ಕೆಲಸದಾಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಜಾರ್ಖಂಡ್ ಬಿಜೆಪಿ ನಾಯಕಿ ಬಂಧನ
ತನ್ನ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಆರೋಪದ ಮೇಲೆ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಬಂಧಿಸಲಾಗಿದೆ. ಇನ್ನು, ಕೆಲಸದಾಕೆಯನ್ನು ರಕ್ಷಿಸಿದ ಮಗನನ್ನು ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಮದೂ ವರದಿಯಾಗಿದೆ.
ಮನೆಯಲ್ಲಿ ತನ್ನ ಮನೆಗೆಲಸದವಳನ್ನು ಹಿಂಸಿಸಿ, ಕಬ್ಬಿಣದ ರಾಡ್‌ನಿಂದ (Iron Rod) ಆಕೆಯ ಹಲ್ಲುಗಳನ್ನು ಮುರಿದು (Broken Teeth) ಹಸಿವಿನಿಂದ ಕೂಡಿಹಾಕಿದ ಆರೋಪದ ಮೇಲೆ ಅಮಾನತುಗೊಂಡ ಬಿಜೆಪಿ (BJP) ನಾಯಕಿ ಸೀಮಾ ಪಾತ್ರಾ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ. ಅಲ್ಲದೆ, ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ. ಬಿಜೆಪಿ ನಾಯಕಿಯ ಪುತ್ರನೇ ತನ್ನ ಮನೆಯಲ್ಲಿ ನಡೆಯುತ್ತಿರುವ ಭೀಕರ ದೌರ್ಜನ್ಯವನ್ನು ಸರ್ಕಾರಿ ಅಧಿಕಾರಿಯಾಗಿರುವ ಸ್ನೇಹಿತನಿಗೆ ಬಹಿರಂಗಪಡಿಸಿದ ನಂತರ ಮತ್ತು ಸಹಾಯಕ್ಕಾಗಿ ಕೇಳಿದ ನಂತರ ಸೀಮಾ ಪಾತ್ರಾ ಸಿಕ್ಕಿಬಿದ್ದಿದ್ದಾರೆ. ಆದರೆ, ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಲಾಗುತ್ತಿದೆ ಎಂದು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಮಾಧ್ಯಮದ ಎದುರು ಹೇಳಿಕೊಂಡ ಬಿಜೆಪಿ ನಾಯಕಿ ತಾನು ನಿರಪರಾಧಿ ಎಂದೂ ಹೇಳಿದ್ದಾರೆ.
ಇನ್ನು, ತನ್ನನ್ನು ಸಿಕ್ಕಿಹಾಕಿಸಿದ್ದಕ್ಕಾಗಿ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದೂ ಹೇಳಲಾಗಿದೆ. ಈ ಮಧ್ಯೆ, ನಿಮ್ಮ ಮಗ ಆಸ್ಪತ್ರೆಯಲ್ಲಿರುವುದು ಏಕೆ ಎಂದು ಪ್ರಶ್ನಿಸಿದ್ದಕ್ಕೆ, ‘ಅವನು ಅಸ್ವಸ್ಥನಾಗಿದ್ದನು’’ ಎಂದೂ ಸೀಮಾ ಪಾತ್ರಾ ಹೇಳಿಕೊಂಡಿದ್ದಾರೆ. ಸೀಮಾ ಪತ್ರಾ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮನೆ ಕೆಲಸದಾಕೆಯ ವಿಡಿಯೋ ವೈರಲ್ (Viral Video) ಆದ ನಂತರ ಬಿಜೆಪಿ ಮಂಗಳವಾರ ಆಕೆಯನ್ನು ಅಮಾನತು ಮಾಡಿದೆ. ಸೀಮಾ ಪಾತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರ ಪತಿ ಮಹೇಶ್ವರ್ ಪಾತ್ರಾ ಅವರು ನಿವೃತ್ತ ಐಎಎಸ್ (Indian Administrative Service) ಅಧಿಕಾರಿಯಾಗಿದ್ದಾರೆ. ಇನ್ನು, ಸಹಾಯಕಿ ಸುನೀತಾ 10 ವರ್ಷಗಳಿಂದ ಸೀಮಾ ಅವರ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದರು.
ಇದನ್ನು ಓದಿ: ಬಿಜೆಪಿ ನಾಯಕಿ ಮನೆಯಲ್ಲಿ 8 ವರ್ಷಗಳ ಕಾಲ 'ಬಂಧಿ'ಯಾಗಿದ್ದ ಕೆಲಸದಾಕೆ..!
ಈ ವಿಡಿಯೋದಲ್ಲಿ ಸುನೀತಾ ಅವರ ದೇಹ ಮತ್ತು ಮುಖದ ಮೇಲೆ ಗಾಯದ ಗುರುತುಗಳೊಂದಿಗೆ ಆಸ್ಪತ್ರೆಯ ಬೆಡ್ ಮೇಲೆ ಕಾಣಿಸಿಕೊಂಡಿದ್ದಾರೆ. 29ರ ಹರೆಯದ ಮಹಿಳೆ ತನ್ನನ್ನು ಬಂಧಿಯಾಗಿಟ್ಟು, ಚಿತ್ರಹಿಂಸೆ ನೀಡಿದ್ದಾರೆ ಮತ್ತು ರಾಡ್‌ಗಳು ಹಾಗೂ ಕಬ್ಬಿಣದ ಪ್ಯಾನ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಆಕೆಗೆ ಮಾತನಾಡಲು ಸಾಧ್ಯವಾಗದಂತಾಗಿದ್ದು, ಆಕೆಯ ಅನೇಕ ಹಲ್ಲುಗಳು ಕಾಣೆಯಾಗಿವೆ ಮತ್ತು ಆಕೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇನ್ನು, ಬಲವಂತವಾಗಿ ನೆಲದ ಮೇಲೆ ಮೂತ್ರವನ್ನು ನೆಕ್ಕಿಸಲಾಯಿತು, ಕಬ್ಬಿಣದ ಸಲಾಕೆಯಿಂದ ನನ್ನ ಹಲ್ಲುಗಳನ್ನು ಮುರಿಯಲಾಗಿದೆ ಎಂದೂ ಸುನೀತಾ ಹೇಳಿಕೊಂಡಿದ್ದಾರೆ. ಅಲ್ಲದೆ, ಆಕೆಗೆ ದಿನಗಟ್ಟಲೆ ಊಟ, ನೀರು ನೀಡಿಲ್ಲ ಎನ್ನಲಾಗಿದೆ.
ಸೀಮಾ ಪಾತ್ರಾ ಅವರ ಮಗ ಆಯುಷ್ಮಾನ್, ತನ್ನನ್ನು ರಕ್ಷಿಸಿದರು. ಆತನಿಂದ ಮಾತ್ರ ನಾನು ಬದುಕಿದ್ದೇನೆ ಎಂದು ಅಳುತ್ತಾ ಸುನೀತಾ ವಿಡಿಯೋದಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: ಕೈಕೊಟ್ಟ ಲಿಫ್ಟ್: ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಉದ್ಯಮಿ ಬಂಧನ
ಸುನೀತಾ ಅವರ ಪರಿಸ್ಥಿತಿ ಕಂಡು ಬೇಸರಗೊಂಡ ಮಗ, ಈ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಹಾಗೂ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ನಂತರ ಆತನ ಸ್ನೇಹಿತ ಹಾಗೂ ಸರ್ಕಾರಿ ಅಧಿಕಾರಿ ವಿವೇಕ್ ಆನಂದ್ ಬಸ್ಕಿ ಪೊಲೀಸರ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸೀಮಾ ಪಾತ್ರಾ ಅವರ ಮನೆಯಿಂದ ಸುನೀತಾರನ್ನು ರಕ್ಷಿಸಿದ ನಂತರ, ಪೊಲೀಸರು (Police) ಚಿಕಿತ್ಸೆಗಾಗಿ (Treatment) ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ವ್ಯಾಪಕವಾಗಿ ವೈರಲ್ ಆಗುತ್ತಿರುವ ಸುನೀತಾ ಅವರ ವಿಡಿಯೋಗಳು ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ. ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರು ಸಹ ನಿನ್ನೆ ಪೊಲೀಸ್ ಮಹಾನಿರ್ದೇಶಕ ನೀರಜ್ ಸಿನ್ಹಾ ಅವರನ್ನು ಭೇಟಿ ಮಾಡಿ ಅಮಾನತುಗೊಂಡ ಬಿಜೆಪಿ ನಾಯಕಿಯ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವ ಬಗ್ಗೆ "ಗಂಭೀರ ಕಳವಳ" ವ್ಯಕ್ತಪಡಿಸಿದ್ದರು. ಈ ಮಧ್ಯೆ, ಸೀಮಾ ಪಾತ್ರಾ ಅವರ ಪತಿ ವಿರುದ್ಧ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.