಮೊತ್ತವನ್ನು ಆನ್‌ಲೈನ್ ರಮ್ಮಿಯಲ್ಲಿ ಮತ್ತೆ ಹೂಡಿಕೆ ಮಾಡಿದ್ದು ಆ ಹಣವನ್ನೂ ಕಳೆದುಕೊಂಡಿದ್ದಾಳೆ.
"ನಾಲ್ಕು ದಿನಗಳ ಹಿಂದೆ, ಭವಾನಿ ತನ್ನ ಸಹೋದರಿಯೊಬ್ಬರಿಗೆ ತಾನು ಕಳೆದುಕೊಂಡ ಹಣದ ಬಗ್ಗೆ ಮಾಹಿತಿ ನೀಡಿದ್ದು ಮತ್ತೆ ಆಟವಾಡುವುದಿಲ್ಲ ಎಂದು ಭರವಸೆ ನೀಡಿದ್ದಳು. ಅವಳು ಹತಾಶೆಗೊಂಡಿದ್ದಳು" ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ
ಇದನ್ನೂ ಓದಿ: ಗೆಳೆಯನಿಗಾಗಿ ರಿವೆಂಜ್ ತೆಗೆದುಕೊಂಡ್ರು; ಗಣೇಶ ಹಬ್ಬದ ದಿನವೇ ಅವನನ್ನ ಕೊಂದು ಹಾಕಿದ್ರು!
ಭಾನುವಾರ ರಾತ್ರಿ 8.30ರ ಸುಮಾರಿಗೆ ಮನೆಯವರಿಗೆ ಊಟ ಸಿದ್ಧಪಡಿಸಿದ ಬಳಿಕ ಭವಾನಿ ಸ್ನಾನಕ್ಕೆ ಮಾಡುವುದಾಗಿ ಹೇಳಿ ಕೊಠಡಿಯೊಳಗೆ ಹೋಗಿ ಒಳಗಿನಿಂದ ಬೀಗ ಹಾಕಿದ್ದಳು.ಬಹಳ ಹೊತ್ತಿನ ನಂತರ ಆಕೆಯ ಸುಳಿವಿಲ್ಲದೇ ಇದ್ದಾಗ ಭಕ್ಕಿಯರಾಜ್ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಣಲಿ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.