ಮಂಗಳೂರು ಮೂಲದವರೊಬ್ಬರ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ಜೈಲು ಸೇರಿ, 80 ಲಕ್ಷ ರು. ಬ್ಲಡ್‌ ಮನಿ ಪಾವತಿಸುವ ಮೂಲಕ 10 ವರ್ಷಗಳ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಬಂದಿದ್ದ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಕರ್ನಾಟಕ-ಕೇರಳ ಗಡಿಯಲ್ಲಿ ಡ್ರಗ್ಸ್ ಕಿಂಗ್ ಪಿನ್ ಆದ! ಸಿಕ್ಕಿಬಿದ್ದಿದ್ದು ಹೇಗೆ?

ತಿರುವನಂತಪುರಂ(ಜು.18): ಮಂಗಳೂರು ಮೂಲದವರೊಬ್ಬರ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ಜೈಲು ಸೇರಿ, 80 ಲಕ್ಷ ರು. ಬ್ಲಡ್‌ ಮನಿ ಪಾವತಿಸುವ ಮೂಲಕ 10 ವರ್ಷಗಳ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಬಂದಿದ್ದ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಿಂದ ಕೇರಳಕ್ಕೆ ಬಸ್‌ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದಾನೆ.

ಸೌದಿ ಜೈಲಿನಿಂದ ಬಿಡುಗಡೆಯಾಗಿದ್ದ ಪಾತಕಿ ಮಾಡಿದ್ದೇನು?

2006ರಲ್ಲಿ ಟ್ಯಾಕ್ಸಿ ಚಾಲಕನಾಗಿ ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಫಜಲುದ್ದೀನ್‌, ಅಲ್ಲಿ ಮಂಗಳೂರಿನ ಅಶ್ರಫ್‌ ಎಂಬುವವರ ಕೊಲೆ ಮಾಡಿ ಜೈಲು ಸೇರಿದ್ದ. ಬಳಿಕ ಸ್ವಯಂಸೇವಾ ಸಂಸ್ಥೆಯೊಂದರ ನೆರವಿನೊಂದಿಗೆ 80 ಲಕ್ಷ ರು. ಸಂಗ್ರಹಿಸಿ ಅದನ್ನು ಮೃತನ ಪರಿವಾರಕ್ಕೆ ಬ್ಲಡ್‌ ಮನಿ ಆಗಿ ನೀಡುವ ಮೂಲಕ ಫಜಲುದ್ದೀನ್ ಸೌದಿ ಜೈಲಿಂದ 2016ರಲ್ಲಿ ಬಿಡುಗಡೆಯಾಗಿದ್ದ.

ಚಹಾ ಅಂಗಡೀಲಿ ಕೆಲಸ ಮಾಡಿಕೊಂಡು ಡ್ರಗ್ಸ್ ದಂಧೆ!

ಭಾರತಕ್ಕೆ ಮರಳಿದ ಬಳಿಕ ಬೆಂಗಳೂರಿನಲ್ಲಿದ್ದ ಸ್ನೇಹಿತನ ಚಹಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಫಜಲುದ್ದೀನ್‌ ಬಳಿ 50 ಕೆ.ಜಿ. ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ 2023ರಲ್ಲಿ ಬೆಂಗಳೂರು ನಗರ ಪೊಲೀಸರು ಅವನನ್ನು ಬಂಧಿಸಿದ್ದರು. ಇಲ್ಲಿನ ಜೈಲಲ್ಲಿದ್ದಾಗ ಮಾದಕವಸ್ತು ಜಾಲದಲ್ಲಿ ಭಾಗಿಯಾಗಿರುವವರ ಪರಿಚಯ ಮಾಡಿಕೊಂಡಿದ್ದ ಫಜಲ್‌, 2026ರ ಜನವರಿಯಲ್ಲಿ ಬಿಡುಗಡೆಯಾದ ಬಳಿಕ ಕೇರಳಕ್ಕೆ ತೆರಳಿ, ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಹಾಗೂ ಮಾದಕವಸ್ತು ಜಾಲವೊಂದರ ಕಿಂಗ್‌ಪಿನ್‌ ಆದ.

ಪಾತಕಿ ಸಿಕ್ಕಿಬಿದ್ದಿದ್ದು ಹೇಗೆ?

ಕರ್ನಾಟಕ-ಕೇರಳ ನಡುವೆ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಗರು ಮತ್ತು ಸಿಬ್ಬಂದಿಯ ನೆರವಿನಿಂದ ಡ್ರಗ್ಸ್‌ ಸಾಗಿಸುತ್ತಿದ್ದ ಫಜಲ್‌ನ ಸಹಚರ ಡೆನ್ನಿಯನ್ನು ಜೂ.22ರಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತನ ಕಾಲ್‌ ರೆಕಾರ್ಡ್‌, ಬ್ಯಾಂಕ್‌ ವ್ಯವಹಾರಗಳ ಪರಿಶೀಲನೆ ವೇಳೆ ಸಿಕ್ಕ ಮಾತಿಯನ್ನಾಧರಿಸಿ ಜಾಲದ ಕಿಂಗ್‌ಪಿನ್‌ ಫಜಲ್‌ನನ್ನು ತಲುಪಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.