ಚಾಮರಾಜನಗರದ ಹೊಮ್ಮ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಟಿಸಿ ಪಡೆದು ಬೇರೆಡೆ ಸೇರಿಸುತ್ತಿದ್ದು, ಒಬ್ಬನೇ ವಿದ್ಯಾರ್ಥಿ ಉಳಿದಿದ್ದಾನೆ. ಶಾಲೆ ಮುಚ್ಚುವ ಹಂತದಲ್ಲಿದೆ.
ವರದಿ: ಪುಟ್ಟರಾಜು.ಆರ್.ಸಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ: ಸಮಾಜ ಎಷ್ಟೇ ಮುಂದುವರಿದಿದ್ದರು ಜನರ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಪೋಷಕರು ಆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುತ್ತಿಲ್ಲ. ಟಿಸಿ ಪಡೆದು ಬೇರೆ ಕಡೆ ಸೇರಿಸುತ್ತಿದ್ದು ಸದ್ಯ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದು ಈ ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ.
ಹೌದು ಈ ದೃಶ್ಯಗಳಿಗೆ ಸಾಕ್ಷಿಯಾಗಿದೆ ಚಾಮರಾಜನಗರ ತಾಲ್ಲೂಕಿನ ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಹಿಂದೆ ಇಲ್ಲಿ ಮೂವರು ಶಿಕ್ಷಕರಿದ್ದರು. ಇವರ ಒಳಜಗಳದಿಂದ ಸಮರ್ಪಕವಾಗಿ ಪಾಠಪ್ರವಚನ ನಡೆಯದೆ ಪೋಷಕರು ಬೇಸತ್ತು ಹಲವು ಬಾರಿ ಈ ಶಾಲೆಗೆ ಬೀಗ ಜಡಿದು ಪ್ರತಿಭಟನೆಯನ್ನೂ ನಡೆಸಿದ್ದರು. ಮಕ್ಕಳ ಸಂಖ್ಯೆಯು 22 ಕ್ಕೆ ಕುಸಿದಿತ್ತು. ಯಾವಾಗ ಮಕ್ಕಳ ಸಂಖ್ಯೆ ಕಡಿಮೆ ಆಯ್ತೋ ಹಿಂದುಳಿದ ಹಾಗು ದಲಿತ ವರ್ಗಕ್ಕೆ ಸೇರಿದ ಇಬ್ಬರು ಅಡುಗೆ ಸಿಬ್ಬಂದಿ ಪೈಕಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿ ರೋಸ್ಟರ್ ಪದ್ದತಿ ಪ್ರಕಾರ ದಲಿತ ಮಹಿಳೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಕ ಮಾಡಲಾಗಿತ್ತು. ಬಳಿಕ ಮಕ್ಕಳ ಸಂಖ್ಯೆ ದಿಡೀರ್ ಕುಸಿತ ಆಯ್ತು. 12 ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಕಡೆ ಸೇರಿಕೊಂಡಿದ್ದು ಉಳಿದವರು ಟಿಸಿಗೆ ಅರ್ಜಿ ಸಲ್ಲಿಸಿದ್ದು ಶಾಲೆ ಕಡೆ ಮುಖ ಮಾಡ್ತಿಲ್ಲ. ಅಡುಗೆ ಮಾಡುವರು ದಲಿತರು ಎಂಬುದೇ ಇದಕ್ಕೆಲ್ಲಾ ಕಾರಣ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಇನ್ನೂ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಶಿಕ್ಷಕ ಚಿನ್ನಸ್ವಾಮಿ, ಹಿಂದೆ ಈ ಶಾಲೆಯಲ್ಲಿ ಶಿಕ್ಷಕರು ಸರಿಯಾದ ರೀತಿ ಪಾಠ, ಪ್ರವಚನ ಮಾಡ್ತಿಲ್ಲವೆಂಬ ಆರೋಪ ಬಂದಿತ್ತು. ಊರಿನ ಗ್ರಾಮಸ್ಥರು ಕೂಡ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ನಂತರ ಆ ಇಬ್ಬರೂ ಶಿಕ್ಷಕರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ನಂತರ ಸಮಸ್ಯೆ ಉದ್ಬವವಾಗಿರಲಿಲ್ಲ.ಇದೀಗಾ ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನಲೆ ಇಬ್ಬರು ಅಡುಗೆ ಸಹಾಯಕರ ಪೈಕಿ ಒಬ್ಬರನ್ನು ಎರಡು ತಿಂಗಳ ಹಿಂದೆ ತೆಗೆದು ಹಾಕಿದ್ದಾರೆ. ಸರ್ಕಾರದ ನೀತಿ ನಿಯಮಾನುಸಾರವೇ ತೆಗೆದು ಹಾಕಲಾಗಿದೆ. ಆ ನಂತರ ಬೆಳವಣಿಗೆಯಲ್ಲಿ ಪೋಷಕರು ಮಕ್ಕಳ ಟಿಸಿ ಪಡೆದು ಕರೆದುಕೊಂಡು ಹೋಗಿದ್ದಾರೆ.ಯಾವ ಕಾರಣಕ್ಕೆ ಟಿಸಿ ಪಡೆಯುತ್ತಿದ್ದಾರೆಂದು ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಒಟ್ನಲ್ಲಿ ಹಿಂದೆ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಪಾಠ ಪ್ರವಚನ ಮಾಡ್ತಿಲ್ಲವೆಂದು ಪೋಷಕರು ಗಲಾಟೆ ಮಾಡಿ ಶಿಕ್ಷಕರನ್ನು ಬೇರೆಡೆಗೆ ಎತ್ತಂಗಡಿ ಮಾಡಿಸಿದ್ದರು. ಆದ್ರೆ ಈಗ ಅದೇ ಪೋಷಕರು ಅಡುಗೆ ಸಿಬ್ಬಂದಿ ದಲಿತೆ ಎಂಬ ಕಾರಣಕ್ಕೆ ತಮ್ಮ ಮಕ್ಕಳನ್ನು ಟಿಸಿ ಪಡೆದು ಹೋಗ್ತಾರೆಂಬ ಆರೋಪ ಕೇಳಿ ಬರುತ್ತಿರುವುದು ವಿಪರ್ಯಾಸವಾಗಿದೆ.
