ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕ
Crime News Today: ದೀಪಾವಳಿ ಹಬ್ಬ ಬಂತೆಂದರೆ ದೇಶದ ತುಂಬೆಲ್ಲಾ ಬರೀ ಪಟಾಕಿಯದ್ದೇ ಸದ್ದು. ಸರ್ಕಾರ ನಿಷೇಧ ಮಾಡಿದರೂ ಅದು ನಾಮಕಾವಸ್ಥೆಗಷ್ಟೆ. ಮುಂಬೈನಲ್ಲಿ ಪಟಾಕಿ ಹೊಡೆಯಬೇಡಿ ಎಂದು ಕಿವಿಮಾತು ಹೇಳಲು ಹೋಗಿದ್ದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕರು ಕೊಲೆ ಮಾಡಿದ್ದಾರೆ.
ಮುಂಬೈ: ದೀಪಾವಳಿ ಸಮಯದಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪಟಾಕಿ ಹೊಡೆದು ಸಂಭ್ರಮ ಪಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಿಂದ ಪಟಾಕಿಯನ್ನು ಬಹುತೇಕ ರಾಜ್ಯಗಳಲ್ಲಿ ಬ್ಯಾನ್ ಮಾಡಲಾಗಿದೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಈಗಾಗಲೇ ಹದಗೆಟ್ಟಿದ್ದು ಪಟಾಕಿಯಿಂದ ಇನ್ನಷ್ಟು ಹೆಚ್ಚಲಿದೆ ಎಂಬ ಕಾರಣಕ್ಕೆ ಸರ್ಕಾರಗಳು ಪಟಾಕಿಗೆ ನಿಷೇಧ ಹೇರಿವೆ. ಆದರೆ ಹಬ್ಬದ ವೇಳೆ ಈ ನಿಷೇಧ ನಾಮಕಾವಸ್ಥೆಷ್ಟೇ ಸೀಮಿತ. ಜನ ಪಟಾಕಿ ಹೊಡೆಯುತ್ತಲೇ ಇರುತ್ತಾರೆ. ಪರಿಸರ ಮಾಲಿನ್ಯವಾಗುತ್ತದೆ ಪಟಾಕಿ ಹೊಡೆಯಬೇಡಿ ಎಂದು ಅಪ್ರಾಪ್ತರಿಗೆ ಬುದ್ದಿ ಹೇಳಲು ಹೋದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಮುಂಬೈನಲ್ಲಿ ನಡೆದಿದೆ.
ಗಾಜಿನ ಬಾಟಲಿಯಲ್ಲಿ ಪಟಾಕಿ ಇಟ್ಟು ಹೊಡೆಯುತ್ತಿದ್ದ ಬಾಲಕನಿಗೆ ಬುದ್ದಿ ಹೇಳಲು ವ್ಯಕ್ತಿ ಹೋಗಿದ್ದಾನೆ. ಪಟಾಕಿ ಹೊಡೆಯುವುದರಿಂದ ಪರಿಸರಕ್ಕೆ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಲು ಮುಂದಾದಾಗ ಹುಡುಗ ಜಗಳಕ್ಕೆ ಇಳಿದಿದ್ದಾನೆ. ಸ್ವಲ್ಪ ಸಮಯದ ನಂತರ ಹುಡುಗ ಅಣ್ಣಂದಿರು ಅಲ್ಲಿಗೆ ಬಂದಿದ್ದಾರೆ. ಅವರೂ ಅಪ್ರಾಪ್ತರೇ. ಮೂವರೂ ಏಕಾಏಕಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ನಂತರ ದೊಡ್ಡ ಅಣ್ಣ ಚಾಕುವಿನಿಂದ ವ್ಯಕ್ತಿಗೆ ಚುಚ್ಚಿದ್ದಾನೆ. ಸಂತ್ರಸ್ಥನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮೃತನನ್ನು ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ. ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಮುಂಬೈನ ಶಿವಾಜಿನಗರದ ಮೈದಾನದ ಬಳಿ ಈ ಘಟನೆ ನಡೆದಿದೆ. ಆರೋಪಿಗಳೆಲ್ಲರೂ 12ರಿಂದ 15 ವರ್ಷದ ಒಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿಯಿಂದ ಪ್ರತಿ ವರ್ಷ ಸಾವಿರಾರು ಜನ ಗಾಯಗೊಳ್ಳುತ್ತಾರೆ. ಹಲವಾರು ಮಂದಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾರೆ. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ಪರಿಸರವಷ್ಟೇ ಅಲ್ಲದೇ ಜನ, ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತದೆ. ಆದರೂ ಜನ ಪಟಾಕಿ ಹೊಡೆಯುವುದನ್ನು ನಿಲ್ಲಿಸುವುದಿಲ್ಲ. ಈಗ ಪಟಾಕಿ ವಿಚಾರಕ್ಕೆ ಕೊಲ ನಡೆದಿರುವುದು ವಿಪರ್ಯಾಸ.
ಹಸಿರು ಪಟಾಕಿಯೂ ಡೇಂಜರ್:
ಹಸಿರು ಪಟಾಕಿಗಳು ಸಂಪೂರ್ಣ ರಾಸಾಯನಿಕ ಮುಕ್ತವಲ್ಲ. ಮಾಲಿನ್ಯ ಮಾತ್ರ ತುಸು ತಗ್ಗಿಸಲಿದ್ದು, ಬೆಂಕಿ ಕಿಡಿ ಮತ್ತು ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಗಳಂತೆಯೇ ಹೆಚ್ಚಿರುತ್ತದೆ. ಹೀಗಾಗಿ, ಹಸಿರು ಪಟಾಕಿ ಸಿಡಿಸುವುದರಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ವರ್ಷಗಳಿಂದ ಕಡ್ಡಾಯ ಹಸಿರು ಪಟಾಕಿ ಬಳಕೆ ಕ್ರಮ ಜಾರಿಯಲ್ಲಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಮಂದಿಗೆ ಪಟಾಕಿಯಿಂದ ಹಾನಿಯಾಗಿದೆ.
10 ಮಂದಿಗೆ ದೃಷ್ಟಿಹಾನಿಯಾಗಿದೆ. ಮುಖ್ಯವಾಗಿ ಹಸಿರು ಪಟಾಕಿಗಳ ಕುರಿತು ಸಾರ್ವಜನಿಕರಲ್ಲಿರುವ ಮಾಹಿತಿ ಕೊರತೆಯೇ ಪಟಾಕಿ ಹೆಚ್ಚಿನ ಹಾನಿಗೆ ಕಾರಣ ಎನ್ನುತ್ತಾರೆ ವೈದ್ಯರು. 2018ರಲ್ಲಿ ಸುಪ್ರೀಂಕೋರ್ಟ್ ‘ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿ ಬಳಸುವಂತೆ’ ಸೂಚನೆ ನೀಡಿತ್ತು. ಈ ಹಿನ್ನೆಲೆ 2019ರಿಂದ ರಾಜ್ಯ ಸರ್ಕಾರಗಳು ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಕಾನೂನು ಜಾರಿ ಮಾಡಿತು.
Firecrackers: ನಿಷೇಧದ ನಡುವೆ ಬೆಂಗಳೂರಿನಲ್ಲಿ ಹಳೆ ಪಟಾಕಿ ಮಾರಾಟ?
ಆದರೆ, ಹಸಿರು ಪಟಾಕಿ ತಯಾರಿಯಲ್ಲಿಯೂ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಕಾರ್ಬನ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ, ಸಾಮಾನ್ಯ ಪಟಾಕಿಗಿಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಇದರಿಂದಾಗಿ ಪಟಾಕಿಗಳಿಂದ ಮಾಲಿನ್ಯ ಶೇ.30ರಷ್ಟು, ಶಬ್ದ 160 ಡೆಸಿಬಲ್‌ಗಿಂತ 125 ಡೆಸಿಬಲ್‌ಗೆ ಕಡಿಮೆಯಾಗುತ್ತದೆ. ಉಳಿದಂತೆ ಸ್ಫೋಟ, ಶಾಖ, ಬೆಳಕಿನ ಉತ್ಪತ್ತಿ, ತ್ಯಾಜ್ಯ ಪ್ರಮಾಣ ಎಲ್ಲಾ ಅಂಶಗಳು ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ.
ಇದನ್ನೂ ಓದಿ: ಪಟಾಕಿ ವಿಷಕಾರಿ ಹೊಗೆ ಉಸಿರಾಟದ ಸಮಸ್ಯೆಯ ಅಪಾಯ ಹೆಚ್ಚಿಸುತ್ತೆ ಎಚ್ಚರ..!
ಜನರಲ್ಲಿ ತಪ್ಪು ಕಲ್ಪನೆ: ಹಸಿರು ಪಟಾಕಿಯಲ್ಲಿ ರಾಸಾಯನಿಕ ಅಂಶ ಇರುವುದಿಲ್ಲ, ಕಣ್ಣು, ಮೈಕೈ ಭಾಗಕ್ಕೆ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ. ಜತೆಗೆ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ಹೆಸರಲ್ಲಿ ಸಾಮಾನ್ಯ ಪಟಾಕಿಯೇ ಹೆಚ್ಚು ಮಾರಾಟವಾಗುತ್ತಿದೆ. ಇದರಿಂದ ಹಾನಿ ಪಟಾಕಿ ಹಾನಿಗಳು ಉಂಟಾಗುತ್ತಿವೆ. ಇತ್ತ ಹಸಿರು ಪಟಾಕಿ ನಿಯಮ ಜಾಗೃತಿ ಮೂಡಿಸಿ ಯಶಸ್ವಿಯಾಗಿ ಜಾರಿಗೊಳಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಆಡಳಿತ ಸಂಸ್ಥೆಗಳು, ಪೊಲೀಸ್ ಇಲಾಖೆಗೆ ನಿರ್ಲಕ್ಷ್ಯ ವಹಿಸಿದ್ದು, ಪಟಾಕಿ ಮುಂದುವರೆದಿವೆ ಎನ್ನುತ್ತಾರೆ ಪರಿಸರ ತಜ್ಞರು.