Asianet Suvarna News Asianet Suvarna News

Gang of Thieves: ಕುಖ್ಯಾತ ರಾಮ್‌ಜೀನಗರ ಗ್ಯಾಂಗ್‌ನ 11 ಮಂದಿ ಬಂಧನ

*  ಖತರ್ನಾಕ್‌ ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು
*  ಜನರ ಗಮನ ಬೇರೆಡೆ ಸೆಳೆದು ಕಳವು ಮಾಡುವ ಕಳ್ಳರ ತಂಡ
*  ಆರೋಪಿಗಳ ಬಂಧನದಿಂದ ಬೆಳಕಿಗೆ ಬಂದ 42 ಪ್ರಕರಣಗಳು 
 

Tamil Nadu Based 11 Arrested For Theft Cases in Bengaluru grg
Author
Bengaluru, First Published Dec 26, 2021, 7:47 AM IST

ಬೆಂಗಳೂರು(ಡಿ.26):  ಜನದಟ್ಟಣೆ ಪ್ರದೇಶಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳವು(Theft) ಮಾಡುತ್ತಿದ್ದ ತಮಿಳುನಾಡು(Tamil Nadu) ಮೂಲದ ಕುಖ್ಯಾತ ‘ರಾಮ್‌ಜೀನಗರ ಗ್ಯಾಂಗ್‌’ನ 11 ಮಂದಿ ವೃತ್ತಿಪರ ಕಳ್ಳರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ತಮಿಳುನಾಡಿನ ತಿರುಚಿ ಮೂಲದ ರಜಿನಿ ಕಾಂತ್‌(48), ಸುಂದರ್‌ ರಾಜನ್‌(25), ಸೆಂಥಿಲ್‌ ಕುಮಾರ್‌(46), ಗೋಪಾಲ(39), ವೆಂಕಟೇಶ್‌(48), ಸುಬ್ರಮಣಿ(55), ಶಿವಕುಮಾರ್‌(40), ಮುರುಳಿ(33), ಮೂರ್ತಿ(27), ಮರುಗನಂದಂ(28) ಹಾಗೂ ಕುಮಾರ್‌(48) ಬಂಧಿತರು(Arrest). ಆರೋಪಿಗಳಿಂದ(Accused) ಏಳು ಲ್ಯಾಪ್‌ಟಾಪ್‌, 1 ಕ್ಯಾಮೆರಾ, 1 ಆ್ಯಪ್‌ಲ್‌ ಐಪ್ಯಾಡ್‌, 50 ಸಾವಿರ ರು. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾರತ್‌ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಗ್ಲಾಸ್‌ ಒಡೆದು ಲ್ಯಾಪ್‌ಟಾಪ್‌ ಕಳವು ಮಾಡಿದ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Low Interest Rate Fraud: ಕಡಿಮೆ ಬಡ್ಡಿ ಆಸೆ ತೋರಿಸಿ 6 ಕೋಟಿ ವಂಚನೆ

ಇವರ ಬಂಧನದಿಂದ ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ಮಹದೇವಪುರ, ಅಶೋಕ ನಗರ, ದೇವನಹಳ್ಳಿ, ಸರ್ಜಾಪುರ, ತುಮಕೂರು, ಚಿಕ್ಕಮಗಳೂರು, ಉಡುಪಿ, ತಮಿಳುನಾಡು ಸೇರಿದಂತೆ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 42 ಕಳವು ಪ್ರಕರಣ ಬೆಳಕಿಗೆ ಬಂದಿವೆ.

ಈ ರಾಮ್‌ಜೀನಗರದಲ್ಲಿ 15ಕ್ಕೂ ಅಧಿಕ ಕಳ್ಳರ ಗ್ಯಾಂಗ್‌ಗಳಿವೆ. ಆರೋಪಿಗಳು 10-12 ಜನರ ತಂಡಗಳಾಗಿ ಕಳ್ಳತನಕ್ಕಾಗಿ ಬೆಂಗಳೂರು, ಮುಂಬೈ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹೆಚ್ಚು ಜನದಟ್ಟಣೆ ಇರುವ ನಗರಗಳಿಗೆ ತೆರಳುತ್ತಿದ್ದರು. ಅಲ್ಲಿ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳು, ಮಾರುಕಟ್ಟೆಗಳು, ವಾಹನ ಪಾರ್ಕಿಂಗ್‌ ಸ್ಥಳಗಳು, ಜಾತ್ರೆ ಸೇರಿದಂತೆ ಹೆಚ್ಚು ಜನರಿರುವ ಸ್ಥಳಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕ್ಷಣ ಮಾತ್ರದಲ್ಲಿ ಬ್ಯಾಗ್‌, ಚಿನ್ನಾಭರಣ ಸೇರಿದಂತೆ ಕೈಗೆ ಸಿಗುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ತಂಡದ ಸದಸ್ಯನೊಬ್ಬನಿಗೆ ಕೊಟ್ಟು ತಮಿಳುನಾಡಿಗೆ ಕಳುಹಿಸಿ ಮಾರಾಟ ಮಾಡಿಸುತ್ತಿದ್ದರು. ಬಳಿಕ ಬಂದ ಹಣವನ್ನು ಮನೆಗಳಿಗೆ ತಲುಪಿಸುತ್ತಿದ್ದರು. ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡು ಆರೋಪಿಗಳು ಕಳ್ಳತನ ಕೃತ್ಯ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

New Year And Drugs: ಮುಂಬೈಗೆ ಬಸ್‌ನಲ್ಲಿ 1.5 ಕೋಟಿ ಡ್ರಗ್ಸ್‌ ಸಾಗಣೆ: ಆಫ್ರಿಕನ್‌ ಪ್ರಜೆ ಬಂಧನ

1 ತಿಂಗಳು ಸರಣಿ ಕಳವು!

ಆರೋಪಿಗಳು(Accused) ಕಳ್ಳತನ ಮಾಡಿದಾಗ ನಗದು ಸಿಕ್ಕರೆ ತಕ್ಷಣ ಅದನ್ನು ತಮ್ಮ ಬ್ಯಾಂಕ್‌ಗೆ ಖಾತೆ ಜಮೆ ಮಾಡುತ್ತಿದ್ದರು. ಹಣ ಜಮೆಯಾದ ಬಗ್ಗೆ ಊರಿನಲ್ಲಿರುವ ವ್ಯಕ್ತಿಯೊಬ್ಬನಿಗೆ ಮಾಹಿತಿ ನೀಡಿ ಆತನದಿಂದ ಹಣ ಡ್ರಾ ಮಾಡಿಸಿ ಮನೆಗೆ ತಲುಪಿಸುತ್ತಿದ್ದರು. ಹಣ ಡ್ರಾ ಮಾಡುವ ವ್ಯಕ್ತಿಗೆ ಬಿಡಿಗಾಸು ನೀಡುತ್ತಿದ್ದರು. ಈ ಗ್ಯಾಂಗ್‌ನ ಮತ್ತೊಂದು ವಿಶೇಷವೆಂದರೆ, ಒಮ್ಮೆ ಊರು ಬಿಟ್ಟರೆ ಕನಿಷ್ಠ ಒಂದು ತಿಂಗಳು ಊರಿಗೆ ಹೋಗುವುದಿಲ್ಲ. ಈ ಒಂದು ತಿಂಗಳ ಅವಧಿಯಲ್ಲಿ ಸರಣಿ ಕಳ್ಳತನ ಮಾಡಿ ಬಳಿಕ ಊರುಗಳಿಗೆ ತೆರಳುತ್ತಾರೆ. ಆರೋಪಿಗಳು ಯಾವುದೇ ಕಾರಣಕ್ಕೂ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದಿಲ್ಲ. ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲೇ ತಂಗುತ್ತಾರೆ. ಸಮಯ ಸಿಕ್ಕರೆ ಅಲ್ಲೇ ತಮ್ಮ ಕೈ ಚಳಕ ತೋರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ವಕೀಲರ ಸಪೋರ್ಟ್‌

ಈ ಗ್ಯಾಂಗ್‌ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಮ್ಮದೇ ವಕೀಲರನ್ನು ಇರಿಸಿಕೊಂಡಿದ್ದಾರೆ. ಒಂದು ವೇಳೆ ಕಳ್ಳತನದ ವೇಳೆ ಎಲ್ಲಾದರೂ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ತಕ್ಷಣ ಈ ವಕೀಲರು ನೆರವಿಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಆರೋಪಿಗಳು ಮೂರು-ನಾಲ್ಕು ದಿನ ಸಂಪರ್ಕಕ್ಕೆ ಸಿಗದಿದ್ದರೆ, ವಕೀಲರು ಆರೋಪಿಗಳು ಮೊದಲೇ ನೀಡುವ ಮಾಹಿತಿ ಆಧರಿಸಿ ಪೊಲೀಸ್‌ ಠಾಣೆಗಳಿಗೆ ಕರೆ ಮಾಡಿ ವಿಚಾರಿಸುತ್ತಾರೆ. ಒಂದು ವೇಳೆ ಬಂಧನವಾಗಿಲ್ಲ ಎಂದು ತಿಳಿದು ಬಂದಲ್ಲಿ ಆರೋಪಿಗಳನ್ನು ಹುಡುಕಿ ಕೊಡುವಂತೆ ನ್ಯಾಯಾಲಯಕ್ಕೆ(Court) ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಈ ಗ್ಯಾಂಗ್‌ ಕಳ್ಳತನವನ್ನೇ ವೃತ್ತಿ ಮಾಡಿಕೊಂಡು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಕೈ ಚಳಕ ತೋರಿದೆ. ರಾಮ್‌ಜೀನಗರದಲ್ಲಿ ಇಂತಹ ಹತ್ತಾರು ಗ್ಯಾಂಗ್‌ಗಳು ಸಿಗುತ್ತವೆ ಎಂದು ಅಧಿಕಾರಿಗಳು ಹೇಳಿದರು.
 

Follow Us:
Download App:
  • android
  • ios