12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ, ಆರೋಪಿ ವಿರುದ್ಧ ಕೇಸ್ ದಾಖಲು
Crime News Today: ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿದ್ದ 12 ವರ್ಷದ ಬಾಲಕಿ ಪ್ರಕರಣ ಸಂಬಂಧ ಅತ್ಯಾಚಾರದ ಕೇಸನ್ನು ಪೊಲೀಸರು ದಾಖಲಿಸಿದ್ದಾರೆ. ಪರಿಚಯಸ್ಥ ಯುವಕನೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾನೆಂದು ಶಂಕಿಸಲಾಗಿದೆ.
ಕನ್ನೌಜ್: ಎರಡು ದಿನಗಳ ಹಿಂದೆ ಗಾಯಗೊಂಡ ಸ್ಥಿತಿಯಲ್ಲಿ ಹನ್ನೆರಡು ವರ್ಷದ ಬಾಲಕಿಯೊಬ್ಬಳು ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ ಬಳಿಕ ಆಕೆಯ ವಿಚಾರಣೆ ನಡೆಸಿದ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರಿ ಗೆಸ್ಟ್ ಹೌಸ್ ಒಂದರಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿರುವ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಅದರ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾಗ, ಜನ ಅವಳ ವಿಡಿಯೋವನ್ನು ಮಾಡುತ್ತಿದ್ದರು. ನಂತರ ಪೊಲೀಸ್ ಅಧಿಕಾರಿಯೊಬ್ಬ ಆಕೆಯನ್ನು ಎತ್ತಿಕೊಂಡು ಓಡೋಡಿ ಆಸ್ಪತ್ರೆಗೆ ದಾಖಲಿಸಿದ ವಿಡಿಯೋ ಕೂಡ ವೈರಲ್ ಆಗಿತ್ತು. ಮಾನವೀಯತೆಯೇ ಇಲ್ಲದ ಜನ ವಿಡಿಯೋ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಮತ್ತು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಂಡ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಅದಾದ ನಂತರ ಸ್ಥಳಕ್ಕೆ ಪೊಲೀಸರು ತಲುಪುವ ವೇಳೆಗೆ ಜನ ಗುಂಪು ಸೇರಿ ವಿಡಿಯೋ ಮಾಡುತ್ತಿದ್ದರು. ಪೋಕ್ಸೊ, IPC 376, IPC 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಆರೋಪಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಆತನನ್ನು ಬಂಧಿಸಲು ತಂಡ ಹುಡುಕಾಟದಲ್ಲಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸುತ್ತೇವೆ," ಎಂದು ಕುನ್ವಾರ್ ಜಿಲ್ಲಾ ಎಸ್‌ಪಿ ಅನುಪಮ್ ಸಿಂಗ್ ತಿಳಿಸಿದ್ದಾರೆ. "ಹುಡುಗಿಯ ಆರೋಗ್ಯ ಸ್ಥಿತಿ ಮುಂಚಿಗಿಂತ ಸುಧಾರಿಸಿದ್ದು, ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ," ಎಂದು ಅನುಪಮ್ ಹೇಳಿದ್ದಾರೆ.
ಇದನ್ನೂ ಓದಿ: ಸಹಾಯಕ್ಕಾಗಿ ಬೇಡುತ್ತಿದ್ದ ಗಾಯಾಳು: ವಿಡಿಯೋ ಮಾಡೋದರಲ್ಲೇ ಬ್ಯುಸಿಯಾದ್ರು ಕರುಣೆಯಿಲ್ಲದ ಜನ
ಬಾಲಕಿಯ ಚಿಕಿತ್ಸೆಗೆ ಪ್ರತಿನಿತ್ಯ ಒಂದು ಲಕ್ಷ ಖರ್ಚಾಗುತ್ತಿದ್ದ, ಸಂತ್ರಸ್ಥೆಯ ತಂದೆ ಎರಡೂವರೆ ಲಕ್ಷವನ್ನಷ್ಟೇ ಹೊಂದಿಸಿದ್ದಾರೆ. ನಂತರ ಸುಮಾರು ಏಳು ಲಕ್ಷ ರೂಪಾಯಿಗಳನ್ನು ಸ್ಥಳೀಯರ ಸಹಾಯದಿಂದ ಹೊಂದಿಸಲಾಗಿದೆ ಎಂದೂ ಅನುಪಮ್ ಮಾಹಿತಿ ನೀಡಿದರು. ಬಾಲಕಿಯ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುವ ಭರವಸೆ ಇನ್ನೂ ಸಿಕ್ಕಿಲ್ಲ. ಬಾಲಕಿಯ ಪೋಷಕರು ತಮ್ಮ ಕೈಲಾದಷ್ಟು ವ್ಯವಸ್ಥೆ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಸಂತ್ರಸ್ಥೆಯ ನೆರವಿಗೆ ನಿಲ್ಲುವ ಅನಿವಾರ್ಯತೆಯಿದೆ.
ಇದನ್ನೂ ಓದಿ: ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕ
ಬಾಲಕಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು. ಹುಡುಗಿ ಇನ್ನೂ ಹೇಳಿಕೆ ನೀಡುವಷ್ಟು ಗುಣಮುಖರಾಗಿಲ್ಲ. ಆಕೆಯ ಆರೋಗ್ಯ ಸುಧಾರಿಸಿದ ನಂತರ ಹೇಳಿಕೆ ಪಡೆಯುತ್ತೇವೆ ಎಂದು ಅನುಪಮ್ ಸಿಂಗ್ ಹೇಳಿದ್ದಾರೆ. ಬಾಲಕಿ ಭಾನುವಾರ ಪಿಗ್ಗಿ ಬ್ಯಾಂಕ್ ಖರೀದಿಸಲು ಮನೆಯಿಂದ ಆಚೆ ಹೋಗಿದ್ದಳು. ಆಗ ಅವಳನ್ನು ಅಪಹರಿಸಿ ಅವಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲು ಯತ್ನಿಸಲಾಗಿದೆ. ನಂತರ ಪೋಷಕರು ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು. ಪೊಲೀಸರು ಬಾಲಕಿಯ ಹುಡುಕಾಟ ಆರಂಭಿಸಿದ್ದರು. ಸರ್ಕಾರಿ ಗೆಸ್ಟ್ ಹೌಸ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ಯುವಕನೊಬ್ಬನ ಜೊತೆ ಮಾತನಾಡುತ್ತಿರುವುದು ಸೆರೆಯಾಗಿದೆ. ಆತನೇ ಆರೋಪಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.