ಕೈಕೊಟ್ಟ ಲಿಫ್ಟ್: ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಉದ್ಯಮಿ ಬಂಧನ
ಗುರುಗ್ರಾಮದ ಹೌಸಿಂಗ್ ಸೊಸೈಟಿಯೊಂದರ ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಆರೋಪದ ಹಿನ್ನೆಲೆ ಉದ್ಯಮಿಯನ್ನು ಬಂಧಿಸಲಾಗಿದೆ. ಈ ಘಟನೆಯ ಸಂಬಂಧ ಸಿಸಿ ಕ್ಯಾಮೆರಾದ ವಿಡಿಯೋ ಸಹ ವೈರಲ್ ಆಗಿದೆ.
ಐಷಾರಾಮಿ ಸೊಸೈಟಿಯೊಂದರ ಸೆಕ್ಯೂರಿಟಿ ಗಾರ್ಡ್ ಮತ್ತು ಲಿಫ್ಟ್ ಆಪರೇಟರ್‌ಗೆ ಅನುಚಿತವಾಗಿ ವರ್ತಿಸಿದ ಮತ್ತು ಥಳಿಸಿದ ಆರೋಪದ ಮೇಲೆ ಬಹುಮಹಡಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ವಾಸಿಸುವ ಉದ್ಯಮಿಯನ್ನು ಹರ್ಯಾಣದ ಗುರುಗ್ರಾಮ್ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೆಕ್ಟರ್ 50ರಲ್ಲಿರುವ ‘ದಿ ಕ್ಲೋಸ್ ನಾರ್ತ್ ಸೊಸೈಟಿ’ ನಿವಾಸಿ ವರುಣ್ ನಾಥ್ (39) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಕೋಪಗೊಂಡ ಆರೋಪಿ ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಮತ್ತು ಲಿಫ್ಟ್ ಆಪರೇಟರ್‌ಗೆ ಥಳಿಸಿದ್ದಾರೆ ಮತ್ತು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಪೂರ್ಣ ಕೃತ್ಯ ಸೊಸೈಟಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಆರೋಪಿಯು ಸೆಕ್ಯುರಿಟಿ ಗಾರ್ಡ್‌ಗೆ ಕಿರುಚಾಡುವುದನ್ನು ಕಾಣಬಹುದು ಮತ್ತು ಲಿಫ್ಟ್‌ನ ಹೊರಗೆ ಅನೇಕ ಬಾರಿ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಅವಾಚ್ಯ ಶಬ್ದಗಳಿಂದ ಸೆಕ್ಯುರಿಟಿ ಗಾರ್ಡ್‌ಗೆ ನಿಂದಿಸಿದ್ದು, ಈ ಸಂಬಂಧದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಆಂಬುಲೆನ್ಸ್ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ
ಈ ಘಟನೆಯ ನಂತರ ಭದ್ರತಾ ಸಿಬ್ಬಂದಿಗಳು ಜಮಾಯಿಸಿ ಸೊಸೈಟಿಯ ಗೇಟ್ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ. ಬಳಿಕ, ಈ ಘಟನೆಯ ಮಾಹಿತಿ ಪಡೆದು ಸೆಕ್ಟರ್ 50 ರ ಎಸ್‌ಎಚ್‌ಒ ರಾಜೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಭದ್ರತಾ ಸಿಬ್ಬಂದಿ ದೂರು ದಾಖಲಿಸಿದ ಸ್ಥಳಕ್ಕೆ ತಲುಪಿತು. ಸೆಕ್ಯೂರಿಟಿ ಗಾರ್ಡ್ ಅಶೋಕ್ ಕುಮಾರ್ ನೀಡಿದ ದೂರಿನ ಪ್ರಕಾರ, ಬೆಳಗ್ಗೆ 7 ಗಂಟೆ ಸುಮಾರಿಗೆ ಟವರ್ 12 ರ ಲಿಫ್ಟ್ ನೆಲಮಹಡಿಯಲ್ಲಿ ಸಿಲುಕಿಕೊಂಡಿತು ಮತ್ತು ಉದ್ಯಮಿ ಟ್ರಾನ್ಸ್‌ಪೋರ್ಟರ್ ಲಿಫ್ಟ್‌ನಲ್ಲಿ ಕೆಲ ಕಾಲ ಸಿಲುಕಿಕೊಂಡಿದ್ದಾರೆ.
“ಲಿಫ್ಟ್‌ನೊಳಗೆ ಸಿಲುಕಿರುವುದಾಗಿ ಅವರು ಇಂಟರ್‌ಕಾಮ್ ಮೂಲಕ ನನಗೆ ಮಾಹಿತಿ ನೀಡಿದರು. ಇದಾದ ನಂತರ ಲಿಫ್ಟ್ ನಿರ್ವಾಹಕರನ್ನು ಕರೆಸಲಾಯಿತು ಮತ್ತು ಲಿಫ್ಟ್ ತೆರೆಯಲು ಸುಮಾರು 5 ನಿಮಿಷಗಳನ್ನು ತೆಗೆದುಕೊಂಡಿತು. ಆದರೆ, ಲಿಫ್ಟ್‌ನಿಂದ ಹೊರಬಂದ ನಂತರ ವರುಣ್ ನಾಥ್ ನಿಂದಿಸಿದ್ದು, ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಲಿಫ್ಟ್ ಆಪರೇಟರ್‌ಗೂ ಥಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ನಾವೆಲ್ಲರೂ ಒಟ್ಟಾಗಿ ಪ್ರತಿಭಟನೆ ಆರಂಭಿಸಿದೆವು'' ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ದೂರಿನ ನಂತರ, ವರುಣ್ ನಾಥ್ ವಿರುದ್ಧ ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 323 (ನೋಯಿಸುವುದು), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ''ದೂರು ಸ್ವೀಕರಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೂರ್ವ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ತಿಳಿಸಿದ್ದಾರೆ.
Viral Video: ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ
ಒಂದು ವಾರದ ಹಿಂದೆ ಇದೇ ರೀತಿಯ ಘಟನೆಯಲ್ಲಿ, ಮಹಿಳೆಯೊಬ್ಬರು ತಾನು ವಾಸಿಸುತ್ತಿದ್ದ ಬಹುಮಹಡಿ ಸಂಕೀರ್ಣದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ವರದಿಯ ನಂತರ ನೋಯ್ಡಾ ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದರು. ಈ ಘಟನೆಯ ವಿಡಿಯೋ ಕ್ಲಿಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಘಟನೆ ಮರೆಮಾಸುವ ಮುನ್ನವೇ ಉದ್ಯಮಿಯೊಬ್ಬರು ಭದ್ರತಾ ಸಿಬ್ಬಂದಿ ಹಾಗೂ ಲಿಫ್ಟ್ ಆಪರೇಟರ್‌ಗೆ ಥಳಿಸಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಹ ವೈರಲ್ ಆಗಿದೆ.