ಉತ್ತರ ಕನ್ನಡ ಜಿಲ್ಲೆಯ ಕಾಳಗನಕೊಪ್ಪದಲ್ಲಿ ಶಿಕ್ಷಕಿಯೊಬ್ಬರು ಎರಡನೇ ತರಗತಿ ಬಾಲಕನಿಗೆ ಹೊಡೆದಿದ್ದಾರೆ. ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು ಮೂಡಿವೆ. ಈ ಘಟನೆಗೆ ಸಂಬಂಧಿಸಿದಂತೆ ಬಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉತ್ತರಕನ್ನಡ (ಆ.7): ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಬಾಲಕನಿಗೆ, ಬೆನ್ನಿನ ಮೇಲೆ ಬಾಸುಂಡೆ ಮೂಡುವ ಹಾಗೆ ಶಿಕ್ಷಕಿಯೊಬ್ಬರು ಹೊಡೆದಿರುವ ಘಟನೆ ನಡೆದಿದೆ.

ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ಶಿಕ್ಷಕಿಯು ವಿದ್ಯಾರ್ಥಿಗೆ ಸಣ್ಣ ಕೋಲಿನಿಂದ ಹೊಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಶಾಲೆ ಬಿಟ್ಟ ನಂತರ ಮನೆಗೆ ಹೋದ ಬಾಲಕ, ಮನೆಯಲ್ಲಿ ನೋವು ತಡೆದುಕೊಳ್ಳಲಾರದೇ ಅಳಲು ಆರಂಭಿಸಿದ್ದಾನೆ. ಮನೆಯವರು ಮೈಮೇಲಿನ ಶರ್ಟ್‌ ಬಿಚ್ಚಿ ನೋಡಿದಾಗ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಬಾಲಕನ ತಾಯಿ, ಗ್ರಾಮದ ಪ್ರಮುಖರಲ್ಲಿ ತಮ್ಮ ಮಗನಿಗೆ, ಶಿಕ್ಷಕಿ ಹೊಡೆದಿರುವುದನ್ನು ತೋರಿಸಿ ಕಣ್ಣೀರು ಹಾಕಿದ್ದಾರೆ.

ಶಾಲೆ ಬಿಟ್ಟ ನಂತರ ಮಾಹಿತಿ ತಿಳಿಯುತ್ತಿದ್ದಂತೆ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿದ್ದು, ಬಾಲಕನ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಿಕ್ಷಕಿ, ತಾನು ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ. ನನ್ನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಶಿಕ್ಷಕಿಯ ಮಾತು ಕೇಳಿ ಬಿಇಒ ಸುಮಾ ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಂತರ ಬಾಲಕನನ್ನು ಮುಂಡಗೋಡದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಬಾಲಕನ ಕುಟುಂಬಸ್ಥರು ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.