Bengaluru Crime: ಪ್ರೀತಿ ವಿರೋಧಿಸಿದ್ದ ತಮ್ಮನನ್ನೇ ತುಂಡರಿಸಿದ ಅಕ್ಕ: 8 ವರ್ಷ ಬಳಿಕ ಕೊಲೆ ರಹಸ್ಯ ಬಯಲು
ಕಳೆದ 8 ವರ್ಷಗಳ ಹಿಂದೆ ಅಕ್ಕನೇ ಸ್ವಂತ ತಮ್ಮನನ್ನು ಕೊಲೆ ಮಾಡಿ ತುಂಡರಿಸಿ ಎಸೆದಿದ್ದ ರಹಸ್ಯವೊಂದು ಈಗ ಬಯಲಾಗಿದೆ. ನಿರಂತರ ಕಾರ್ಯಾಚರಣೆಯಿಂದ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಆನೇಕಲ್ (ಮಾ.18): ಕಳೆದ 8 ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯವೊಂದು ಈಗ ಬಯಲಾಗಿದ್ದು, ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತಾನು ಪ್ರೀತಿ ಮಾಡುತ್ತಿದ್ದುದನ್ನು ವಿರೋಧಿಸಿದ ಸ್ವಂತ ತಮ್ಮನನ್ನೇ ಅಕ್ಕ ಕೊಲೆ ಮಾಡಿದ್ದಾಳೆ ಎಂಬುದು ಇಲ್ಲಿನ ಅಮಾನವೀಯ ಕೃತ್ಯವಾಗಿದೆ.
ಈ ಪ್ರಕರಣದಲ್ಲಿ ಕೊಲೆಯಾದ ಮೃತ ದುರ್ದೈವಿಯನ್ನು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ದೇವಣಗಾಂವ ಗ್ರಾಮದ ಲಿಂಗರಾಜು ಸಿದ್ದಪ ಪೂಜಾರಿ ಎಂದು ಗುರುತಿಸಲಾಗಿದೆ. ಭಾಗ್ಯಶ್ರೀ ಮತ್ತು ಆಕೆಯ ಪ್ರಿಯಕರ ಸುಪುತ್ರ ಶಂಕ್ರಪ್ಪ ತಳವಾರ್ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು 8 ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ನಗರದ ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ತಾವು ಗಂಡ - ಹೆಂಡತಿ ಎಂದು ಹೇಳಿಕೊಂಡು ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಬೆಂಗಳೂರಲ್ಲಿ ಹೆತ್ತ ಮಗಳನ್ನೇ ಕೊಲೆಗೈದ ದುಷ್ಟ ತಂದೆ: ದೊಣ್ಣೆಯಿಂದ ಹಲ್ಲೆ
ಒಂದೇ ಮನೆಯಲ್ಲಿ ಇರುವುದಕ್ಕೆ ತಮ್ಮನ ವಿರೋಧ: ಆರೋಪಿಗಳಾದ ಸುಪುತ್ರ ಮತ್ತು ಭಾಗ್ಯಶ್ರೀ ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಒಪ್ಪದ ಹಿನ್ನೆಲೆ ಇಬ್ಬರು ಪ್ರತ್ಯೇಕವಾಗಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಈ ನಡುವೆ ಸಂಸಾರದಲ್ಲಿ ವಿರಸ ಮೂಡಿ ಸುಪುತ್ರ ಬೆಂಗಳೂರು ಸೇರಿದ್ದನು. ಜೊತೆಗೆ ಮದುವೆಯಾಗಿದ್ದ ಗಂಡನನ್ನು ಬಿಟ್ಟು ತವರು ಸೇರಿಕೊಂಡಿದ್ದ ಭಾಗ್ಯಶ್ರೀಗೆ ಬೆಂಗಳೂರಿಗೆ ಬರುವಂತೆ ಹೇಳಿದ್ದಾನೆ. ಕೂಡಲೇ ತಮ್ಮ ಲಿಂಗರಾಜುನನ್ನು ಕರೆದುಕೊಂಡ ಅಕ್ಕ ಭಾಗ್ಯಶ್ರೀ ಬೆಂಗಳೂರಿಗೆ ಬರುತ್ತಾಳೆ. ಮೂವರೂ ಜಿಗಣಿಯ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಮಾಡುತ್ತಾ, ಪಕ್ಕದ ವಡೇರ ಮಂಚನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.
ಸುಪ್ರನೊಂದಿಗೆ ಅಕ್ಕನ ಸಲುಗೆ ನೋಡಿ ಸಹಿಸದ ತಮ್ಮ: ದಿನಗಳು ಕಳೆದಂತೆ ಭಾಗ್ಯಶ್ರೀ ಮತ್ತು ಸುಪತ್ರ ನಡುವಿನ ಸಲುಗೆ ತಮ್ಮ ಲಿಂಗರಾಜುಗೆ ಬೇಸರ ಮೂಡಿಸುತ್ತದೆ. ಅದೊಂದು ದಿನ ಸುಪುತ್ರನ ಸಂಬಂಧ ಮುರಿದುಕೊಳ್ಳುವಂತೆ ಅಕ್ಕ ಭಾಗ್ಯಶ್ರೀಗೆ ಲಿಂಗರಾಜು ತಾಕೀತು ಮಾಡುತ್ತಾನೆ. ಇದಕ್ಕೆ ಒಪ್ಪದಿದ್ದಾಗ ಕಪಾಳಕ್ಕೆ ಹೊಡೆಯುತ್ತಾನೆ. ಇಬ್ಬರ ಜಗಳದ ಮಧ್ಯಪ್ರವೇಶಿಸಿದ ಸುಪುತ್ರ ಲಿಂಗರಾಜುನನ್ನು ತಡೆಯಲು ಮುಂದಾಗುತ್ತಾನೆ. ಇದರಿಂದ ಕೋಪಗೊಂಡ ಲಿಂಗರಾಜು, ಅಕ್ಕನ ಪ್ರಿಯಕರ ಸುಪುತ್ರನ ಮೇಲೆ ಹಲ್ಲೆ ಮಾಡುತ್ತಾನೆ. ಪ್ರಿಯಕರನ ಮೇಲೆ ತಮ್ಮ ಲಿಂಗರಾಜು ಹಲ್ಲೆ ಮಾಡುತ್ತಿರುವುದನ್ನು ಕಂಡು ವ್ಯಾಘ್ರಗೊಂಡ ಭಾಗ್ಯಶ್ರೀ ಹರಿತ ಆಯುಧದಿಂದ ಹಲ್ಲೆ ಮಾಡುತ್ತಾರೆ. ನಿತ್ರಾಣಗೊಂಡ ಲಿಂಗರಾಜು ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ.
ನೋಯ್ಡಾದಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕೊಚ್ಚಿ ಚರಂಡಿಗೆಸೆದ ಪಾತಕಿಗಳು!
ಬೇರೆ ಬೇರೆ ಕಡೆ ದೇಹದ ತುಂಡು ಎಸೆದು ಪರಾರಿ: ಇನ್ನು ಲಿಂಗರಾಜು ಕೊಲೆಯನ್ನು ರಹಸ್ಯವಾಗಿಡಲು ಆತನ ಕೈ ಕಾಲು ರುಂಡ ಹಾಗೂ ಮುಂಡವನ್ನು ಕತ್ತರಿಸಿ 3 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಬೇರೆ ಬೇರೆ ಕಡೆ ಎಸೆದು ಪರಾರಿಯಾಗಿದ್ದಾರೆ. ಜಿಗಣಿ ಟೌನ್ ವಿ ಇನ್ ಹೊಟೇಲ್ ಬಳಿ ತುಂಡರಿಸಿ ಕೈ ಕಾಲುಗಳು ತುಂಬಿದ ಬ್ಯಾಗ್ ಪತ್ತೆಯಾಗಿತ್ತು. ಮತ್ತೊಂದೆಡೆ ರುಂಡವಿಲ್ಲದ ದೇಹವು ವಡೇರ ಮಂಚನಹಳ್ಳಿ ಕೆರೆಯಲ್ಲಿ ಪತ್ತೆಯಾಗಿತ್ತು. ಆದರೆ, ತಲೆ ಮಾತ್ರ ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ. ಆದರೆ, ಸ್ಥಳೀಯರ ಮಾಹಿತಿ ಆಧರಿಸಿ ಜಿಗಣಿ ಪೊಲೀಸ್ ಠಾಣೆಯಲ್ಲಿ 2 ಕೊಲೆ ಪ್ರಕರಣಗಳು ದಾಖಲಾಗುತ್ತವೆ.
ಹೆಸರು ಬದಲಿಸಿಕೊಂಡು ನಾಸಿಕ್‌ನಲ್ಲಿ ವಾಸ: ಕಳೆದ 3 ವರ್ಷದಿಂದ ಪ್ರಕರಣ ಬೇಧಿಸಲು ಸಾಧ್ಯವಾಗದೇ ಜಿಗಣಿ ಪೊಲೀಸರು ನ್ಯಾಯಾಲಯಕ್ಕೆ 2018ರಲ್ಲಿ ಸಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಇತ್ತೀಚೆಗೆ ಕೇಂದ್ರ ವಲಯ ಐಜಿ ರವಿಕಾಂತೇಗೌಡರು ಕ್ರೈಮ್ ರಿವೀವ್ ಸಭೆ ವೇಳೆ 2015 ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣಿಸುವಂತೆ ಜಿಗಣಿ ಪೊಲೀಸರಿಗೆ ಸೂಚಿಸಿದ್ದಾರೆ. ಪ್ರಕರಣದ ಮರು ತನಿಖೆಗೆ ಇಳಿದ ಜಿಗಣಿ ಪೊಲೀಸರ ನಿರಂತರ ಪರಿಶ್ರಮದ ಫಲವಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಪುತ್ರ ಮತ್ತು ಭಾಗ್ಯಶ್ರೀ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಅವರನ್ನು ಬಂಧಿಸಲು ಹೋದಾಗ ಪ್ರಿಯಾಂಕ ಮತ್ತು ವಿನೋದ್ ರೆಡ್ಡಿ ಎಂದು ಹೆಸರು ಬದಲಿಸಿಕೊಂಡು ವಾಸವಿರುತ್ತಾರೆ. ಅಂತಿಮವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವೃತ್ತಾಂತ ಬಯಲಾಗಿದೆ.
Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆಗೈದ ಪ್ರೇಮಿ
ಇನ್ಸ್‌ಪೆಕ್ಟರ್ ಸುದರ್ಶನ್ ತಂಡದಿಂದ ಕಾರ್ಯಾಚರಣೆ: ಅಂದಹಾಗೆ ಲಿಂಗರಾಜು ಕೊಲೆ ಬಳಿಕ ಸ್ವಗ್ರಾಮಕ್ಕೂ ತೆರಳದ ಆರೋಪಿಗಳು ಯಾರೊಬ್ಬರ ಸಂಪರ್ಕಕ್ಕೂ ಬಾರದೆ, ಮೊಬೈಲ್ ಪೋನ್ ಸಹ ಬಳಸದೇ ತಲೆ ಮರೆಸಿಕೊಂಡಿದ್ದರು. ಆದ್ರೆ ಟೆಕ್ನಿಕಲ್ ಎವಿಡೆನ್ಸ್ ಮತ್ತು ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ ಮತ್ತು ತಂಡ ಯಶಸ್ವಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿರವರು ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.