Sting operation: ಚಡಚಣ ಪೊಲೀಸರ ವಸೂಲಿ ದಂಧೆ ಬಯಲು!

  • ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಚಡಚಣ ಪೊಲೀಸರ ವಸೂಲಿ ದಂಧೆ ಬಯಲು!
  • ಕವರ್ ಸ್ಟೋರಿ ಇಂಪ್ಯಾಕ್ಟ್ ಪೊಲೀಸ್ ಸಿಬ್ಬಂದಿ ಅಮಾನತ್ತು, ಪಿಎಸ್‌ಐ, ಸಿಪಿಐಗೆ ನೋಟಿಸ್!
Sting operation police who were collecting hafta at chadachana vijayapur

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ.6) : ಭೀಮಾತೀರದ ಚಡಚಣ ಪೊಲೀಸರ ವಸೂಲಿಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ಕಾರ್ಯಕ್ರಮದಲ್ಲಿ ವಿಸ್ತ್ರತ ವರದಿ ಪ್ರಸಾರವಾಗಿತ್ತು. ಕವರ್ ಸ್ಟೋರಿ ತಂಡ ನಡೆಸಿದ ಸ್ಟಿಂಗ್ ಆಫರೇಶನ್‌ನಲ್ಲಿ ಚಡಚಣ ಪೊಲೀಸರ ವಸೂಲಿ ದಂಧೆ ಬದಲಾಗಿತ್ತು. ಇದರ ಫಲಶೃತಿ ಎನ್ನುವಂತೆ ವಸೂಲಿ ಇಳಿದಿದ್ದ ಮೂವರು ಪೊಲೀಸರು ಅಮಾನತ್ತುಗೊಳಿಸಿ ವಿಜಯಪುರ ಎಸ್ಪಿ ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ.

ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

ಮೂವರು ಸಿಬ್ಬಂದಿ ಅಮಾನತ್ತು, ಅಧಿಕಾರಿಗಳಿಗೆ ನೋಟಿಸ್ ಜಾರಿ:

ಕಳೆದ ಶುಕ್ರವಾರ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿಯಲ್ಲಿ ಚಡಚಣ ಪೊಲೀಸರ ಬಂಡವಾಳ ಬಯಲಾಗಿತ್ತು. ಇಲ್ಲಿನ ಕೆಲ ಪೊಲೀಸರು ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕೆಲ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದಲ್ಲದೆ ಅವರಿಂದ ಹಫ್ತಾ ವಸೂಲಿಯನ್ನು ಮಾಡುತ್ತಿದ್ದರು. ಈ ಕುರಿತು ರಹಸ್ಯ ಕಾರ್ಯಾಚರಣೆ ನಡೆಸಿದ್ದ ಕವರ್ ಸ್ಟೋರಿ(CoverStory) ತಂಡ ಪೊಲೀಸರ ವಸೂಲಿ ದಂಧೆಯನ್ನ ಬಯಲು ಮಾಡಿತ್ತು. 

ವರದಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾಗ್ತಿದ್ದಂತೆ ಭಾರೀ ಸಂಚಲನ ಸೃಷ್ಟಿಯಾಗಿತ್ತು. ಇಡೀ ವರದಿಯನ್ನ ವೀಕ್ಷಿಸಿದ ವಿಜಯಪುರ ಎಸ್ಪಿ ಆನಂದಕುಮಾರ್(Vijayapur SP Anand Kumar) ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟಕ್ಕೆ ಹಫ್ತಾ ಮಾತನಾಡಿ ಅಡ್ವಾನ್ಸ್ ಪಡೆದಿದ್ದ ಚಡಚಣ ಠಾಣೆ ಪೇದೆ ಸಂಪತ್ ಹಾಗೂ ಮಲ್ಲಪ್ಪ ಹೊನ್ನಾಕಟ್ಟಿಯನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಶಿರಾಡೋಣ ಚೆಕ್ ಪೋಸ್ಟ್‌ನಲ್ಲಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸರಿಗೆ ಸಹಕಾರ ನೀಡಿದ ಆರೋಪದ ಮೇಲೆ ವಾಲಿಕಾರ್ ಎನ್ನುವ ಮತ್ತೋರ್ವ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿದ್ದಾರೆ. 

ಇಡೀ ಪ್ರಕರಣ ಸಂಚಲನ ಸೃಷ್ಟಿಸಿದ್ದು, ಚಡಚಣ ಪಿಎಸ್‌ಐ ತಿಪ್ಪಾರೆಡ್ಡಿ, ಸಿಪಿಐ ಸಾಹೇಬಗೌಡ ಪಾಟೀಲ್‌ಗು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಶಿರಾಡೋಣ ಚೆಕ್‌ಪೋಸ್ಟ್‌ನಲ್ಲಿ ವಸೂಲಿಗೆ ಖಾಸಗಿ ವ್ಯಕ್ತಿಗಳ ನೇಮಕ..!

ಚಡಚಣ ಠಾಣಾ ವ್ಯಾಪ್ತಿಯ ಮಹಾರಾಷ್ಟ್ರ ಗಡಿ ಶಿರಾಡೋಣ ಬಳಿ ಚಡಚಣ ಪೊಲೀಸರ ಚೆಕ್ ಪೋಸ್ಟ್ ಇದ್ದು ಇಲ್ಲಿನ ಪಿಎಸ್‌ಐ ಖಾಸಗಿ ವ್ಯಕ್ತಿಗಳನ್ನ (ನಕಲಿ ಪೊಲೀಸ್) ಅನಧಿಕೃತವಾಗಿ ನೇಮಕ ಮಾಡಿ ವಸೂಲಿಗೆ ಪ್ರೇರೇಪಿಸಿದ್ದರು. ಬನಸೋಡೆ, ಗುರುಬಸು ಸೇರಿ ಕೆಲ ಖಾಸಗಿ ವ್ಯಕ್ತಿಗಳು ಪೊಲೀಸರಂತೆ ಖಾಕಿ ಪ್ಯಾಂಟ್ ಧರಿಸಿ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳಿಂದ ವಸೂಲಿ ಮಾಡುತ್ತಿದ್ದರು. ಇಲ್ಲಿ ಸಂಗ್ರವಾದ ಹಣ ನಿತ್ಯ ಚಡಚಣ ಠಾಣೆಯ ಪಿಎಸ್‌ಐ ಗೆ ಸೇರುತ್ತಿತ್ತು ಎನ್ನಲಾಗಿದೆ.  ಇಲ್ಲಿ ವಸೂಲಿ ಮಾಡುತ್ತಿದ್ದ ಗುರುಬಸು ಎಂಬಾತನನ್ನ ಅರೆಸ್ಟ್ ಮಾಡಲಾಗಿದ್ದು, ಬನಸೋಡೆ ಎಂಬಾತನ ಬಂಧನದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಅನ್ನಭಾಗ್ಯ ಅಕ್ಕಿ ಸಾಗಾಟಕ್ಕೆ ಹಫ್ತಾ ಪಿಕ್ಸ್..!

ಬಡವರ ಹೊಟ್ಟೆ ತುಂಬಿಸಲು ‌ಸರ್ಕಾರ ಉಚಿತ ಅಕ್ಕಿಯ ವಿತರಣೆ ಮಾಡ್ತಿದೆ. ಆದ್ರೆ ಕೆಲ ಖದೀಮರಿಂದಾಗಿ ಬಡವರ ಅಕ್ಕಿ ಅಕ್ರಮವಾಗಿ ನೆರೆಯ ಮಹಾರಾಷ್ಟ್ರಕ್ಕೆ ಸಾಗಾಟವಾಗ್ತಿದೆ. ಅಕ್ರಮ ದಂಧೆ ನಡೆಸುತ್ತಿದ್ದ ಖದೀಮರಿಗೆ ಚಡಚಣ ಪೊಲೀಸರು ಸಾಥ್ ನೀಡುತ್ತಿದ್ದರು ಅನ್ನೋದೇ ಇಲ್ಲಿ ಅಚ್ಚರಿಯ ಸಂಗತಿಯಾಗಿದೆ. 

ಈ ಭಯಾನಕ ಸಂಗತಿಯು ಸ್ಟಿಂಗ್ ಆಫರೇಶನ್ ವೇಳೆ ಬಯಲಾಗಿತ್ತು. ಶಿರಾಡೋಣ ಚೆಕ್ ಪೋಸ್ಟ್ ನಲ್ಲಿದ್ದ ನಕಲಿ ಪೊಲೀಸರು ಚಡಚಣದ ಅಸಲಿ ಪೊಲೀಸರ ಜೊತೆಗೆ ಅಕ್ರಮ ಪಡಿತರ ಸಾಗಾಟಕ್ಕೆ ಹಫ್ತಾ ಫಿಕ್ಸ್ ಮಾಡಲು ಲಿಂಕ್ ಮಾಡಿಕೊಡುತ್ತಿದ್ದರು. ಹಾಗೆ ಸಂಪತ್ ಹಾಗೂ ಹೊನ್ನಾಕಟ್ಟಿ ಅನ್ನೋ ಚಡಚಣ ಪೊಲೀಸರು ಪಿಎಸ್‌ಐ ಹಾಗೂ ಸಿಪಿಐ ಪರವಾಗಿ ವಾಹನದ ಗಾತ್ರ, ಅಕ್ಕಿ ಸಾಗಾಟದ ಪ್ರಮಾಣದ ಮೇಲೆ ಹಫ್ತಾ ಫಿಕ್ಸ್ ಮಾಡುತ್ತಿದ್ದರು‌. ಇದು ಕೂಡ ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. 

ಪೊಲೀಸರ ವಸೂಲಿ ವಿರುದ್ಧ ಸಾರ್ವಜನಿಕ ಆಕ್ರೋಶ:

ಇನ್ನು ಪೊಲೀಸರ ವಸೂಲಿ ದಂಧೆಯ ಕುರಿತಂತೆ ಕವರ್ ಸ್ಟೋರಿ ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಚಡಚಣ ತಾಲೂಕಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕಠಿಣ ಕ್ರಮಕ್ಕಾಗಿ ಆಗ್ರಹಿಸುತ್ತಿದ್ದಾರೆ.

ವಿಜಯಪುರ ಚಡಚಣದಲ್ಲಿ ಮಾವಾ ದಂಧೆ, ಕ್ಯಾನ್ಸರ್‌ಗಿಂತಲೂ ಮಾರಕ ರೋಗಕ್ಕೆ ಜನ ತುತ್ತು!

ಹಂತಕ ಧರ್ಮರಾಜ್ ಹತ್ಯೆಗೆ ಸೂಪಾರಿ ಪಡೆದಿದ್ದ ಪೊಲೀಸರು:

ಚಡಚಣ ಪೊಲೀಸರು ಹಣಕ್ಕಾಗಿ ಏನು ಬೇಕಾದ್ರು ಮಾಡೋಕೆ ರೆಡಿ ಎನ್ನೋದು ಎಷ್ಟೋ ಬಾರಿ ಸಾಬೀತಾಗಿದೆ. ಈ ಹಿಂದೆ ಚಡಚಣ ಪಿಎಸ್‌ಐ ಗೋಪಾಲ್ ಹಳ್ಳೂರ್ ಹಂತಕ ಧರ್ಮರಾಜ್ ನಕಲಿ ಎನ್ಕೌಂಟರ್ ಗೆ ಸೂಪಾರಿ ಪಡೆದು ಬಳಿಕ ಆಗಿನ ಐಜಿಪಿ ಅಲೋಕ್‌ಕುಮಾರ್ ಬಳಿ ಸಿಕ್ಕಿಬಿದ್ದಿದ್ದರು. ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಪಿಎಸ್‌ಐ ಗೋಪಾಲ್ ಹಳ್ಳೂರ್ ಧರ್ಮರಾಜರನ್ನ ನಕಲಿ ಎನ್ಕೌಂಟರ್ ಮಾಡಲು ಸುಪಾರಿ ಪಡೆದಿದ್ದ ಎನ್ನುವ ಮಾಹಿತಿಯನ್ನ ಬಯಲಿಗೆಳೆದಿದ್ದರು. ಈಗ ವಿಜಯಪುರ ಎಸ್ಪಿ ಆಗಿರುವ ಆನಂದಕುಮಾರ್ ಆಗ ಸಿಐಡಿ ಅಧಿಕಾರಿಯಾಗಿ ತನಿಖೆ ನಡೆಸಿದ್ದರು. ಅದೆ ಅಧಿಕಾರಿ ಈಗ ವಿಜಯಪುರ ಎಸ್ಪಿಯಾಗಿದ್ದಾಗಲೇ ಮತ್ತೆ ಚಡಚಣ ಪೊಲೀಸರ ಹಣದ ದಾಹ ಬಯಲಿಗೆ ಬಿದ್ದಿದೆ.

Latest Videos
Follow Us:
Download App:
  • android
  • ios