Udupi: ಹಾವಿನ ವಿಷ ಚುಚ್ಚಿ ಮಡದಿಯನ್ನು ಕೊಂದ ಪ್ರಕರಣ, ಆರೋಪಿ ವೈದ್ಯ ಖುಲಾಸೆ
ಬರೋಬ್ಬರಿ 12 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಬೆಳಂಜೆ ತೆಂಕೋಲದಲ್ಲಿ ನಡೆದ ಭಾಗೀರಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿರುವ ಕಾರಣ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್
ಉಡುಪಿ (ನ.4): ಬರೋಬ್ಬರಿ 12 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಬೆಳಂಜೆ ತೆಂಕೋಲದಲ್ಲಿ ನಡೆದ ಭಾಗೀರಥಿ(32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿರುವ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ. ಹಾಸನದ ವೈದ್ಯ ಡಾ. ಸುರೇಶ್ ಪ್ರಭು , ಇವರ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಾರದೆ ವೈಮನಸ್ಸು ಉಂಟಾಗಿದ್ದರಿಂದ ಆತ ವಿಚ್ಚೇದನ ನೀಡಲು ಬಯಸಿದ್ದ. ಆದರೆ ಭಾಗೀರಥಿ ಇದಕ್ಕೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿಯು ತಾನು ಬೇರೆ ಮದುವೆಯಾಗಿ ನೆಮ್ಮದಿಯಿಂದ ಇರಬೇಕಾದರೆ ಭಾಗೀರಥಿಯು ಸಾಯಬೇಕೆಂದು ಆಕೆಯನ್ನು ಕೊಲೆ ಮಾಡಲು ತೀರ್ಮಾನಿಸಿ ತನ್ನ ಸ್ನೇಹಿತ ಮಂಜ ಯಾನೆ ಮಂಜುನಾಥ್ ಅವನೊಡನೆ ವಿಷಯ ತಿಳಿಸಿದ್ದ.
ಹಾವಾಡಿಗನಿಂದ ವಿಷ ಸಂಗ್ರಹ: ಮಂಜುನಾಥನು ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಆಕೆಯನ್ನು ಕೊಲೆ ಮಾಡಿದರೆ, ಆಕೆಗೆ ಹಾವು ಕಚ್ಚಿ ಮೃತಪಟ್ಟಿದ್ದಾಳೆಂದು ಎಲ್ಲರನ್ನೂ ನಂಬಿಸಬಹುದು ಎಂಬುವುದಾಗಿ ತಿಳಿಸಿ ಸಂಚು ರೂಪಿಸಿದನು. ಬಳಿಕ ಮಂಜುನಾಥ್ ಹಾಗೂ ನಿರಂಜನ್ ರಾಜ್ ಅರಸ್ ಯಾನೆ ಅಚ್ಚನಿ ಅವರು ಸೇರಿ ಏಡ್ಸ್ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಬಗ್ಗೆ ನಾಗರಹಾವಿನ ವಿಷ ಬೇಕಾಗಿದೆ ಎಂದು ತಮ್ಮ ಪರಿಚಯದ ಹಾಸನದ ಹಾವಾಡಿಗ ಕೇಶವನಲ್ಲಿ ಸುಳ್ಳು ಹೇಳಿ ಆತನನ್ನು ನಂಬಿಸಿದ್ದರು. ಅದರಂತೆ ಕೇಶವನು ನಾಗರ ಹಾವಿನಿಂದ ವಿಷವನ್ನು ಕಕ್ಕಿಸಿ ತೆಗೆದು ನೀಡಿದ್ದ. ಭಾಗೀರಥಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಂಜುನಾಥ ಹಾಗೂ ನಿರಂಜನ್ ರಾಜ್ ಅರಸ್ ನಾಗರಹಾವಿನ ವಿಷವನ್ನು ಸಂಗ್ರಹಿಸಿ ಸುರೇಶ್ ಪ್ರಭುವಿಗೆ ನೀಡಿದ್ದರು.
ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಶ್ ಪ್ರಭು 2010ರ ಜ.5ರಂದು ಹಾಸನದ ಜಿಲ್ಲಾ ಸ್ಟೇಡಿಯಂ ಬಳಿ ಸಂಚು ರೂಪಿಸಿದ್ದಾನೆ.
ಇದನ್ನು ಕಾರ್ಯಗತಗೊಳಿಸಲು ಜ.6ರಂದು ಬೆಳಗ್ಗೆ ಮಂಜುನಾಥ್ ನೀಡಿದ್ದ ನಾಗರಹಾವಿನ ವಿಷದಲ್ಲಿ ಸ್ವಲ್ಪ ಒಂದು ಸಿರೀಂಜ್‌ಗೆ ಲೋಡ್ ಮಾಡಿ ತಾನೇ ಇಟ್ಟುಕೊಂಡು ಉಳಿದ ವಿಷವನ್ನು ಸಣ್ಣ ಬಾಟಲಿ ಹಾಗೂ ಇನ್ನೊಂದು ಸಿರಿಂಜ್ ನ್ನು ಮಂಜುನಾಥನಿಗೆ ನೀಡಿ ಆತನೊಡನೆ ಮಾರುತಿ 800 ಕಾರಿನಲ್ಲಿ ನಿರಂಜನ್ ರಾಜ್ ಅರಸ್, ಬಸವೇ ಗೌಡ, ಪರಮೇಶ ಅವರೊಂದಿಗೆ ಹಾಸನದಿಂದ ಚಿಕ್ಕಮಗಳೂರು ಮಾರ್ಗವಾಗಿ ಹೆಬ್ರಿ ಸಮೀಪದ ಸೋಮೇಶ್ವರಕ್ಕೆ ಕರೆದುಕೊಂಡು ಬಂದು ಕಾದು ನಿಲ್ಲುವಂತೆ ಸೂಚಿಸುತ್ತಾರೆ. ಈ ಪೈಕಿ ಭಾಗೀರಥಿಗೆ ಕೆಲವೊಬ್ಬರ ಪರಿಚಯವಿರುವುದರಿಂದ ಆಕೆಯ ಎದುರಿಗೆ ಸಿಗಬಾರದೆಂದು ಸುರೇಶ್ ಪ್ರಭು ಸೂಚಿಸಿದ್ದರು.
ಸೋಮೇಶ್ವರ ತಲುಪಿದ ಬಳಿಕ ಮಂಜುನಾಥ ಸಣ್ಣ ವಿಷದ ಬಾಟ್ಲಿಯಲ್ಲಿರುವ ನಾಗರಹಾವಿನ ವಿಷವನ್ನು ತಾನು ಕೊಟ್ಟಂತಹ ಸಿರೀಂಜ್‌ಗೆ ಲೋಡ್ ಮಾಡಿ ನಿರಂಜನ್ ರಾಜ್ ಅರಸ್‌ಗೆ ನೀಡಿ ಭಾಗೀರಥಿಯನ್ನು ಚುಚ್ಚಿ ಕೊಲೆ ಮಾಡುವಂತೆ ಪತಿ ತಿಳಿಸಿದ್ದರು. ಬಳಿಕ ತನ್ನ ಮಾರುತಿ 800 ಕಾರಿನಲ್ಲಿ ತನ್ನ ಪತ್ನಿ ಭಾಗೀರಥಿಯೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಸಲುವಾಗಿ ಹಾಸನದಿಂದ ಹೊರಟು ರಾತ್ರಿ ಭಾಗೀರಥಿಯ ಅಣ್ಣ ಎನ್.ಜಿ.ಸೀತಾರಾಮ ಅವರ ಮನೆಯಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ನಗರಕ್ಕೆ ಹೋಗುವ ಕಾರ್ಯಕ್ರಮ ಗೊತ್ತು ಮಾಡಿಕೊಂಡಿದ್ದರು.
ಸುರೇಶ್ ಪ್ರಭು ತನ್ನ ಸೋದರ ಮಾವ ಶಂಕರ ಪ್ರಭು ಅವರ ಮನೆಯಾದ ಹೆಬ್ರಿ ಸಮೀಪದ ಬೈಕಾಡಿಯಲ್ಲಿ ಉಳಿದುಕೊಳ್ಳುವ ಎಂದು ಭಾಗೀರಥಿಯನ್ನು ನಂಬಿಸಿ ಶಿವಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ-ಸೋಮೇಶ್ವರ ಮಾರ್ಗವಾಗಿ ಕರೆದುಕೊಂಡು ಬಂದು ರಾತ್ರಿ ಸುಮಾರು 7.45 ರಿಂದ 8 ಗಂಟೆಯ ವೇಳೆಗೆ ಹೆಬ್ರಿ ನಡ್ಪಾಲುವಿನ ಗ್ರಾಮದ ಸೋಮೇಶ್ವರಕ್ಕೆ ತಲುಪಿದಾಗ ಅಲ್ಲಿ ಮಂಜುನಾಥ ಇತರರೊಂದಿಗೆ ಸೇರಿ ಸಣ್ಣ ಬಾಟಲಿಯಲ್ಲಿದ್ದ ನಾಗರಹಾವಿನ ವಿಷವನ್ನು ಸಿರೀಂಜ್‌ಗೆ ಲೋಡ್ ಮಾಡಿ ಭಾಗೀರಥಿಗೆ ಸೋಮೇಶ್ವರದಿಂದ ಮಡಾಮಕ್ಕಿ ರಸ್ತೆಯಲ್ಲಿ ಹೋಗುತ್ತ ರಾತ್ರಿ ಸುಮಾರು 8.30 ರಿಂದ 9ರ ವೇಳೆಗೆ ನಿರ್ಜನ ಸ್ಥಳದಲ್ಲಿ ನಾಗರಹಾವಿನ ವಿಷ ತುಂಬಿದ್ದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದರು.
ಭಾಗೀರಥಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ನಾಗರ ಹಾವಿನ ವಿಷವು ಖಾಲಿಯಾದ 2 ಸಿರಿಂಜ್‌ಗಳು, ಖಾಲಿಯಾದ ನಾಗರಹಾವಿನ ವಿಷದ ಸಣ್ಣ ಬಾಟಲಿ ಮತ್ತು ಟವೆಲ್‌ಗಳನ್ನು ಅಲ್ಲಿಯೇ ರಸ್ತೆ ಪಕ್ಕದ ಕಾಡಿನಲ್ಲಿ ಎಸೆದಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದರು.
4 ಬಾರಿ ಹಾವು ಕಚ್ಚಿದ್ರೂ "ಐಯಾಮ್ ಸ್ಟೆಡಿ" ಎಂದು ಗಟ್ಟಿ ನಿಂತ ವ್ಯಕ್ತಿ; ಕುಡುಕರ ಶಕ್ತಿ ಅಂದ್ರೆ ಏನಂದುಕೊಂಡ್ರಿ!
ಪತಿಯೇ ದೂರು ದಾಖಲಿಸಿದ್ದರು: ಪತಿ ಸುರೇಶ್ ಪ್ರಭು ತಾನು ನಡೆಸಿದ ಕೊಲೆ ಕೃತ್ಯವು ಬೆಳಕಿಗೆ ಬರಬಾರದೆಂಬ ಉದ್ದೇಶದಿಂದ ಪತ್ನಿಗೆ ಯಾವುದೋ ವಿಷದ ಹಾವು ಕಚ್ಚಿದೆ ಎಂದು ಆಕೆಯ ಮನೆಯವರನ್ನು ನಂಬಿಸಲು ಭಾಗೀರಥಿಯನ್ನು ಹೆಬ್ರಿಯ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ ಬಳಿಕ ಯಾವುದೇ ಸಾಕ್ಷಿ, ಪುರಾವೆ ಸಿಗಬಾರದೆಂಬ ಉದ್ದೇಶದಿಂದ ಯಾವುದೋ ವಿಷದ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಸ್ವತಃ ಸುರೇಶ್ ಪ್ರಭು ದೂರು ದಾಖಲಿಸಿದ್ದರು ಎಂದು ದೋಷಾರೋಪಪಟ್ಟಿಯಲ್ಲಿ ವರದಿ ನೀಡಲಾಗಿತ್ತು. ಆರೋಪಿಗಳ ಪರವಾಗಿ ಉಡುಪಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.
ಮುದ್ದೇಬಿಹಾಳ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು
2010ರ ಜ.6 ರಂದು ಹೆಬ್ರಿ ಠಾಣಾ ವ್ಯಾಪ್ತಿಯ ನಡೆದ ಘಟನೆಯೂ ಅಂದಿನ ಕಾಲಕ್ಕೆ ರಾಜ್ಯ ಮಟ್ಟದ ಸುದ್ದಿಯಾಗಿದ್ದು, ಹಾವಿನ ವಿಷವನ್ನು ನೀಡಿ ಕೊಲೆ ಗೈದಿದ್ದಾರೆ ಎಂದು ಸಂಚಲನ ಮೂಡಿಸಿತ್ತು. ಮೃತ ಭಾಗೀರಥಿಯ ಸಹೋದರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಮುಖ್ಯಮಂತ್ರಿಗಳು ಉಡುಪಿ ಜಿಲ್ಲಾ ಎಸ್‌ಪಿ ಅವರಿಗೆ ತನಿಖೆ ಮಾಡುವಂತೆ ಆದೇಶಿಸಿದ್ದರು. ಅನಂತರ ಎಸ್‌ಪಿಯವರು ಡಿಸಿಐಬಿ ಇನ್‌ಸ್ಪೆಕ್ಟರ್ ಗಣೇಶ್ ಹೆಗ್ಡೆ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ತನಿಖೆ ನಡೆಸಿದ ಅವರು ಮೃತರ ಪತಿ ಸುರೇಶ್ ಪ್ರಭು ಹಾಗೂ ಇತರ 6 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ 57 ಸಾಕ್ಷ್ಯಾಧಾರಗಳನ್ನು ಒಳಗೊಂಡ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.