Sonali Phogat ನಿಗೂಢ ಸಾವು ಪ್ರಕರಣ: ಪಾರ್ಟಿಯಲ್ಲಿ ಡ್ರಗ್ಸ್ ನೀಡಿದ್ದ ಆರೋಪಿಗಳು
Sonali Phogat suspicious death case: ನಟಿ ಮತ್ತು ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿಗೆ ಬಲವಂತದ ಮಾದಕ ವಸ್ತು ಸೇವನೆಯೇ ಕಾರಣವಿರಬಹುದು ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಪಣಜಿ: ನಟಿ ಮತ್ತು ರಾಜಕಾರಣಿ ಸೋನಾಲಿ ಪೋಗಟ್ ಸಾವಿನ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿದ್ದು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋನಾಲಿ ಪೋಗಟ್ ಸಾಯುವ ಹಿಂದಿನ ದಿನ ರಾತ್ರಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಬಲವಂತದಿಂದ ಮಾದಕ ವಸ್ತು ನೀಡಲಾಗಿದೆ, ಇದೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಗೋವಾ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಬಿಜೆಪಿ ನಾಯಕಿಗೆ ಪಾರ್ಟಿಯಲ್ಲಿ ಡ್ರಗ್ಸ್ ನೀಡಲಾಗಿದೆ, ಅದಾದ ನಂತರ ಆಕೆಯನ್ನು ಆರೋಪಿಗಳು ಟಾಯ್ಲೆಟ್‌ಗೆ ಕರೆದೊಯ್ದಿದ್ದಾರೆ. ಎರಡು ಗಂಟೆಗಳ ಕಾಲ ಟಾಯ್ಲೆಟ್‌ನಲ್ಲಿ ಏನು ನಡೆದಿರಬಹುದು ಊಹಿಸಿ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೋವಾದ ಇನ್ಸ್‌ಪೆಕ್ಟರ್ ಜನರಲ್ ಓಮ್ವಿರ್ ಸಿಂಗ್ ಬಿಷ್ನೋಯಿ ಮಾಧ್ಯಮಕ್ಕೆ ಮಾಹಿತಿ ನೀಡಿ, "ಪಾರ್ಟಿಯಲ್ಲಿ ಸೋನಾಲಿ ಪೋಗಟ್‌ರಿಗೆ ಒಬ್ಬ ಆರೋಪಿ ಬಲವಂತದಿಂದ ಡ್ರಗ್ಸ್ ನೀಡಿರುವುದು ಕಂಡು ಬಂದಿದೆ. ಯಾವುದೋ ಒಂದು ರಾಸಾಯನಿಕವನ್ನು ಅವರಿಗೆ ನೀಡಲಾಗಿದೆ. ಅದಾದ ನಂತರ ಅವರು ಅವರ ಮೇಲಿನ ಕಂಟ್ರೋಲ್ ಕಳೆದುಕೊಂಡಿದ್ದಾರೆ," ಎಂದರು.
"ಬೆಳಗ್ಗೆ 4.30ಕ್ಕೆ ಅವರು ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ನಂತರ ಆರೋಪಿ ಅವರನ್ನು ಟಾಯ್ಲೆಟ್‌ಗೆ ಕರೆದೊಯ್ದಿದ್ದಾನೆ. ಎರಡು ಗಂಟೆಗಳ ಕಾಲ ಟಾಯ್ಲೆಟ್‌ನಲ್ಲಿದ್ದರು ಅಂದರೆ ಅಲ್ಲಿ ಏನು ನಡೆದಿರಬಹುದು ಎಂಬುದನ್ನು ನೀವೇ ಊಹಿಸಿ. ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡದ ಜೊತೆ ಅವರನ್ನು ಘಟನಾ ಸ್ಥಳಗಳಿಗೆ ಕರೆದೊಯ್ಯುತ್ತೇವೆ. ನ್ಯಾಯಾಲಯಕ್ಕೂ ಇಬ್ಬರೂ ಆರೋಪಿಗಳನ್ನು ಶೀಘ್ರವಾಗಿ ಹಾಜರುಪಡಿಸುತ್ತೇವೆ. ಆರೋಪಿಗಳು ನೀಡಿದ್ದ ಮಾದಕ ವಸ್ತುವಿನ ಪ್ರಭಾವದಿಂದಲೇ ಸೋನಾಲಿ ಪೋಗಟ್ ಮೃತಪಟ್ಟಿರುವ ಸಾಧ್ಯತೆಯಿದೆ," ಎಂದು ಐಜಿಪಿ ಹೇಳಿದ್ದಾರೆ.
ಇದನ್ನೂ ಓದಿ: ಕೊಲೆಗೂ ಮುನ್ನ ಸೋನಾಲಿ ರೇಪ್: ಸಹೋದರ ರಿಂಕು ಆರೋಪ!
ಗೋವಾ ಪೊಲೀಸರು ಗುರುವಾರ ಇಬ್ಬರು ಆರೋಪಿಗಳನ್ನು ಪ್ರಕರಣ ಸಂಬಂಧ ಬಂಧಿಸಿದ್ದರು. ಆರೋಪಿಗಳು ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಪೋಗಟ್‌ರ ಜೊತೆ ಕೆಲಸ ಮಾಡುತ್ತಿದ್ದವರು. ಶವ ಪರೀಕ್ಷೆಯಲ್ಲಿ ಸೋನಾಲಿ ಪೋಗಟ್‌ರ ಮೇಲೆ ಗಾಯಗಳಾಗಿರುವುದು ಪತ್ತೆಯಾಗಿತ್ತು. ಆದರೆ ಗೋವಾ ಪೊಲೀಸರ ಮಾಹಿತಿ ಪ್ರಕಾರ ಕೊಲೆ ಪ್ರಕರಣಗಳ ರೀತಿಯಲ್ಲಿ ಶಾರ್ಪ್‌ಆದ ವಸ್ತುಗಳಿಂದ ಚುಚ್ಚಿದ ಗಾಯಗಳು ಯಾವುದೂ ಇರಲಿಲ್ಲ.
ಸುಧೀರ್ ಸಾಗ್ವಾನ್ ಮತ್ತು ಸಖ್ವಿಂದರ್ ವಾಸಿ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇಬ್ಬರೂ ನಟಿಯ ಪಿಎ ಗಳಾಗಿ ಕೆಲಸ ಮಾಡುತ್ತಿದ್ದರು. ಸೋನಾಲಿ ಪೋಗಟ್‌ರ ಸಹೋದರ ರಿಂಕು ಧಾಕಾ ನೀಡಿದ ದೂರಿನ ಮೇಲೆ ಇಬ್ಬರ ವಿರುದ್ಧ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಾಗ್ವಾನ್ ಮತ್ತು ವಾಸಿ ಇಬ್ಬರೂ ಆಗಸ್ಟ್ 22ರಂದು ಪೋಗಟ್ ಜತೆಗೆ ಗೋವಾಗೆ ಬಂದಿದ್ದರು.
ಇದನ್ನೂ ಓದಿ: ಸೋನಾಲಿ ಫೋಗಟ್ ಅವರ ಹೈ-ಫೈ ಗ್ಲಾಮರ್ಸ್ ಲೈಫ್‌ಸ್ಟೈಲ್ ಹೇಗಿತ್ತು ನೋಡಿ
ಪೋಗಟ್ ಮೊದಲು ಟಿಕ್‌ಟಾಕ್‌ನಿಂದ ಖ್ಯಾತಿ ಪಡೆದರು. ನಂತರ ಕೆಲವು ಹಿಂದಿ ಸೀರಿಯಲ್‌ಗಳಲ್ಲಿ ನಟಿಸಿದರು. ಬಿಗ್ ಬಾಸ್‌ನಲ್ಲಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಖ್ಯಾತಿಗೆ ಪಾತ್ರರಾಗಿದ್ದರು. ಆಗಸ್ಟ್ 23ರ ಮುಂಜಾನೆ ಪೋಗಟ್ ಮನೆಯಲ್ಲಿ ಮೃತಪಟ್ಟಿದ್ದರು. ನಂತರ ಶರೀರವನ್ನು ಸೆಂಟ್ ಅಂಟೊನಿ ಆಸ್ಪತ್ರೆಗೆ ತೆಗೆದೊಯ್ಯಲಾಗಿತ್ತು.