ರಾಯ್‌ಪುರದಲ್ಲಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತನ ಜೊತೆಗಿನ ಪ್ರೇಮ ವಿವಾದದ ಜಗಳದ ನಂತರ, 34 ವರ್ಷದ ಪರಂಪ್ರೀತ್ ಸಿಂಗ್ ಎಂಬ ಯುವಕನ ಮೇಲೆ ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇಬ್ಬರನ್ನು ತಡೆಯಲು ಪರಂಪ್ರೀತ್ ಚಲಿಸುತ್ತಿದ್ದ ಕಾರಿನ ಛಾವಣಿ ಮೇಲೇರಿದ್ದರು, ಆದರೆ ಅವರು ಕೆಳಗೆ ಬಿದ್ದಾಗ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.

ರಾಯ್‌ಪುರ: ಪ್ರೇಮ ವಿವಾದಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಅತ್ಯಂತ ಭೀಕರ ಹತ್ಯೆಯೊಂದು ನಡೆದಿದೆ. ಪ್ರೇಯಸಿಯನ್ನು ಮತ್ತೊಬ್ಬ ಯುವಕನ ಜೊತೆ ನೋಡಿದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಜಗಳ ತೆಗೆದಿದ್ದು, ಕೊನೆಗೆ ಆತನ ಮೇಲೆ ಕಾರು ಹರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಯ್‌ಪುರದ ಏಮ್ಸ್ (AIIMS) ಆಸ್ಪತ್ರೆ ಮುಂಭಾಗ ಸಂಭವಿಸಿದೆ.

ಹತ್ಯೆಗೀಡಾದ ಯುವಕನನ್ನು ತಾತೀಬಂಧ್ ನಿವಾಸಿ, 34 ವರ್ಷದ ಪರಂಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆಮಾನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಪರಂಪ್ರೀತ್ ಸಿಂಗ್ ತನ್ನ ಪ್ರೇಯಸಿ ಮತ್ತೊಬ್ಬ ಯುವಕನೊಂದಿಗೆ ಕಾರಿನಲ್ಲಿ ಬಂದಿದ್ದನ್ನು ನೋಡಿದ್ದಾನೆ. ಆ ಯುವಕನನ್ನು ದುರ್ಗ್ ನಿವಾಸಿ ಭರತ್ ಮಂಗನಾನಿ ಎಂದು ಗುರುತಿಸಲಾಗಿದೆ. ಪ್ರೇಯಸಿಯನ್ನು ಮತ್ತೊಬ್ಬನ ಜೊತೆ ನೋಡಿದ ತಕ್ಷಣ ಪರಂಪ್ರೀತ್ ಸಿಂಗ್ ರಸ್ತೆ ಮಧ್ಯದಲ್ಲೇ ಆಕೆಯೊಂದಿಗೆ ಹಾಗೂ ಭರತ್ ಜೊತೆಗೆ ತೀವ್ರ ಗಲಾಟೆ ಆರಂಭಿಸಿದ್ದಾನೆ.

ಚಲಿಸುವ ಕಾರಿನ Roof ಮೇಲೇರಿದ ಯುವಕ!

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಯುವತಿ ಮತ್ತು ಭರತ್ ಮಂಗನಾನಿ ಅಲ್ಲಿಂದ ತಪ್ಪಿಸಿಕೊಳ್ಳಲು ಕಾರನ್ನು ಹತ್ತಿದ್ದಾರೆ. ಅವರನ್ನು ತಡೆಯಲು ಪ್ರಯತ್ನಿಸಿದ ಪರಂಪ್ರೀತ್ ಸಿಂಗ್, ಕಾರನ್ನು ನಿಲ್ಲಿಸಲು ನೇರವಾಗಿ ಕಾರಿನ ಛಾವಣಿಯ (Roof) ಮೇಲೆ ಹತ್ತಿದ್ದಾನೆ. ಆದರೆ ಚಾಲಕ ಕಾರನ್ನು ನಿಲ್ಲಿಸದೇ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲಿದ್ದ ಪರಂಪ್ರೀತ್ ಸಿಂಗ್ ನಿಯಂತ್ರಣ ತಪ್ಪಿ ಸ್ವಲ್ಪ ದೂರದಲ್ಲೇ ರಸ್ತೆಗೆ ಬಿದ್ದಿದ್ದಾನೆ. ಇಷ್ಟಾದರೂ ಕಾರು ನಿಲ್ಲಿಸದ ಆರೋಪಿಗಳು, ರಸ್ತೆಗೆ ಬಿದ್ದ ಪರಂಪ್ರೀತ್ ಸಿಂಗ್ ಮೇಲೆ ಕಾರನ್ನು ಹರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಪರಂಪ್ರೀತ್ ಸಿಂಗ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಮಾನಾಕಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ ಪ್ರಕರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಯುವತಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ ಭರತ್ ಮಂಗನಾನಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.