ಹಾಸನದಲ್ಲಿ ರೌಡಿ ಶೀಟರ್ ಜೆಸಿಬಿ ಮಂಜನ ಮೇಲೆ ಆತನ ಸ್ನೇಹಿತ ಯೋಗಿಹಳ್ಳಿ ರಾಜು ಮತ್ತು ತಂಡ ತಲ್ವಾರ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಕುಡಿದ ಮತ್ತಿನ ಜಗಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಾಸನ: ರೌಡಿ ಶೀಟರ್ ಜೆಸಿಬಿ ಮಂಜನ ಮೇಲೆ ಆತನ ಸ್ನೇಹಿತ ಬಳಗವೇ ತಲ್ವಾರ್‌ ಬೀಸಿ ಹತ್ಯೆಗೈಯಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ಸರಿ ಸುಮಾರು 11ರ ವೇಳೆಗೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಕೂದಲೆಳೆಯಲ್ಲಿ ಸಾವಿನ ದವಡೆಯಿಂದ ಜೆಸಿಬಿ ಮಂಜು ಪಾರಾಗಿದ್ದಾನೆ.

ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜೊತೆಯಲಿದ್ದವರೊಂದಿಗೆ ಕುಡಿತ್ತಾ ಕುಡಿದ ಮತ್ತಿನಲ್ಲಿ ಅಶ್ಲೀಲವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಅದರಲ್ಲೂ ಜಿಸಿಬಿ ಮಂಜು ತನ್ನ ಗೆಳೆಯ ಯೋಗಿಹಳ್ಳಿ ರಾಜಿ ಮತ್ತಾತನ ಸಹಚರರಿಗೆ ‌ಅತ್ಯಂತ ಕೆಟ್ಟದಾಗಿ ನಿಂದಿಸಿದ್ದಾನೆ. ಈ ವೇಳೆಯೇ ಕೈ ಕೈ ಮಿಲಾಯಿಸಿದ್ದು ಅಷ್ಟರಲ್ಲಿ ಸ್ಥಳದಲ್ಲಿದ್ದವರು ಇಬ್ಬರನ್ನು ಅಲ್ಲಿಂದ ಕಳುಹಿಸಿದ್ದಾರೆ. ಬಳಿಕ ರಾತ್ರಿ 9ರ ವೇಳೆಗೆ ಜೆಸಿಬಿ‌ ಮಂಜುಗೆ ಕರೆ ಮಾಡಿದ ಗೆಳೆಯ ಯೋಗಿಹಳ್ಳಿ‌ ರಾಜು‌‌ ನಾವು ನಾವೇ ಹೀಗೆ ಜಗಳ ಮಾಡಿಕೊಂಡರೇ ಹೇಗೆ ಎಂದು ಮಾತಿಗೆ ಕರೆದಿದ್ದಾನೆ.

ಮಾತುಕತೆಗೆ ಬಂದವನ ಕೊಲೆಗೆ ಯತ್ನ:

ಇನ್ನು ಯೋಗಿಹಳ್ಳಿ ರಾಜು ಮಾತು ಕೇಳಿ‌ ಮನೆಯಲ್ಲಿದ್ದ ಜೆಸಿಬಿ ಮಂಜ. ರಿಂಗ್ ರಸ್ತೆಯ ಸತ್ಯಮಂಗಲ ಕೆರೆ ಕೋಡಿ ಹರಿಯುವ ಬ್ರಿಡ್ಜ್ ಬಳಿ ಬಂದ ವೇಳೆ ಯೋಗಿಹಳ್ಳಿ ರಾಜಿ ಮತ್ತು 20 ಮಂದಿಯಿದ್ದ ತಂಡ ಏಕಾಏಕಿ ದಾಳಿಗೆ ಮುಂದಾಗಿದೆ. ಈ ವೇಳೆ ರಾಜು ( ರಾಜಿ) ಬೀಸಿದ ಭರ್ಜಿ ಜೆಸಿಬಿ ಮಂಜನ ಕುತ್ತಿಗೆಯ ಗದ್ದದ ಬಳಿ ದಾಳಿ ಮಾಡಿದ್ದು ಕೂದಲೆಳೆಯಲ್ಲಿ ಮಂಜು ಸಾವಿನ ಮನೆಯಿಂದ ಪಾರಾಗಿದ್ದಾನೆ.

ಮಾರಕಾಸ್ತ್ರ ತೆಗೆದ ಕೂಡಲೇ ಬೆಚ್ಚಿ ಬಿದ್ದ ತಂಡ

ಇಷ್ಟರಲ್ಲಿ ಎಚ್ಚೆತ್ತುಕೊಂಡ ಮಂಜು ತನ್ನ ಬಳಿ ಇದ್ದ ಮಾರಕಾಸ್ತ್ರದಿಂದ ತೆಗೆದ ಕೂಡಲೇ ಬೆಚ್ಚಿ ಬಿದ್ದ ತಂಡ ಅಲ್ಲಿಂದ ಎಸ್ಕೇಪ್ ಆಗಿದ್ದು, ಗದ್ದದ ಭಾಗ ಕತ್ತರಿಸಿ ರಕ್ತ ಸುರಿಯುವುದರ ನಡುವೆ ಆತ ನಗರದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಸದ್ಯ ಜೆಸಿಬಿ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಜೆಸಿಬಿ ಮಂಜು ಹತ್ಯೆ ಮಾಡಲು ಮುಂದಾಗಿದ್ದ ಯೋಗಿಹಳ್ಳಿ ರಾಜಿ , ಆತನ ತಮ್ಮ ಅಶೋಕ ಇವರು ಸಹ ಈ ಹಿಂದೆ ಪೆಟ್ರೋಲ್ ಪೈಪ್ ಕೊರೆದು ಪೆಟ್ರೋಲ್ ಕದ್ದ ಆರೋಪ ಹೊತ್ತಿದ್ದು, ರೌಡಿಶೀಟರ್‌ಗಳಾಗಿದ್ದಾರೆ.

ನಾನು ಮನೆಯಲ್ಲಿ‌ ಮಲಗಿದ್ದೆ. ಸ್ನೇಹಿತರು ಕರೆದರು ಅಂತ ಮನೆಯಿಂದ ಹೊರಹೋದೆ. ಮಾತಾಡುವ ವೇಳೆಗೆ ರಾಜಿ ಭರ್ಜಿಯಿಂದ ಇರಿದ. ಅವನಿಗೂ ನನಗೂ ಯಾವುದೇ ದ್ವೇಷವಿಲ್ಲ. ಆದರೂ ಯಾಕೆ ಕೊಲೆ ಮಾಡಲು ಬಂದರೆಂಬುದೇ ತಿಳಿಯುತ್ತಿಲ್ಲ.

- ಜೆಸಿಬಿ ಮಂಜು, ರೌಡಿ ಶೀಟರ್‌