ದೇಹದ ಮೇಲಿನ ಗಾಯದ ಗುರುತು ನೀಡಿದ ಸುಳಿವು, ಊರಿಗೆ ಹೋಗಿದ್ದ ತಾಯಿ, ಈಗ ಮನೆಗೆ ಬಂದ ಪುತ್ರ, ಮದ್ಯ ಸೇವನೆಗೆ ಹಣ ನೀಡುವಂತೆ ತಂದೆ ಜತೆ ಗಲಾಟೆ, ಹಣ ನೀಡಲು ಒಪ್ಪದ ತಂದೆಯ ಜೊತೆ ಪುತ್ರನ ಜಗಳ, ಈ ವೇಳೆ ರುಬ್ಬುವ ಕಲ್ಲಿನಿಂದ ಹೊಡೆದು ತಂದೆ ಹತ್ಯೆ.
ಬೆಂಗಳೂರು(ಏ.28): ಇತ್ತೀಚೆಗೆ ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ ತನ್ನ ತಂದೆಯನ್ನು ರುಬ್ಬು ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ಮೃತರ ಮಗನನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲುಬರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕಾಟಮ್ಮ ದೇವರಹಳ್ಳಿ ಗ್ರಾಮದ ನೀಲಾಧರ್ ಅಲಿಯಾಸ್ ನೀಲಕಂಠ ಬಂಧಿತ. ಏ.10ರಂದು ತನ್ನ ತಂದೆ ಬಸವರಾಜು (60) ಅವರನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದ. ಬಳಿಕ ತನ್ನ ಮಗನ ಬಗ್ಗೆ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಬಸವರಾಜು ಅವರು, ಮಾರೇನಹಳ್ಳಿ ಪಿಎಫ್ ಲೇಔಟ್‌ನಲ್ಲಿ ಖಾಸಗಿ ಶಾಲೆಗೆ ಸೇರಿದ ಶೆಡ್‌ನಲ್ಲಿ ತಮ್ಮ ಪತ್ನಿ ಇಂದ್ರಮ್ಮ ಜತೆ ನೆಲೆಸಿದ್ದರು. ಆ ಶಾಲೆಯಲ್ಲಿ ಅವರ ಪತ್ನಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಸವರಾಜು ಪೆಂಟರ್ ಆಗಿದ್ದರು. ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದ ಅವರ ಪುತ್ರ ನೀಲಕಂಠ, ನಾಗರಬಾವಿಯಲ್ಲಿ ತನ್ನ ಕುಟುಂಬದ ಜತೆ ವಾಸವಾಗಿದ್ದ. ಆಗಾಗ್ಗೆ ಪೋಷಕರ ಮನೆಗೆ ಬಂದು ಹಣಕ್ಕಾಗಿ ಗಲಾಟೆ ಮಾಡಿ ಹೋಗುತ್ತಿದ್ದ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಊರಿಗೆ ಇಂದ್ರಮ್ಮ ಹೋಗಿದ್ದರು.
ಆಗ ತಾನೆ ಹುಟ್ಟಿದ ಶಿಶುವನ್ನು ಬಾತ್‌ರೂಮ್ ಕಿಟಕಿಯಿಂದ ಎಸೆದು ಸಾಯಿಸಿದ ಮಹಿಳೆ!
ಹೀಗಾಗಿ ಮನೆಯಲ್ಲಿ ಬಸವರಾಜು ಏಕಾಂಗಿಯಾಗಿ ನೆಲೆಸಿದ್ದರು. ಏ.10ರಂದು ತಂದೆ ಮನೆಗೆ ಬಂದ ನೀಲಕಂಠ, ಮದ್ಯ ಸೇವನೆಗೆ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಆಗ ಮಗನಿಗೆ ಬೈದು ಹೊರ ಕಳುಹಿಸಲು ಅವರು ಮುಂದಾಗಿದ್ದಾರೆ. ಈ ಮಾತಿಗೆ ಕೆರಳಿದ ಆತ, ತಂದೆ ಜೊತೆ ಗಲಾಟೆ ಶುರು ಮಾಡಿದ್ದಾನೆ. ಹಣ ಕೊಡದ ಕಾರಣಕ್ಕೆ ಬಸವರಾಜು ಅವರಿಗೆ ಖಾರ ರುಬ್ಬುವ ಕಲ್ಲಿನಿಂದ ಹೊಡೆದು ಆರೋಪಿ ಪರಾರಿಯಾಗಿದ್ದ. ಎರಡು ದಿನಗಳ ಬಳಿಕ ಕೊಳತೆ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮೊದಲು ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಬಸವರಾಜು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬದವರು ಭಾವಿಸಿದ್ದರು.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮೃತರ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಅಷ್ಟರಲ್ಲಿ ತನ್ನ ತಂದೆಯನ್ನು ತಾನೇ ಕೊಲೆ ಮಾಡಿದ್ದಾಗಿ ಸಂಬಂಧಿಕರ ಬಳಿ ಹೇಳಿಕೊಂಡು ನೀಲಕಂಠ ತಿರುಗಾಡುತ್ತಿದ್ದ. ಈ ವಿಚಾರ ತಿಳಿದ ಆರೋಪಿ ತಾಯಿ ಇಂದ್ರಮ್ಮ ಅವರು, ತನ್ನ ಪತಿ ಕೊಲೆಗೆ ಮಗನೇ ಕಾರಣವಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
