ಬೆಂಗಳೂರಿನಲ್ಲಿ ಪತಿಯು ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಮನನೊಂದ ತಾಯಿ, ತನ್ನ 6 ವರ್ಷದ ಮಗಳಿಗೆ ನೇಣು ಬಿಗಿದು ತಾನೂ ಆತ್ಮ೧ಹತ್ಯೆಗೆ ಯತ್ನಿಸಿದ್ದಾಳೆ. ಈ ಘೋರ ದುರಂತದಲ್ಲಿ ಮಗು ಮೃತಪಟ್ಟಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ. ಹೆಣ್ಣೂರು ಪೊಲೀಸರು ಪ್ರಕರಣ ದಾಖಲು.
ಬೆಂಗಳೂರು (ಜ.6): ಪತ್ನಿಯ ನಡತೆಯ ಮೇಲೆ ಪತಿ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ, ಮನನೊಂದ ತಾಯಿಯೊಬ್ಬಳು ತನ್ನ 6 ವರ್ಷದ ಮಗಳಿಗೆ ನೇಣು ಹಾಕಿ, ಬಳಿಕ ತಾನೂ ಆತ್ಮ೧ಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ದಾರುಣ ಘಟನೆಯು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ನಿರುತಾ (30) ಮತ್ತು ಕಿಶನ್ ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಜನವರಿ 5ರಂದು ರಾತ್ರಿ 10:45 ರಿಂದ 11 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ದಂಪತಿ ನಡುವಿನ ನಿರಂತರ ಕಲಹ, ಸಂಶಯ
ಕಿಶನ್ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ನಿರುತಾ ಸದಾ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಪತಿ ಕಿಶನ್ ಆಕೆಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು.
ಕೆಲಸ ಮುಗಿಸಿ ಬಂದ ಪತಿಗೆ ಕಾದಿತ್ತು ಶಾಕ್
ಘಟನೆಯ ದಿನವಾದ ಜನವರಿ 5ರಂದು ಬೆಳಿಗ್ಗೆ ಕಿಶನ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಾಗ ಪತ್ನಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಇಬ್ಬರನ್ನೂ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಮಗು ಪ್ರಾಣ ಬಿಟ್ಟಿತ್ತು.
ಮಗು ಸಾವು, ತಾಯಿಯ ಸ್ಥಿತಿ ಗಂಭೀರ
ಈ ಘಟನೆಯಲ್ಲಿ 6 ವರ್ಷದ ಬಾಲಕಿ ಕೃತಿಕಾ ಮೃತಪಟ್ಟಿದ್ದಾಳೆ. ತಾಯಿ ನಿರುತಾ ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಸದ್ಯ ನಿರುತಾ ಅವರಿಗೆ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ತನಿಖೆ ಚುರುಕು
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತಿಯ ಅನುಮಾನವೇ ಈ ದುರಂತಕ್ಕೆ ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಿಶನ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.


