ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ, ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಸಂದೀಪ್ ಎಂಬ 26 ವರ್ಷದ ಯುವಕ ಕಾಲುಜಾರಿ ಬಿದ್ದು ತನ್ನ ಎಡಗೈಯನ್ನು ಕಳೆದುಕೊಂಡಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೋಲಾರ (ಡಿ.19): ಜಿಲ್ಲೆಯ ಪ್ರಮುಖ ರೈಲ್ವೆ ಜಂಕ್ಷನ್ ಆದ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನೋರ್ವ ಕಾಲು ಜಾರಿ ರೈಲಿನ ಅಡಿಗೆ ಬಿದ್ದ ಪರಿಣಾಮ, ಆತನ ಎಡಗೈ ಸಂಪೂರ್ಣವಾಗಿ ಕಟ್ ಆಗಿರುವ ದಾರುಣ ಘಟನೆ ನಡೆದಿದೆ. ಅದೃಷ್ಟವಶಾತ್ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರಿಗೆ ತೆರಳುವ ಗಡಿಬಿಡಿಯಲ್ಲಿ ಸಂಭವಿಸಿದ ದುರಂತ
ಬಂಗಾರಪೇಟೆ ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ ಸಂದೀಪ್ (26) ಎಂಬ ಯುವಕನೇ ಈ ಅವಘಡಕ್ಕೆ ಸಿಲುಕಿದ ದುರ್ದೈವಿ. ವೃತ್ತಿ ನಿಮಿತ್ತ ಬೆಂಗಳೂರಿಗೆ ತೆರಳಲು ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈಲು ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಮಾರಿಕುಪ್ಪಂನಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ರೈಲು ನಿಲ್ದಾಣದಿಂದ ಹೊರಡುತ್ತಿತ್ತು. ಚಲಿಸುತ್ತಿದ್ದ ರೈಲನ್ನು ಏರಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ.
ಹಳಿಯ ಮೇಲೆ ತುಂಡಾದ ಕೈ:
ರೈಲು ಹತ್ತುವ ಭರದಲ್ಲಿ ಆಯಾತಪ್ಪಿದ ಸಂದೀಪ್ ಹಳಿಯ ಪಕ್ಕಕ್ಕೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಆತನ ಎಡಗೈ ಭುಜದ ಕೆಳಭಾಗದಿಂದ ಸಂಪೂರ್ಣವಾಗಿ ತುಂಡಾಗಿ ಹಳಿಯ ಮೇಲೆ ಬಿದ್ದಿದೆ. ಕೈ ಕಳೆದುಕೊಂಡು ತೀವ್ರ ರಕ್ತಸ್ರಾವದಿಂದ ಯುವಕ ಸ್ಥಳದಲ್ಲೇ ಕಿರುಚಾಡುತ್ತಾ ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೂಡಲೇ ನಿಲ್ದಾಣದಲ್ಲಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನ ನೆರವಿಗೆ ಧಾವಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ದಾಖಲು
ಗಾಯಾಳು ಸಂದೀಪ್‌ನನ್ನು ತಕ್ಷಣವೇ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ರೈಲು ನಿಲ್ದಾಣಗಳಲ್ಲಿ ಇಂತಹ ಸಾಹಸಗಳಿಗೆ ಕೈಹಾಕಬೇಡಿ ಎಂದು ರೈಲ್ವೆ ಪೊಲೀಸರು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.


