* ಸ್ನೇಹಿತನ ಹುಟ್ಟುಹಬ್ಬಕ್ಕೆ ಚಿಕನ್ ರೋಲ್ ಕೊಡಿಸಲು ಬಂದು ಕೊಲೆಯಾದ* ಜೆ.ಜೆ.ನಗರ ಪೊಲೀಸ್ ಬಲೆಗೆ ಬಿದ್ದ ಅರೋಪಿಗಳು * ಪ್ರೀತಿ ವಿಚಾರಕ್ಕೆ ಕೊಲೆ: ಇಬ್ಬರ ಬಂಧನ
ಬೆಂಗಳೂರು(ಏ.06): ರಸ್ತೆಯಲ್ಲಿ ತಮ್ಮ ಬೈಕ್‌ಗೆ(Bike) ಬೈಕ್ ಟಚ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಯುವಕನೊಬ್ಬನನ್ನು ಕೊಂದಿದ್ದ ಕಿಡಿಗೇಡಿಗಳು ಕೆಲವೇ ತಾಸಿನೊಳಗೆ ಜೆ.ಜೆ.ನಗರ ಪೊಲೀಸ್(Police) ಬಲೆಗೆ ಬಿದ್ದಿದ್ದಾರೆ. ಭಕ್ಷಿಗಾರ್ಡನ್ ಸಮೀಪದ ಜೈ ಮಾರುತಿ ನಗರದ ನಿವಾಸಿ ಚಂದ್ರು (22) ಕೊಲೆಯಾದ ದುರ್ದೈವಿ. ಈ ಹತ್ಯೆ(Murder) ಸಂಬಂಧ ಹಳೇ ಗುಡ್ಡದಹಳ್ಳಿಯ ಶಾಹೀದ್ ಪಾಷ, ಹೊಸಕೋಟೆಯ ಶಾಹೀದ್ ಅಲಿಯಾಸ್ ಗೂಳಿ ಹಾಗೂ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ(Arrest).
ಹಳೇ ಗುಡ್ಡದಹಳ್ಳಿ ಸಮೀಪ ಸೋಮವಾರ ತಡರಾತ್ರಿ ಚಿಕನ್ ರೋಲ್ ತಿನ್ನಲು ಸ್ನೇಹಿತ ಸೈಮನ್ ರಾಜ್ ಜೊತೆ ಚಂದ್ರು ಹೋಗಿದ್ದಾಗ ಈ ಕೃತ್ಯ ನಡೆದಿದೆ. ಘಟನೆ ಬಳಿಕ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ಕೆಲವೇ ಗಂಟೆಗಳಲ್ಲಿ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಪಿಎಸ್‌ಐ ಸುಲೋಚನಾ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru: ಸಿನಿಮಾ ನೋಡಿ ಬುಲೆಟ್ ಬೈಕ್‌ಗಳನ್ನು ಕದಿಯುತ್ತಿದ್ದ ಏಳು ಮಂದಿ ಬಂಧನ
ಬರ್ತ್‌ಡೇಗೆ ಚಿಕನ್ ಕೊಡಿಸಲು ಬಂದು ಕೊಲೆಯಾದ:
ರೈಲ್ವೆ ಗೂಡ್ಸ್ ಶೆಡ್‌ನಲ್ಲಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ ಮೃತ(Death) ಚಂದ್ರು, ತನ್ನ ಕುಟುಂಬದ ಜತೆ ಮಾರುತಿ ನಗರದಲ್ಲಿ ನೆಲೆಸಿದ್ದ. ಮಂಗಳವಾರ ಆತನ ಆಪ್ತ ಸ್ನೇಹಿತ ಸೈಮನ್ ರಾಜ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಇಷ್ಟದ ತಿಂಡಿ ಚಿಕನ್ ರೋಲ್ ಕೊಡಿಸುವ ಸಲುವಾಗಿ ತಡ ರಾತ್ರಿ 2ರ ಸುಮಾರಿಗೆ ಹಳೇಗುಡ್ಡದಹಳ್ಳಿಗೆ ಸೈಮನ್‌ನನ್ನು ಕರೆದುಕೊಂಡು ಚಂದ್ರು ಬಂದಿದ್ದಾನೆ. ಆ ವೇಳೆ ಮತ್ತೊಂದು ಬೈಕ್‌ನಲ್ಲಿ ಶಾಹೀದ್ ಬಂದಿದ್ದು, ಕಿರಿದಾದ ರಸ್ತೆಯಾದ ಕಾರಣ ಪರಸ್ಪರ ಬೈಕ್‌ಗಳು ಸ್ಪರ್ಶವಾಗಿದೆ. ಆಗ ಶಾಹೀದ್‌ಗೆ ಚಂದ್ರು ಬೈದಿದ್ದಾನೆ. ಕೊನೆಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಕೆರಳಿದ ಶಾಹೀದ್, ‘ನಮ್ಮ ಏರಿಯಾಗೆ ಬಂದು ನಮಗೆ ಅವಾಜ್ ಹಾಕ್ತೀಯಾ’ ಎಂದು ತಿರುಗಿ ಬಿದ್ದಿದ್ದಾನೆ.
ಆಗ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡ ಶಾಹೀದ್, ಬಳಿಕ ಚಂದ್ರು ಮತ್ತು ಸೈಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಂತದಲ್ಲಿ ಚಂದ್ರು ಹೊಟ್ಟೆಗೆ ಆರೋಪಿಗಳು(Accused) ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡು ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಈ ಹತ್ಯೆ ಬಗ್ಗೆ ತಿಳಿದು ಕೂಡಲೇ ತನಿಖೆ ಕೈಗೆತ್ತಿಕೊಂಡ ಜೆ.ಜೆ.ನಗರ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಆರೋಪಿಗಳ ಪೈಕಿ ಶಾಹೀದ್ ಅಲಿಯಾಸ್ ಗೂಳಿ, ಜೆ.ಜೆ.ನಗರಕ್ಕೆ ಹೊಸಕೋಟೆಯಿಂದ ರಂಜಾನ್ ಹಬ್ಬದ ವೇಳೆ ಚಪ್ಪಲಿ ಮಾರಾಟ ಸಲುವಾಗಿ ಬಂದಿದ್ದ. ಇನ್ನುಳಿದವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಿ ವಿಚಾರಕ್ಕೆ ಕೊಲೆ: ಇಬ್ಬರ ಬಂಧನ
ಗುಂಡ್ಲುಪೇಟೆ: ಹೊಸೂರಲ್ಲಿ ಕಳೆದ ಮೂರು ದಿನಗಳ ಹಿಂದೆ ಪ್ರೀತಿ ವಿಚಾರಕ್ಕೆ ನಡೆದ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಂಗಿಯ ಪ್ರೀತಿಸುತ್ತಿದ್ದ ಯುವಕನ ಅಣ್ಣ ಚಿಕ್ಕರಾಜು ಮೇಲೆ ಹಲ್ಲೆ ನಡೆಸಿ, ಚಾಕುನಿಂದ ಚುಚ್ಚಿ ಸಾಯಿಸಿದ ಸಂಬಂಧ ಐವರ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hubballi Crime: ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ಪಡೆದು ವಂಚನೆ: ಇಬ್ಬರ ಬಂಧನ
ಪ್ರಕರಣದ ಪ್ರಮುಖ ಆರೋಪಿಗಳೆಂದು ಹೇಳಲಾದ ಅಭಿಷೇಕ್, ವಿನೋದ್‌ರನ್ನು ಗುಂಡ್ಲುಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಮಹದೇವಸ್ವಾಮಿ ಸಿಬ್ಬಂದಿ ಬಂಧಿಸಿದ್ದಾರೆ.ಈ ಸಂಬಂಧ ಆರೋಪಿಗಳೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಮಹದೇವಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಬಂಧಿತ ಅಭಿಷೇಕ್ ಹಾಗೂ ವಿನೋದ್‌ರನ್ನು ಗುಂಡ್ಲುಪೇಟೆ ಜೆಎಂಎಫ್‌ಸಿ ನ್ಯಾಯಾೕಶರ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದಲ್ಲಿ ಕರಿಯಪ್ಪ, ಕಿರಣ್, ಪ್ರಸಾದ್, ಮಹೇಶ್ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
