ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಗಣರಾಜ್ಯೋತ್ಸವದಂದೇ, ಬುಲೆಟ್ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಚಿನ್ನದ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಈ ವೇಳೆ ಅಡ್ಡಬಂದ ಯುವಕನೊಬ್ಬನ ಕಾಲಿಗೆ ಗುಂಡು ಹಾರಿಸಿ, ಚಿನ್ನಾಭರಣಗಳೊಂದಿಗೆ ಮಹಾರಾಷ್ಟ್ರದತ್ತ ಪರಾರಿ.

ವಿಜಯಪುರ (ಜ.26): ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಗಣರಾಜ್ಯೋತ್ಸವದಂದೇ ಹಗಲು ದರೋಡೆಯೊಂದು ನಡೆದಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಹೆಲ್ಮೆಟ್ ಧರಿಸಿ ಬುಲೆಟ್‌ನಲ್ಲಿ ಬಂದ ದರೋಡೆಕೋರರು ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನದ ಅಂಗಡಿಯನ್ನು ಲೂಟಿ ಮಾಡಿದ್ದಾರೆ.

ಬುಲೆಟ್‌ನಲ್ಲಿ ಬಂದ ದರೋಡೆಕೋರರ ಅಟ್ಟಹಾಸ

ಹಲಸಂಗಿ ಗ್ರಾಮದ ಮಹಾರುದ್ರ ಕಂಚಗಾರ ಅವರಿಗೆ ಸೇರಿದ ಚಿನ್ನದ ಅಂಗಡಿಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದ ದರೋಡೆಕೋರರರು. ಮೊದಲೇ ಪ್ಲಾನ್ ಮಾಡಿಕೊಂಡಂತೆ ಸಿನಿಮೀಯ ರೀತಿಯಲ್ಲಿ ಹೆಲ್ಮೆಟ್, ಜಾಕೆಟ್ ಹಾಗೂ ಕೈಗೆ ಗ್ಲೌಸ್ ಧರಿಸಿದ್ದ ಇಬ್ಬರು ಕಿರಾತಕರು ಬುಲೆಟ್ ಮೋಟಾರ್ ಸೈಕಲ್‌ನಲ್ಲಿ ಬಂದು ಅಂಗಡಿಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ತೋರಿಸಿ ಇಡೀ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಡ್ಡ ಬಂದ ವೃದ್ಧೆಗೆ ಪಿಸ್ತೂಲ್; ಯುವಕನಿಗೆ ಗುಂಡೇಟು

ದರೋಡೆ ನಡೆಯುತ್ತಿದ್ದ ವೇಳೆ ಅಕಸ್ಮಾತ್ ಆಗಿ ಅಂಗಡಿಯ ಬಳಿ ವೃದ್ಧೆಯೊಬ್ಬರು ಬಂದಿದ್ದಾರೆ. ಕೂಡಲೇ ದರೋಡೆಕೋರರು ಆಕೆಯತ್ತ ಕಂಟ್ರಿ ಪಿಸ್ತೂಲ್ ಗುರಿ ಹಿಡಿದು ಹೆದರಿಸಿ ಕಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ದರೋಡೆಕೋರರು ಸ್ಥಳದಲ್ಲಿ ಭೀತಿ ಸೃಷ್ಟಿಸಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ್ಮಲಿಂಗ ಹೂಗಾರ ಎಂಬ ಯುವಕನ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಕೂಡಲೇ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರದತ್ತ ದರೋಡೆಕೋರರು ಎಸ್ಕೇಪ್!

ದರೋಡೆ ನಡೆಸಿದ ಬಳಿಕ ಆರೋಪಿಗಳು ಕ್ಷಣಾರ್ಧದಲ್ಲಿ ಚಿನ್ನಾಭರಣಗಳ ಸಮೇತ ಮಹಾರಾಷ್ಟ್ರದ ಗಡಿಯತ್ತ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಕಟ್ಟಿಮನಿ ಹಾಗೂ ಇನ್ಸ್‌ಪೆಕ್ಟರ್ ಪರಶುರಾಮ ಮನಗೂಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರಿಂದ ತೀವ್ರ ಶೋಧ ಕಾರ್ಯ

ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತಂಡಗಳನ್ನು ರಚಿಸಲಾಗಿದ್ದು, ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದರೋಡೆಕೋರರನ್ನ ಹಿಡಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.