ಎರಡನೇ ಮಗುವನ್ನು ಕೂಡ ಹೆಣ್ಣೇ ಹೆತ್ತಳು ಎಂದು ಗಂಡ ಹಾಗೂ ಆತನ ಮನೆಯವರು ಸೊಸೆಯನ್ನು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹೋಬಾ: ಸಮಾಜ ಎಷ್ಟೇ ಮುಂದುವರೆದರು ಗಂಡು ಹೆಣ್ಣೆಂಬ ಭೇಧ ಮಾತ್ರ ಸಮಾಜದಿಂದ ಇನ್ನೂ ಮುಕ್ತವಾಗಿಲ್ಲ. ಗಂಡು ವಂಶೋದ್ದಾರಕ ಎಂಬ ನಂಬಿಕೆಯಿಂದಾಗಿ ಸಮಾಜದಲ್ಲಿ ಗಂಡು ಮಗುವಿನ ಮೇಲೆ ಜನರ ವ್ಯಾಮೋಹ ತೀವ್ರವಾಗುತ್ತಲೇ ಇದೆ. ಇದರ ಪರಿಣಾಮ ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಗಂಡು ಮಗು ಹೆತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಆಕೆಯ ಕುಟುಂಬಸ್ಥರು ಕಿರುಕುಳ ನೀಡುವುದು ಮನೆಯಿಂದ ಹೊರ ದಬ್ಬುವುದು ಅನ್ನಾಹಾರ ನೀಡದೇ ಸತಾಯಿಸುವುದು ಮುಂತಾದ ಘಟನೆಗಳನ್ನು ನಾವು ಕೇಳುತ್ತಲೇ ಇದ್ದೇವೆ.
ಅದೇ ರೀತಿ ಈಗ ಉತ್ತರಪ್ರದೇಶದ (Uttar Pradesh) ಮಹೋಬಾದಲ್ಲಿ ಹೆಣ್ಣು ಮಕ್ಕಳನ್ನೇ ಹೆತ್ತಳು ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಪತಿ ಹಾಗೂ ಆತನ ಮನೆಯವರು ಅಮಾನವೀಯವಾಗಿ ಥಳಿಸಿದ್ದಾರೆ. ತನ್ನ ಗಂಡನ ಮನೆಯವರು ಗಂಡು ಮಗುವನ್ನು ಬಯಸಿದ್ದರು. ಆದರೆ ಎರಡೂ ಮಕ್ಕಳು ಹೆಣ್ಣೇ ಆಗಿರುವುದಕ್ಕೆ ಪತಿಯ ಮನೆಯವರು ಆಗಾಗ ಕಿರುಕುಳ ನೀಡುತ್ತಲೇ ಇದ್ದಾರೆ ಎಂದು ಮಹಿಳೆ ದೂರಿದ್ದಾರೆ.
3 ತಿಂಗಳ ಹೆಣ್ಣು ಮಗುವನ್ನು 7 ಬಾರಿ ಮಾರಾಟ: ಆರೋಪಿಗಳ ಬಂಧನ
ಮೊದಲ ಮಗು ಹೆಣ್ಣು ಹುಟ್ಟಿದಾಗ ಗಂಡು ಹೆತ್ತಿಲ್ಲ ಎಂಬ ಕಾರಣಕ್ಕೆ ನನಗೆ ಆಗಾಗ ಕಿರುಕುಳ ನೀಡುತ್ತಿದ್ದರು. ಇದಾದ ಬಳಿಕ ನಾನು ಎರಡನೇ ಬಾರಿ ಗರ್ಭಿಣಿಯಾದೆ. ಆದರೆ ಎರಡನೇ ಬಾರಿಯೂ ಹೆಣ್ಣು ಮಗುವೇ ಜನಿಸಿದ್ದು, ಇದರಿಂದ ಅಸಮಾಧಾನಗೊಂಡ ನನ್ನ ಗಂಡ ಹಾಗೂ ಗಂಡನ ಮನೆಯವರು ಇತ್ತೀಚೆಗೆ ಕಿರುಕುಳ (harassment) ನೀಡುವುದನ್ನು ತೀವ್ರ ಗೊಳಿಸಿದರು.
ಅಲ್ಲದೇ ಅನ್ನಾಹಾರವನ್ನು ಕೂಡ ನೀಡದೇ ಚಿತ್ರಹಿಂಸೆ ನೀಡಿದರು. ಪರಿಣಾಮ ತುತ್ತಿನ ಚೀಲ ತುಂಬುವ ಸಲುವಾಗಿ ನಾನು ಕೂಲಿ ಕೆಲಸ ಮಾಡಲು ಶುರು ಮಾಡಿದೆ ಎಂದು ಮಹಿಳೆ ತನ್ನ ಕಷ್ಟ ಹೇಳಿ ಕೊಂಡಿದ್ದಾಳೆ. ಇನ್ನು ಆಕೆಯ ಗಂಡನ ಮನೆಯವರು ಆಕೆಯನ್ನು ಒದೆಯುತ್ತಿರುವ ಥಳಿಸಿ ದೌರ್ಜನ್ಯವೆಸಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಕೆ ಅಳುತ್ತಾ ಅವರಲ್ಲಿ ಹೊಡೆಯದಂತೆ ಬೇಡಿಕೊಳ್ಳುತ್ತಿರುವ ದೃಶ್ಯ ಕಣ್ಣೀರು ತರಿಸುವಂತಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Grand Welcome For Baby Girl: ಮೊಮ್ಮಗಳ ಆಗಮನಕ್ಕೆ ಹೆಲಿಕಾಪ್ಟರ್ ಬುಕ್ ಮಾಡಿದ ಅಜ್ಜ
ಹಲ್ಲೆಯ ಬಳಿಕ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹೋಬಾದ (Mahoba) ಪೊಲೀಸ್ ಸೂಪರಿಟೆಂಡೆಂಟ್ ಸುಧಾ ಸಿಂಗ್ (Sudha Singh) ಹೇಳಿದ್ದಾರೆ.
ಮದುವೆಯಾಗಲು ಹೆಣ್ಣು ಬೇಕು. ತಾಯಿಯಾಗಿ ಹೆಣ್ಣು ಬೇಕು, ಗೆಳತಿಯಾಗಿ ಹೆಣ್ಣು ಬೇಕು. ಆದರೆ ಮಗಳಾಗಿ ಈ ಸಮಾಜಕ್ಕೆ ಹೆಣ್ಣು ಬೇಡ, ಆದರೆ ಒಳ್ಳೆಯ ಸೊಸೆ ಬೇಕು ಎನ್ನುವ ಜನ ಹೆಣ್ಣು ಹುಟ್ಟುತ್ತಲ್ಲೇ ಬೆಂಕಿಯುಂಡೆಯಾಗುವುದು ವಿಪರ್ಯಾಸ. ಹೆಣ್ಣು ಹೆತ್ತರೇ ಹೆಣ್ಣು ಬೆಳೆದರೆ ತಾನೇ ಒಳ್ಳೆಯ ಸೊಸೆ, ಒಳ್ಳೆಯ ಪತ್ನಿ ಸಿಗಲು ಸಾಧ್ಯ. ಈ ವಿಚಾರವನ್ನು ಈ ಸಮಾಜ ಎಂದು ಅರಿಯುವುದೋ.
ಈ ಹಿಂದೆ ದಕ್ಷಿಣ ದೆಹಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಎರಡು ತಿಂಗಳ ಹೆಣ್ಣು ಮಗುವಿನ ಶವ ಮೈಕ್ರೋವೇವ್ ಓವನ್‌ನಲ್ಲಿ ಪತ್ತೆಯಾಗಿತ್ತು. ಹೆಣ್ಣು ಮಗುವಿನ ಜನನದಿಂದ ಅಸಮಾಧಾನಗೊಂಡ ತಾಯಿಯೇ ಈ ಕೃತ್ಯವೆಸಗಿದ್ದಳು. ಮೃತ ಮಗು ಅನನ್ಯಾ (Ananya) ಈ ವರ್ಷದ ಜನವರಿಯಲ್ಲಿ ಜನಿಸಿದರು ಮತ್ತು ಅಂದಿನಿಂದ ಮಗುವಿನ ತಾಯಿ ಡಿಂಪಲ್ ಕೌಶಿಕ್ ಅಸಮಾಧಾನಗೊಂಡಿದ್ದರು. ಅವರು ಈ ವಿಷಯದ ಬಗ್ಗೆ ತಮ್ಮ ಪತಿಯೊಂದಿಗೆ ಜಗಳವಾಡಿದರು ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.