ಮಧ್ಯಪ್ರದೇಶದಲ್ಲಿ, ದರೋಡೆಕೋರರು ತನ್ನ ಕಣ್ಣೆದುರೇ ಪತಿಯನ್ನು ಕೊಂದಿದ್ದಾರೆಂದು ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ತನಿಖೆಯ ವೇಳೆ ಸತ್ಯಾಂಶ ಬಯಲಾಗಿದ್ದು, ಆಕೆಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ದರೋಡೆಯ ನಾಟಕವಾಡಿದ್ದಾಳೆ ಎಂಬುದು ಬಹಿರಂಗವಾಗಿದೆ.

ಅಯ್ಯಯ್ಯೋ... ನನ್ನ ಕಣ್ಣೆದುರೇ ಗಂಡನನ್ನು ಕೊಂದು ಬಿಟ್ಟರು ಪಾಪಿಗಳು. ನನಗೆ ಇನ್ನು ದಿಕ್ಕು ಯಾರು, ನನ್ನ ಸೌಭಾಗ್ಯವೇ ಹೊರಟು ಹೋಯಿತು. ನಾನು ಇನ್ನೆಲ್ಲಿಗೆ ಹೋಗಲಿ, ನನ್ನ ಬಾಳೇ ಸರ್ವನಾಶ ಆಗೋಯ್ತು... ಎಂದು ಎಲ್ಲರ ಎದುರೇ ಬಿಕ್ಕಿಬಿಕ್ಕಿ ಅತ್ತ ಮಹಿಳೆಯನ್ನು ನೋಡಿ, ಅಲ್ಲಿ ಬಂದವರ ಕಣ್ಣಲ್ಲಿ ಧಾರಾಕಾರ ನೀರು ಹರಿದವು. ನೆರೆಹೊರೆಯ ಮಹಿಳೆಯರು ಆಕೆಯನ್ನು ಸಂತೈಸುವುದೇ ದೊಡ್ಡ ಸವಾಲಾಗಿ ಹೋಯಿತು. ಗಂಡನನ್ನು ಕಣ್ಣೆದುರೇ ಯಾರಾದರೂ ಕೊ*ಲೆ ಮಾಡಿದರೆ ಅದನ್ನು ಊಹಿಸಿಕೊಳ್ಳುವುದೂ ಕಷ್ಟ ಎನ್ನುವ ರೀತಿಯಲ್ಲಿ ಎಲ್ಲರೂ ಸಮಾಧಾನ ಮಾಡಿದ್ದೇ ಮಾಡಿದ್ದು. ಆದರೆ ಆ ಮಹಿಳೆಯ ಕಣ್ಣೀರು ಮಾತ್ರ ನಿಲ್ಲಲೇ ಇಲ್ಲ. ಎದೆ ಬಡಿದು ಬಡಿದು ರೋಧಿಸಿದಳು ಆಕೆ.

ದರೋಡೆ ಮಾಡಿದ್ರು

ಅಂದಹಾಗೆ ಇದು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಘಟನೆಯಾಗಿದ್ದು, ಹೀಗೆ ಕಣ್ಣೆದುರೇ ಪತಿಯಿಂದ ಕಳೆದುಕೊಂಡಾಕೆಯ ಹೆಸರು ಪ್ರಿಯಾಂಕಾ ಪುರೋಹಿತ್. ಕೊನೆಗೆ ಪೊಲೀಸರ ಎಂಟ್ರಿಯಾಯಿತು. ಪರಿಸ್ಥಿತಿ ಹೇಗೆ ಇದ್ದರೂ, ಆದ ಘಟನೆಯನ್ನು ಕೇಳುವುದು ಅವರ ಧರ್ಮ ಅಲ್ಲವೆ, ಆದ ಕಾರಣ ಏನಾಯಿತು ಎಂದು ಪ್ರಿಯಾಂಕಾಳನ್ನು ಪ್ರಶ್ನಿಸಿದರು. ಆಗ ಅವಳು, ಕೆಲವು ದರೋಡೆಕೋರರು ರಾತ್ರಿಯಲ್ಲಿ ಮನೆಗೆ ನುಗ್ಗಿ ನನ್ನನ್ನು ಮತ್ತು ಪತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡರು. ನನ್ನ ಪತಿ ದೇವಕೃಷ್ಣ ಇದಕ್ಕೆ ವಿರೋಧಿಸಿದಾಗ ಹರಿತವಾದ ಆಯುಧದಿಂದ ನನ್ನ ಕಣ್ಣೆದುರೇ ಕೊಂದುಬಿಟ್ಟರು. ಮನೆಯಿಂದ ಸುಮಾರು ಮೂರೂವರೆ ಲಕ್ಷದ ಆಭರಣ ಮತ್ತು ನಗದೊಂದಿಗೆ ಪರಾರಿಯಾಗಿದ್ದಾರೆ ಎಂದು ಆಕೆ ಹೇಳಿದರು.

ಹೇಳಿಕೆಯಲ್ಲಿ ಉಲ್ಟಾ ಪಲ್ಟಾ

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಪ್ರಿಯಾಂಕಾ ಹೇಳಿಕೆ ನೀಡುವಾಗಲೇ ಯಾಕೋ ಏನೋ ಬೇರೆಯದ್ದೇ ವಾಸನೆ ಪೊಲೀಸರ ಮೂಗಿಗೆ ಬಡಿಯುತ್ತಿತ್ತು. ಉಲ್ಟಾ ಪಲ್ಟಾ ಪ್ರಶ್ನೆ ಕೇಳಿದಾಗ, ಪ್ರಿಯಾಂಕಾ ಒಂದೊಂದು ಸಲ ಒಂದೊಂದು ರೀತಿ ಹೇಳಿಕೆ ನೀಡತೊಡಗಿದಾಗ ಪೊಲೀಸರಿಗೆ ಸಂಶಯ ಬಲವಾಯಿತು. ಗಂಡ ಸತ್ತಿರುವ ಶಾಕ್​ನಲ್ಲಿ ಪತ್ನಿಯಾದವಳು ಏನೇನೋ ಹೇಳುವುದು ಸಹಜ ಎಂದುಕೊಳ್ಳುವ ಪೊಲೀಸರು ಅವರಾಗಿರಲಿಲ್ಲ. ಕೊನೆಗೆ, ತನಿಖೆಯ ನೆಪದಲ್ಲಿ ಮನೆಯನ್ನೆಲ್ಲಾ ಶೋಧಿಸಿದರು.

ಎಲ್ಲವೂ ಅಲ್ಲೇ ಇತ್ತು

ಮೂರೂವರೆ ಲಕ್ಷದ ಆಭರಣ ಏನು ಕದ್ದಿದ್ದಾರೆ ಎಂದು ಈ ಪತ್ನಿ ಹೇಳಿಕೆ ನೀಡಿದ್ದಳೋ ಅವೆಲ್ಲವೂ ಅಲ್ಲೇ ಒಂದು ಮೂಲೆಯಲ್ಲಿ ಬಚ್ಚಿಡಲಾಗಿತ್ತು. ಇನ್ನೇನು ಬೇಕು ಪೊಲೀಸರಿಗೆ. ತಮ್ಮದೇ ಆದ ರೀತಿಯಲ್ಲಿ ಪ್ರಿಯಾಂಕಾಳನ್ನು ಪ್ರಶ್ನಿಸಿದಾಗ, ಕೊನೆಗೂ ಸತ್ಯ ಬಯಲಾಯ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಕ್ರೌರ್ಯದಂತೆ ಇದು ಕೂಡ ಆಗಿರುವುದು ಪೊಲೀಸರಿಗೆ ತಿಳಿಯಿತು. ಅದೇನೆಂದರೆ, ಇದೇ ಪ್ರಿಯಾಂಕಾ ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಂದು ಹಾಕಿದ್ದಾಳೆ ಎನ್ನುವುದು.

15ನೇ ವಯಸ್ಸಿಗೆ ಮದುವೆ

ಅಷ್ಟಕ್ಕೂ ಆಗಿದ್ದೇನೆಂದರೆ, ದೇವಕೃಷ್ಣ ಅವರನ್ನು ಪ್ರಿಯಾಂಕಾ 15 ನೇ ವಯಸ್ಸಿನಲ್ಲಿ, ಅಂದರೆ ಬಾಲ್ಯದಲ್ಲಿ ವಿವಾಹವಾಗಿದ್ದರು. ಆಗ ಏನೂ ತಿಳಿಯದ ವಯಸ್ಸು. ಸ್ವಲ್ಪ ವರ್ಷ ಆದ ಮೇಲೆ ಆಕೆಗೆ ರಾಜ್‌ಗಢದ ಕಮಲೇಶ್ ಪುರೋಹಿತ್ ಎಂಬಾತನ ಮೇಲೆ ಲವ್​ ಆಯಿತು. ಇಬ್ಬರೂ ಒಟ್ಟಿಗೆ ಬದುಕಲು ಬಯಸಿದ್ದರು. ಆದರೆ ಆಕೆಯ ಪತಿ ದೇವಕೃಷ್ಣ ಅಡ್ಡವಾಗಿದ್ದರು. ಆದ್ದರಿಂದ, ಪರಿಹಾರ ಏನು ಎಂದು ಇಬ್ಬರೂ ಯೋಚಿಸಿದರು. ಅದರಿಂದ ಅವರು ಕೊಲೆಗೆ ಸಂಚು ರೂಪಿಸಿದರು. ಪತಿಯನ್ನು ಕೊಲ್ಲಲು ಗೆಳೆಯ ಕಮಲೇಶ್ ತನ್ನ ಸ್ನೇಹಿತ ಸುರೇಂದ್ರನಿಗೆ 1 ಲಕ್ಷ ರೂ.ಗಳ ಸುಪಾರಿ ನೀಡಿದ್ದ. ಯೋಜನೆಯಂತೆ, ಸುರೇಂದ್ರ ಮನೆಗೆ ನುಗ್ಗಿ ಮಲಗಿದ್ದ ದೇವಕೃಷ್ಣನನ್ನು ಕೊಂದ. ನಂತರ ಪೊಲೀಸರು ಅದನ್ನು ದರೋಡೆ ಎಂದು ಭಾವಿಸುವಂತೆ ಪ್ರಿಯಾಂಕಾನನ್ನು ಮತ್ತೊಂದು ಕೋಣೆಯಲ್ಲಿ ಕಟ್ಟಿಹಾಕಿದನು. ಈ ಪ್ರಕರಣದಲ್ಲಿ ಪೊಲೀಸರು ಪ್ರಿಯಾಂಕಾ ಮತ್ತು ಕಮಲೇಶ್ ಅವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸುರೇಂದ್ರನಿಗಾಗಿ ಹುಡುಕಾಟ ನಡೆಯುತ್ತಿದೆ.