ಬೆಳಗಾವಿಯ ಸವದತ್ತಿ ತಾಲೂಕಿನ ಧುಪದಾಳ ಗ್ರಾಮದ ಭೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಖದೀಮರು ಚಿನ್ನ,ಬೆಳ್ಳಿ ಆಭರಣಗಳ ಜೊತೆಗೆ ದೇವರ ಮೂರ್ತಿಯನ್ನೂ ಕದ್ದೊಯ್ದಿದ್ದು, ನಂತರ ಅದನ್ನು ಗ್ರಾಮದ ಹೊರಗೆ ಎಸೆದು ಪರಾರಿಯಾಗಿದ್ದಾರೆ. ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಧುಪದಾಳ ಗ್ರಾಮದಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ ಸಂಭವಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಪುರಾತನ ಹಾಗೂ ಭಕ್ತರ ಆರಾಧನಾ ಕೇಂದ್ರವಾಗಿರುವ ಭೀರೇಶ್ವರ ದೇವಸ್ಥಾನಕ್ಕೆ ಕನ್ನ ಹಾಕಿದ ಅಜ್ಞಾತ ಖದೀಮರು, ಬೆಳ್ಳಿ ಮತ್ತು ಚಿನ್ನಾಭರಣಗಳೊಂದಿಗೆ ದೇವರ ಮೂರ್ತಿಯನ್ನು ಕೂಡಾ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಭಾನುವಾರ ಮಧ್ಯರಾತ್ರಿ ದೇವಸ್ಥಾನದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ದೇವರಿಗೆ ಅಲಂಕರಿಸಿದ್ದ ಸುಮಾರು 2 ಕಿಲೋಗ್ರಾಂ ತೂಕದ ಬೆಳ್ಳಿಯ ಕುದುರೆ, ಎರಡು ಚಿನ್ನದ ಸರಗಳು ಸೇರಿದಂತೆ ಮೌಲ್ಯಯುತ ಆಭರಣಗಳನ್ನು ದೋಚಿದ್ದಾರೆ. ಅಲ್ಲದೆ, ದೇವಾಲಯದಲ್ಲಿದ್ದ ಭೀರೇಶ್ವರ ದೇವರ ಖಂಚಿನ ಮೂರ್ತಿಯನ್ನು ಸಹ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.

ದೇವರ ಮೂರ್ತಿ ಎಸೆದು ಪರಾರಿ

ಕಳ್ಳತನದ ನಂತರ ಖದೀಮರು ದೇವರ ಮೂರ್ತಿಯನ್ನು ಗ್ರಾಮದ ಹೊರವಲಯಕ್ಕೆ ಕೊಂಡೊಯ್ದು ಅಲ್ಲಿಯೇ ಎಸೆದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕರು ಮತ್ತು ಗ್ರಾಮಸ್ಥರು ಬಾಗಿಲು ಮುರಿದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಸವದತ್ತಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೆರಳಚ್ಚು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಭಕ್ತರಲ್ಲಿ ಆಕ್ರೋಶ

ಈ ಕಳ್ಳತನ ಪ್ರಕರಣದಿಂದ ಧುಪದಾಳ ಗ್ರಾಮದಲ್ಲಿ ಭಕ್ತರಲ್ಲಿ ಆಕ್ರೋಶ ಮತ್ತು ಆತಂಕ ವಾತಾವರಣ ನಿರ್ಮಾಣವಾಗಿದೆ. ದೇವಾಲಯದ ಭದ್ರತೆ ಹೆಚ್ಚಿಸುವಂತೆ ಹಾಗೂ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಘಟನೆ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.