ಮಕ್ಕಳಾಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕುಟುಂಬಸ್ಥರು ಮಾಂತ್ರಿಕನ ಬಳಿ ಕರೆದೊಯ್ದಿದ್ದು, ಆತ ಆಕೆಗೆ ಟಾಯ್ಲೆಟ್ ನೀರು ಕುಡಿಸಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.

ಆ ಮಹಿಳೆಗೆ ಮದುವೆಯಾಗಿ 10 ವರ್ಷವಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆಯ ಕುಟುಂಬದವರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡುವ ಬದಲು ಸ್ವಯಂ ಘೋಷಿತ ಮಾಂತ್ರಿಕನ ಬಳಿ ಕರೆದೊಯ್ದಿದ್ದು, ಆಕೆಯ ಬಂಜೆತನಕ್ಕೆ ಔಷಧಿ ನೀಡುವಂತೆ ಕೇಳಿದ್ದಾರೆ. ಆದರೆ ಆ ಪಾಪಿ ಮಾಂತ್ರಿಕ ಮಾಡಿದ ಅವಾಂತರಕ್ಕೆ ಮಗುವಿನ ಆಸೆಯಿಂದ ಚಿಕಿತ್ಸೆಗೆ ಬಂದ 35 ವರ್ಷದ ಮಹಿಳೆಯ ಜೀವವೇ ಹೋಗಿದೆ. ಇಂತಹ ಆಘಾತಕಾರಿ ಘಟನ ನಡೆದಿರುವುದು ಉತ್ತರ ಪ್ರದೇಶದಲ್ಲಿ.

ಅಝಂಗರ್‌ನ ಅನುರಾಧ ಎಂಬ ಮಹಿಳೆಗೆ 10 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಆಕೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆಯ ಅತ್ತೆ ಹಾಗೂ ಅಮ್ಮ ಇಬ್ಬರು ಸೇರಿ ಆಕೆಯನ್ನು ಚಂದು ಎಂಬ ಮಾಂತ್ರಿಕ ಬಳಿ ಕರೆದುಕೊಂಡು ಬಂದಿದ್ದಾರೆ. ಆತ ಅನುರಾಧ ಅವರ ಕುಟುಂಬಕ್ಕೆ ಆಕೆಯ ಬಂಜೆತನವನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ 1 ಲಕ್ಷ ರೂಪಾಯಿ ವೆಚ್ಚವಾಗುವುದು ಎಂದು ಅವರ ಮನೆಯವರಿಗೆ ಹೇಳಿದ್ದಾನೆ. ಜೊತೆಗೆ ಅಡ್ವಾನ್ಸ್ ರೂಪದಲ್ಲಿ 22 ಸಾವಿರ ಹಣವನ್ನು ತೆಗೆದುಕೊಂಡಿದ್ದಾನೆ. ಉಳಿದ ಮೊತ್ತವನ್ನು ಚಿಕಿತ್ಸೆ ನೀಡಿದ ನಂತರ ನೀಡುವಂತೆ ಮನೆಯವರಿಗೆ ಮಾಂತ್ರಿಕ ಚಂದು ಹೇಳಿದ್ದಾನೆ.

ಇದಾದ ನಂತರ ಇವರು ಮಾಂತ್ರಿಕ ಚಿಕಿತ್ಸೆ ಎಂದು ಹೇಳಿಕೊಂಡು ಮಹಿಳೆ ಅನುರಾಧರನ್ನು ಮಾಂತ್ರಿಕ ಚಂದು ಆತನ ಪತ್ನಿ ಶಭ್ನಂ ಹಾಗೂ ಇಬ್ಬರು ಸಹಾಯಕರು ಹಿಡಿದುಕೊಂಡಿದ್ದಾರೆ. ಅಲ್ಲದೇ ಆಕೆಯನ್ನು ಕೂದಲಿನಲ್ಲಿ ಹಿಡಿದು ಎಳೆದಾಡಿದ ಪಾಪಿಗಳು, ಆಕೆಯನ್ನು ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡು ಒತ್ತಾಯಪೂರ್ವಕವಾಗಿ ಟಾಯ್ಲೆಟ್ ನೀರನ್ನು ಕುಡಿಸಲು ಯತ್ನಿಸಿದ್ದಾರೆ. ಈ ವೇಳೆ ಆಕೆ ವಿರೋಧಿಸಿದ್ದಾಗ ಮಾಂತ್ರಿಕ ಚಂದ್ರು, ಆಕೆಯ ದೇಹದಲ್ಲಿರುವ ಆತ್ಮ ಬಹಳ ಸ್ಟ್ರಾಂಗ್ ಆಗಿದೆ, ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದಿದ್ದಾನೆ.

ಆದರೆ ಟಾಯ್ಲೆಟ್ ನೀರು ಕುಡಿಸಿದ ನಂತರ ಅನುರಾಧ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಮಾಂತ್ರಿಕ ಚಂದು ಆಕೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಲ್ಲಿ ಅನುರಾಧ ಸಾವಿಗೀಡಾಗಿದ್ದು, ಆಕೆಯ ಸಾವು ಖಚಿತವಾಗುತ್ತಿದ್ದಂತೆ ಮಾಂತ್ರಿಕ ಚಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ನಂತರ ಅನುರಾಧ ಅವರ ತಂದೆ ಬಲಿರಾಂ ಯಾದವ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿ ಚಂದುವನ್ನು ಬಂಧಿಸಿದ್ದಾರೆ. ಆತನ ಪತ್ನಿ ಹಾಗೂ ಸಹಚರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಅಝಂಗರ್ ಜಿಲ್ಲೆಯ ಕಂಧಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಹಲ್ವಾನ್ ಪುರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು/ಸೊಸೆ ಸತ್ತ ನಂತರ ಈಗ ಕುಟುಂಬದವರು ಎಚ್ಚೆತ್ತುಕೊಂಡಿದ್ದು, ಆ ಕಪಟಿ ಮಾಂತ್ರಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಮಾಂತ್ರಿಕನ ಬಳಿ ಕರೆದೊಯ್ಯುವ ಬದಲು ಆಸ್ಪತ್ರೆಗೆ ಕರೆದೊಯ್ದಿದ್ದರೆ ಕನಿಷ್ಟ ಪಕ್ಷ ಮಹಿಳೆಯ ಜೀವವಾದರೂ ಉಳಿಯುತ್ತಿತ್ತು. ಆದರೆ ಮೂಡನಂಬಿಕೆಯನ್ನೆ ನಂಬಿದ ಕುಟುಂಬ ಈಗ ಮಾಂತ್ರಿಕನ ನಂಬಿ ಮಗಳ ಜೀವ ಕಳೆದುಕೊಳ್ಳುವಂತಾಗಿದೆ.

ಮೃತ ಅನುರಾಧಾ ಮೂವರು ಒಡಹುಟ್ಟಿದವರಲ್ಲಿ ಹಿರಿಯವರಾಗಿದ್ದು, ಈಗ ಮನೆಯವರ ಮೌಢ್ಯಕ್ಕೆ ಬಲಿಯಾಗಿದ್ದಾರೆ. ಸ್ಥಳೀಯರು ಹೇಳುವಂತೆ ಮಂತ್ರವಾದಿ ಚಂದು ತನ್ನ ಮನೆಯಲ್ಲಿ ನಕಲಿ ಆಧ್ಯಾತ್ಮಿಕ ವ್ಯವಸ್ಥೆ ಸ್ಟೃಷ್ಟಿ ಮಾಡಿದ್ದ. ತನ್ನ ಅನುಯಾಯಿಗಳನ್ನು ಆಕರ್ಷಿಸಲು ಆತ ಅಲ್ಲಿ ಸಣ್ಣ ದೇಗುಲ ನಿರ್ಮಿಸಿದ್ದ, ಅಲ್ಲಿ ಗಂಟೆಗಳು ವಿಗ್ರಹಗಳು ಇದ್ದವು. ಹತ್ತಿರದ ಪ್ರದೇಶಗಳಿಂದ ಜನರು ಸಹಾಯಕ್ಕಾಗಿ ಆಗಾಗ್ಗೆ ಅವನನ್ನು ಭೇಟಿ ಮಾಡುತ್ತಿದ್ದರು. ಕೆಲವು ಗ್ರಾಮಸ್ಥರು ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ.