ಶಿವ ದೇಗುಲದಿಂದ ಹಣ ಕದ್ದು ಹಿಂದಿರುಗಿಸಿದ ಕಳ್ಳ: ಕ್ಷಮೆ ಕೋರಿ ಪತ್ರ ಬರೆದ
ಕಳ್ಳತನ ಮಾಡಿದ ನಂತರ ತನ್ನ ಮನಃಶಾಂತಿಯನ್ನು ಕಳೆದುಕೊಂಡು ತನ್ನ ಕುಟುಂಬವು ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಹೀಗಾಗಿ, ತಪ್ಪಿತಸ್ಥ ಭಾವನೆಯಿಂದ ಹಣವನ್ನು ಹಿಂದಿರುಗಿಸಿದ್ದಾನೆ.
ಚೆನ್ನೈ (ಜೂ. 23): ಒಂದು ವಾರದ ಹಿಂದೆ ತಮಿಳುನಾಡಿನ (Tamil Nadu) ರಾಣಿಪೇಟೆ ಬಳಿಯ ಲಾಲಾಪೇಟ್‌ನಲ್ಲಿರುವ ಶಿವ ದೇವಾಲಯದ (Shiva Temple) ಹುಂಡಿಯಿಂದ ಹಣವನ್ನು ಕದ್ದ ಕಳ್ಳನೊಬ್ಬ, ನಗದನ್ನು ಹಿಂದಿರುಗಿಸಿದ್ದಾನೆ ಮತ್ತು ತನ್ನ ಕೃತ್ಯಗಳಿಗೆ ಕ್ಷಮೆ ಕೋರಿ ಕ್ಷಮೆಯಾಚಿಸುವ ಪತ್ರವನ್ನೂ ನೀಡಿದ್ದಾನೆ. ಮಂಗಳವಾರ ಸಂಜೆ ವಾಡಿಕೆಯಂತೆ ಶಿವ ದೇವಾಲಯದ ಅಧಿಕಾರಿಗಳು ಹುಂಡಿಯನ್ನು ತೆರೆದಾಗ ದಿನದ ಕಾಣಿಕೆ ಎಣಿಕೆ ಮಾಡುವಾಗ ಕೈ ಬರಹದಿಂದ ಅಚ್ಚುಕಟ್ಟಾಗಿ ಸುತ್ತಿ ಹಾಕಲಾಗಿದ್ದ 500 ರೂಪಾಯಿ ಮುಖಬೆಲೆಯ ಇಪ್ಪತ್ತು ನೋಟುಗಳು ಕಂಡು ಬಂದಿದ್ದು ಆಡಳಿತಾಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಹುಣ್ಣಿಮೆಯಂದು (ಪೂರ್ಣಿಮಾ) ಅಂದರೆ ಜೂನ್ 14 ರಂದು ದೇವಸ್ಥಾನದಿಂದ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡ ಕಳ್ಳನ ಕ್ಷಮೆಯಾಚನೆಯನ್ನು ಟಿಪ್ಪಣಿಯಲ್ಲಿ ವಿವರಿಸಲಾಗಿದೆ. ಈ ದೇವಾಲಯದಲ್ಲಿ ಪೌರ್ಣಮಿ (ಪೂರ್ಣಿಮಾ) ಒಂದು ಮಂಗಳಕರ ದಿನವೆಂದು ನಂಬಲಾಗಿದೆ ಮತ್ತು ಪಟ್ಟಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಅದೇ ದಿನ ಉತ್ತಮ ಹಣ ಸಂಗ್ರಹವಾಗುವ ನಿರೀಕ್ಷೆಯಿಂದ ಹುಂಡಿ ಒಡೆದಿದ್ದೇನೆ ಎಂದು ಪತ್ರದಲ್ಲಿ ಕಳ್ಳ ತಿಳಿಸಿದ್ದಾನೆ.
ಇದನ್ನೂ ಓದಿ: ದೇವಸ್ಥಾನದ ಕಾಣಿಕೆ ಹುಂಡಿ ಹಣ ಎಗರಿಸುತ್ತಿದ್ದ ವ್ಯಕ್ತಿಗೆ ಸ್ಥಳೀಯರ ಧರ್ಮದೇಟು
ಕಳ್ಳತನ ಮಾಡಿದ ನಂತರ ತನ್ನ ಮನಃಶಾಂತಿಯನ್ನು ಕಳೆದುಕೊಂಡು ತನ್ನ ಕುಟುಂಬವು ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಹೀಗಾಗಿ, ತಪ್ಪಿತಸ್ಥ ಭಾವನೆಯಿಂದ ಹಣವನ್ನು ಹಿಂದಿರುಗಿಸಿದ್ದಾನೆ.
ಹುಂಡಿ ಒಡೆದು ಹಣ ನಾಪತ್ತೆಯಾಗಿರುವ ಬಗ್ಗೆ ಗ್ರಾಮ ಹಾಗೂ ಶಿವ ದೇವಸ್ಥಾನದ ಅಧಿಕಾರಿಗಳು ವಾರದ ಹಿಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಎಫ್ಐಆರ್ ನಂತರ, ಸಿಪ್ಕಾಟ್ ಪೊಲೀಸರು ತನಿಖೆಗಾಗಿ ಕೆಲವು ದಿನಗಳ ಕಾಲ ದೇವಾಲಯವನ್ನು ಮುಚ್ಚಿದರು. ಆದಾಗ್ಯೂ, ಹಲವಾರು ದಿನಗಳ ತನಿಖೆಯು ದರೋಡೆಕೋರನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ, ಸಾರ್ವಜನಿಕ ದರ್ಶನಕ್ಕಾಗಿ ದೇವಾಲಯವನ್ನು ಪುನಃ ತೆರೆಯಲಾಗಿತ್ತು.
ಇದನ್ನೂ ಓದಿ: ದೇವಸ್ಥಾನ ಹುಂಡಿ ಕಳವು ಮಾಡುತ್ತಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳರ ಬಂಧನ
ಈ ಘನೆಯ ಬಳಿಕ ಸಿಪ್‌ಕಾಟ್ ಪೊಲೀಸರು ತನಿಖೆ ಮುಂದುವರೆಸಲಾಗುವುದು ಮತ್ತು ಶೀಘ್ರದಲ್ಲೇ ದರೋಡೆಕೋರನನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ. "ಇದು ತಪ್ಪಿತಸ್ಥ ಭಾವನೆಯಲ್ಲ, ಪೊಲೀಸ್ ತನಿಖೆಗೆ ಹೆದರಿ ಮತ್ತು ನಾವು ಅವನನ್ನು ಖಚಿತವಾಗಿ ಹಿಡಿಯುತ್ತೇವೆ ಎಂದು ಅರಿವಾಗಿ ಹಣ ಹಿಂದಿರುಗಿಸಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳ್ಳ ಸುತ್ತಮುತ್ತಲಿನ ಪ್ರದೇಶ ಮತ್ತು ದೇವಸ್ಥಾನವನ್ನು ಸರಿಯಾಗಿ ತಿಳಿದಿರುವ ವ್ಯಕ್ತಿಯಾಗಿರಬಹುದು ಎಂದು ಪೊಲೀಸ್ ಅಧಿಕಾರಿ ಶಂಕಿಸಿದ್ದಾರೆ. ಹೀಗಾಗಿ ಅವನು ಬೇಗ ಸಿಕ್ಕಿಕೊಳ್ಳಬಹುದು ಎಂದು ಹೆದರಿರಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.