ಸಹಾಯಕ್ಕಾಗಿ ಬೇಡುತ್ತಿದ್ದ ಗಾಯಾಳು: ವಿಡಿಯೋ ಮಾಡೋದರಲ್ಲೇ ಬ್ಯುಸಿಯಾದ್ರು ಕರುಣೆಯಿಲ್ಲದ ಜನ
Inhuman Video: ಮೊಬೈಲ್ ಬಂದ ನಂತರ ಜನ ಎಷ್ಟು ಬದಲಾಗಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತೀವ್ರವಾಗಿ ಗಾಯಗೊಂಡಿರುವ ಹುಡುಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ ಜನ ಆಕೆಯ ವಿಡಿಯೋ ಮಾಡುತ್ತಿದ್ದರು.
ಲಖನೌ: ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಅಮಾನವೀಯ ದೃಶ್ಯವೊಂದು ಸೆರೆಯಾಗಿದೆ. 13 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಹಾಯಕ್ಕಾಗಿ ಆಕೆ ಬೇಡುತ್ತಿದ್ದರೂ ಕರುಣೆಯಿಲ್ಲದ ಜನ ಆಕೆಯ ವಿಡಿಯೋ ಮಾಡುತ್ತಿದ್ದರು. ಮಾನವೀಯ ಮೌಲ್ಯಗಳು ಸಂಪೂರ್ಣವಾಗಿ ಮರೆಯಾಗಿ ಹೋಗಿದೆ ಎಂಬುದಕ್ಕೆ ಪುರಾವೆಯಂತಿದೆ ಈ ಘಟನೆ. ಸಾವು ಬದುಕಿನ ನಡುವೆ ಪುಟ್ಟ ಬಾಲಕಿ ನರಳುತ್ತಿದ್ದರೆ ಅದರ ವಿಡಿಯೋ ಮಾಡುತ್ತಿರುವ ಜನರನ್ನು ಮನುಷ್ಯರು ಎಂದು ಹೇಳಲು ಸಾಧ್ಯವೇ? ಭಾನುವಾರ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ನಂತರ ಇಡೀ ಮೈ ಗಾಯಗಳಾಗಿತ್ತು. ತಲೆಗೂ ಪೆಟ್ಟು ಬಿದ್ದಿತ್ತು. ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು. ಆದರೆ ಒಂದಿಷ್ಟು ಜನರ ಗುಂಪು ಸಹಾಯ ಮಾಡುವುದರ ಬದಲು ಅದರ ವಿಡಿಯೋ ಮಾಡಲು ಆರಂಭಿಸಿದರು. ಸುಮಾರು 25 ಸೆಕಂಡ್‌ಗಳ ವಿಡಿಯೋದಲ್ಲಿ ಜನರ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಆಕೆಯ ಗಾಯಗಳಿಗೆ ಯಾರು ಕಾರಣರೋ ಅಷ್ಟೇ ತಪ್ಪಿತಸ್ಥರು ಈ ವಿಡಿಯೋ ಮಾಡುತ್ತಿದ್ದ ಜನರೂ ಹೌದು.
ಇದನ್ನೂ ಓದಿ: Crime News: ಸಂಬಂಧಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ಅಮಾನತು
ವಿಡಿಯೋದಲ್ಲಿ ಜನ ಮಾತನಾಡುವುದೂ ಸಹ ಕೇಳುತ್ತದೆ. ಒಬ್ಬ ಕೇಳುತ್ತಾನೆ ಪೊಲೀಸರಿಗೆ ಮಾಹಿತಿ ನೀಡಿದರಾ ಎಂದು. ಇನ್ನೊಬ್ಬ ಪೊಲೀಸ್ ಅಧಿಕಾರಿಗಳ ನಂಬರ್ ಇದೆಯಾ ಎಂದು. ಆದರೆ ವಿಡಿಯೋ ಮಾತ್ರ ಮುಂದುವರೆಯುತ್ತದೆ. ಒಬ್ಬರ ಸಾವಿನಲ್ಲೂ ಮನರಂಜನೆ ಹುಡುಕುವ ಕೀಳು ಮಟ್ಟದ ಮಾನಸಿಕ ದಿವಾಳಿತನ ಇದು ಎಂದರೆ ತಪ್ಪಾಗಲಾರದು.
ನಂತರ ಪೊಲೀಸ್ ಬರುವವರೆಗೂ ಗಾಯಾಳು ಹುಡುಗಿ ಸಹಾಯಕ್ಕಾಗಿ ಅಂಗಲಾಚುತ್ತಲೇ ಇದ್ದಳು. ಪೊಲೀಸ್ ಒಬ್ಬರು ಸ್ಥಳಕ್ಕೆ ಬಂದ ತಕ್ಷಣ ಬಾಲಕಿಯನ್ನು ಎತ್ತಿಕೊಂಡು ಆಟೋ ರಿಕ್ಷಾದೊಳಗೆ ಓಡೋಡಿ ಕೊಂಡೊಯ್ಯುತ್ತಾರೆ. ಅದರ ವಿಡಿಯೋ ಕೂಡ ವೈರಲ್ ಆಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ, ಬಲವಂತದ ಮದುವೆ
"ಅಪ್ರಾಪ್ತ ಬಾಲಕಿಯೊಬ್ಬಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿಗೆ ಕಾರಣವೇನು ಮತ್ತು ಯಾರು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ," ಎಂದು ಕುನ್ವಾರ್ ಜಿಲ್ಲೆಯ ಎಸ್‌ಪಿ ಅನುಪಮ್ ಸಿಂಹ್ ಮಾಹಿತಿ ನೀಡಿದ್ದಾರೆ. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆಯಾ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮತ್ತು ಪ್ರಕರಣ ಸಂಬಂಧ ಇದುವರೆಗೂ ಯಾವುದೇ ಬಂಧನವಾಗಿಲ್ಲ.