ಮುಂಬೈ ದಾಳಿ ದಿನಾಂಕವೇ ರಿಯಾಜ್ ಬೈಕ್ ನಂಬರ್, ಕನ್ಹಯ್ಯನ ಕತ್ತು ಕುಯ್ದ ಕತ್ತಿಯನ್ನು ತಾನೇ ತಯಾರಿಸಿದ್ದ!
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್‌ನ ಕತ್ತು ಕುಯ್ಯಲು ಬಳಸಿದ ಕತ್ತಿಯನ್ನು ರಿಯಾಜ್ ಅಟ್ಟಾರಿ ಹಾಗೂ ಮೊಹಮದ್ ಗೌಸ್ ಯಾವುದೇ ಅಂಗಡಿಯಲ್ಲಿ ಖರೀದಿಸಿರಲಿಲ್ಲ. ಅವರ ಫ್ಯಾಕ್ಟರಿಯಲ್ಲಿ ಸ್ವತಃ ಇಬ್ಬರೇ ಸೇರಿ ಕತ್ತಿಯನ್ನು ತಯಾರಿಸಿದ್ದರು. ಅದಲ್ಲದೆ, ಆರೋಪಿಯಾಗಿರುವ ರಿಯಾಜ್ ತನ್ನ ಬೈಕ್ ನಂಬರ್‌ಆಗಿ 2008ರಲ್ಲಿ ಮುಂಬೈ ದಾಳಿಯ ದಿನಾಂಕವನ್ನು (2611) ಹೊಂದಿದ್ದ ಎನ್ನುವುದು ಬಹಿರಂಗವಾಗಿದೆ.
ಜೈಪುರ (ಜೂನ್ 30): ಉದಯಪುರದಲ್ಲಿ (Udaipur) ನಡೆದ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದಲ್ಲಿ ದೊಡ್ಡ ಮಾಹಿತಿ ಬಹಿರಂಗವಾಗಿದೆ. ನೂಪುರ್ ಶರ್ಮ (Nupur Sharma) ಅವರನ್ನು ಬೆಂಬಲಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಕಾರಣಕ್ಕೆ ವೃತ್ತಿಯಲ್ಲಿ ಟೈಲರ್ ಆಗಿದ್ದ ಕನ್ಹಯ್ಯಲಾಲ್‌ರನ್ನು ಹಾಡುಹಗಲೇ ಅವರ ಅಂಗಡಿಯಲ್ಲಿಯೇ ಶಿರಚ್ಛೇದ ಮಾಡಲಾಗಿತ್ತು.
ಶಿರಚ್ಛೇದ ಮಾಡಿದ್ದಲ್ಲದೆ, ಇದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಆರೋಪಿಗಳಾದ ರಿಯಾಜ್ ಅಟ್ಟಾರಿ (Riyaz Attari) ಹಾಗೂ ಮೊಹಮದ್ ಗೌಸ್‌ನನ್ನು (Mohammad Ghaus) ಅದೇ ದಿನ ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಬುಧವಾರ ಈ ಪ್ರಕರಣವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿತ್ತು.
ಇದರ ಬೆನ್ನಲ್ಲಿಯೇ ಪ್ರಕರಣದಲ್ಲಿ ದೊಡ್ಡ ಮಾಹಿತಿ ಬಹಿರಂಗವಾಗಿದ್ದು, ಇಬ್ಬರೂ ಆರೋಪಿಗಳು ಕನ್ಹಯ್ಯಲಾಲ್‌ನ ಕತ್ತು ಕುಯ್ಯಲು ಬಳಸಿದ ಕತ್ತಿಯನ್ನು ಯಾವುದೇ ಅಂಗಡಿಯಲ್ಲಿ ಖರೀದಿ ಮಾಡಿರಲಿಲ್ಲ. ತಮ್ಮ ಎಸ್‌ಕೆ ಇಂಜಿನಿಯರಿಂಗ್ ವರ್ಕ್ಸ್ (SK Engineering Works) ಹೆಸರಿನ ಫ್ಯಾಕ್ಟರಿಯಲ್ಲಿಯೇ ಹರಿತವಾದ ಆಯುಧವನ್ನು ತಯಾರು ಮಾಡಿದ್ದರು. ಭೀಕರ ಕ್ರೌರ್ಯಕ್ಕೆ ಅದೇ ಆಯುಧವನ್ನು ಬಳಸಲಾಗಿತ್ತು. ಈ ಆಯುಧವನ್ನು ತಮ್ಮ ವಿಡಿಯೋದಲ್ಲಿಯೂ ಚಿತ್ರೀಕರಣ ಮಾಡಿ ತೋರಿಸಿದ್ದರು. ಆರೋಪಿಗಳು ಕೊನೆಗೂ ಮುನ್ನ ಹಾಗೂ ಕೊಲೆ ಮಾಡಿದ ನಂತರ ಇದೇ ಫ್ಯಾಕ್ಟರಿಯಿಂದಲೇ ವಿಡಿಯೋ ಮಾಡಿದ್ದರು.
ಕನ್ಹಯ್ಯಾಲಾಲ್ ಹತ್ಯೆಗೆ ಬಳಸಿದ ಆಯುಧವನ್ನು ಈ ಕಾರ್ಖಾನೆಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದ (Pakistan) ಕೋನ ಬಯಲಿಗೆ ಬಂದ ನಂತರ ಎನ್‌ಐಎ ತನಿಖೆ ನಡೆಸುತ್ತಿದೆ. ಮೂಲಗಳು ಹೇಳುವಂತೆ ತನಿಖಾ ಸಂಸ್ಥೆಗಳು ಹಂತಕರು ಐಸಿಸ್(Isis) ವೀಡಿಯೊಗಳಿಂದ ಪ್ರೇರಿತರಾಗಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರೂ ಆರೋಪಿಗಳು ಕೊಲೆಗೂ ಮುನ್ನ ಮತ್ತು ನಂತರ ಪಾಕಿಸ್ತಾನದ ಜನರೊಂದಿಗೆ ಸಂಪರ್ಕದಲ್ಲಿದ್ದರು.
ಕರಾಚಿಯಲ್ಲಿ ತರಬೇತಿ ಪಡೆದಿದ್ದ ಗೌಸ್ ಮೊಹಮ್ಮದ್: ಎನ್‌ಐಎ (NIA) ಶೀಘ್ರದಲ್ಲೇ ಆರೋಪಿಗಳನ್ನು ದೆಹಲಿಗೆ ಕರೆತರಲಿದ್ದು, ಅವರ ಮೊಬೈಲ್‌ಗಳನ್ನು ತನಿಖೆ ನಡೆಸಲಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಗೌಸ್ ಮೊಹಮ್ಮದ್ 2014-15ರಲ್ಲಿ 45 ದಿನಗಳ ಕಾಲ ಕರಾಚಿಗೆ ತೆರಳಿ ಅಲ್ಲಿ ತರಬೇತಿ ಪಡೆದಿದ್ದಾನೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಅಷ್ಟೇ ಅಲ್ಲ, 2018-19ರಲ್ಲಿ ಗೌಸ್ ಮೊಹಮ್ಮದ್ ಅರಬ್ ದೇಶಕ್ಕೂ ತೆರಳಿದ್ದ. ಕಳೆದ ವರ್ಷ ಅವರು ನೇಪಾಳದಲ್ಲಿದ್ದರು ಎನ್ನುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ಗೌಸ್ ಮೊಹಮ್ಮದ್ ನ ಸಂಪರ್ಕ ನೇರವಾಗಿ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಕನ್ಹಯ್ಯಾಲಾಲ್ ಹತ್ಯೆಯನ್ನು ಭಯೋತ್ಪಾದಕ ಘಟನೆ ಎಂದು ಪರಿಗಣಿಸಿ, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎನ್‌ಐಎ ಜೊತೆಗೆ ಐಬಿ (IB) ಕೂಡ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದು, ರಿಯಾಜ್ ಜೊತೆಗೆ ಗೌಸ್ ಮೊಹಮ್ಮದ್ ಜಾತಕವನ್ನು ತನಿಖೆ ಮಾಡಲಾಗುತ್ತಿದೆ.
ಇನ್ನೊಂದು ವೀಡಿಯೋ ಹಾಕುವ ಸಿದ್ಧತೆಯಲ್ಲಿದ್ದ: ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಪ್ರಕರಣದಲ್ಲಿ ಕೊಲೆ ಬೆದರಿಕೆ ಮತ್ತು ಕೊಲೆಯ ವಿಡಿಯೋವನ್ನು ಆರೋಪಿ ಗೌಸ್ ಮೊಹಮ್ಮದ್ ಹಾಕಿದ್ದಾನೆ. ಹತ್ಯೆಯ ನಂತರ ಉದಯಪುರದಿಂದ ಅಜ್ಮೀರ್‌ಗೆ ಪಲಾಯನ ಮಾಡುತ್ತಿದ್ದ. ಆರೋಪಿಗಳಿಬ್ಬರೂ ಅಜ್ಮೀರ್‌ನಲ್ಲಿ ಮತ್ತೊಂದು ವಿಡಿಯೋ ಮಾಡಲು ಯತ್ನಿಸುತ್ತಿದ್ದರು. ವಿಡಿಯೋ ಮಾಡುವ ಐಡಿಯಾವನ್ನು ಪಾಕಿಸ್ತಾನಿ ಹ್ಯಾಂಡ್ಲರ್ ಇವರಿಗೆ ನೀಡಿದ್ದ.
Udaipur Murder Live Updates: ಕನ್ಹಯ್ಯ ಹತ್ಯೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆ
ಮುಂಬೈ ದಾಳಿ ದಿನಾಂಕವನ್ನೆ ಬೈಕ್ ನಂಬರ್ ಆಗಿ ಹೊಂದಿದ್ದ ರಿಯಾಜ್: ದಾವತ್-ಎ-ಇಸ್ಲಾಮಿ (Dawat-e-Islami) ಸಂಘಟನೆಯವನಾದ ಗೌಸ್, 'ಅಲ್ಲಾ ಕೆ ಬಂದೆ', 'ಲಬ್ಬೋ' ಹಾಗೂ 'ರಸುಲುಲ್ಲಾ' ಎನ್ನುವ ಹೆಸರಿನಲ್ಲಿ ಹಲವಾರು ವಾಟ್ಸಾಪ್ ಗುಂಪುಗಳನ್ನು ರಚಿಸುವ ಮೂಲಕ ಸಾವಿರಾರು ಜನರನ್ನು ಸಂಪರ್ಕಿಸಿದ್ದರು. ಈ ಗ್ರೂಪ್ ಗಳಲ್ಲಿ ತನ್ನ ಈ ವಿಡಿಯೋಗಳನ್ನು ಹಾಕಿದ್ದಾರೆ. ಉದಯಪುರ ಹತ್ಯೆಯ ಬಳಿಕ ಗೌಸ್, ರಿಯಾಜ್‌ನ ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗುತ್ತಿದ್ದ. ಆತನ ಬೈಕ್ ಸಂಖ್ಯೆ 2611, ಇದು ಮುಂಬೈ ದಾಳಿಯ (2008 Mumbai Attack) ದಿನಾಂಕವಾಗಿತ್ತು. ರಾಜಸ್ಥಾನ ಪೊಲೀಸರು ಬಂಧನ ನಡೆಸುವ ವೇಳೆ ಇದು ಗಮನಕ್ಕೆ ಬಂದಿರಲಿಲ್ಲ.
ಮತಾಂಧ ಹಂತಕರಿಗೆ ಪಾಕ್ ಸಂಪರ್ಕ, ಐಸಿಸ್ ಪ್ರೇರಣೆ: ಕರಾಚಿಗೂ ಹೋಗಿದ್ದ ಗೌಸ್!
ಕೊಲೆಯಾದ ಸಂದರ್ಭದಲ್ಲಿ ಬೈಕ್ ಸ್ಟಾರ್ಟ್ ಆಗಿತ್ತು: ದಾಳಿ ವೇಳೆ 70 ಮೀಟರ್ ದೂರದಲ್ಲಿ ಬೈಕ್ ಸ್ಟಾರ್ಟ್ ಆಗಿತ್ತು. ಅಲ್ಲಿಂದ ಅವರು ದೇವಗಢ ಮೋಟಾರ್ ಗ್ಯಾರೇಜ್‌ಗೆ ಓಡಿ ಹೋಗಿದ್ದರು. ಇದೇ ಗ್ಯಾರೇಜ್‌ನಲ್ಲಿ ರಿಯಾಜ್ 6 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ. ಆದರೆ, ಗ್ಯಾರೇಜ್‌ನಲ್ಲಿ ಅವರಿಗೆ ಆಶ್ರಯ ನೀಡಿರಲಿಲ್ಲ. ಅಲ್ಲಿಂದಲೇ ಯಾರೋ ದಿಯೋಗಢ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಮಾಹಿತಿ ಸಿಕ್ಕ ಬೆನ್ನಲ್ಲಿಯೇ ಅವರು ರಸ್ತೆ ಮಾರ್ಗವಾಗಿ ಭೀಮ್ ಗ್ರಾಮವನ್ನು ತಲುಪಿದ್ದರು. ಗೌಸ್ ಈ ಗ್ರಾಮದವನಾಗಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.