ನಾಲ್ಕು ದಶಕಗಳ ಕಾಲ ಅಧಿಕಾರದಲ್ಲಿದ್ದ ಹಿರಿಯ ನಾಯಕರೊಬ್ಬರು, ಕುರ್ಚಿ ಕೈತಪ್ಪಿದಾಗ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಲೇಖನವು ಅವರ ಈ ನಡೆಯನ್ನು 'ಅಭಾವ ವೈರಾಗ್ಯ' ಎಂದು ವಿಶ್ಲೇಷಿಸುತ್ತದೆ. ಅಧಿಕಾರದಲ್ಲಿದ್ದಾಗ ವ್ಯವಸ್ಥೆಯನ್ನು ಸುಧಾರಿಸದೆ, ಈಗ ಅದರ ಬಗ್ಗೆ ಮಾತನಾಡುವುದರ ಹಿಂದಿನ ಸತ್ಯಾಸತ್ಯತೆಯನ್ನು ಇದು ಪ್ರಶ್ನಿಸುತ್ತದೆ.

ರಾಜ್ಯದಲ್ಲಿ ಬರೋಬ್ಬರಿ 40 ವರ್ಷಗಳ ರಾಜಕಾರಣ ಮಾಡಿ, ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ, ಅಧಿಕಾರ ಕಳೆದುಕೊಂಡ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ರಾಜಕೀಯ ಕಲುಷಿತಗೊಂಡಿದೆ ಎಂದು ಕಾರಣ ನೀಡಿದ್ದಾರೆ. ಲೇಖಕರು ಇದನ್ನು 'ಅಭಾವ ವೈರಾಗ್ಯ' ಎಂದು ಟ್ವೀಟ್ ಪೋಸ್ಟ್ ಮೂಲಕ ವಿಪಕ್ಷ ನಾಯಕ ಆರ್. ಅಶೋಕ್ ಕಟುವಾಗಿ ಟೀಕೆ ಮಾಡಿದ್ದಾರೆ.

ಅಭಾವ ವೈರಾಗ್ಯ: ನಾಲ್ಕು ದಶಕಗಳ ಅಧಿಕಾರ ಸಂಸಾರ ತೊರೆದ ‘ರಾಜಕೀಯ ಸನ್ಯಾಸಿ’!

ನಮ್ಮ ನಾಡಿನ ಒಬ್ಬ ಹಿರಿಯ ನಾಯಕರು ಸುಮಾರು ನಾಲ್ಕು ದಶಕಗಳ ಕಾಲ ಜನಸೇವೆಯ ಹೆಸರಿನಲ್ಲಿ ಅಧಿಕಾರದ ರಸದೌತಣ ಸವಿಯುತ್ತಾ, 9 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಎರಡೆರಡು ಬಾರಿ ಮುಖ್ಯಮಂತ್ರಿಯಾಗಿ ಪ್ರತಿಯೊಂದು ತುತ್ತನ್ನೂ ಚಪ್ಪರಿಸಿದರು. ತಮ್ಮ ಮನೆಯ ಮುಂದಿನ ಪೀಳಿಗೆಗೂ ಅದೇ ಅಧಿಕಾರದ ರಸದೌತಣ ಸವಿಯುವ ವಾರಸುದಾರಿಕೆ ಕೊಟ್ಟರು.

ಆದರೆ, ಕಥೆಯಲ್ಲಿ ದೊಡ್ಡ ತಿರುವು ಬಂದಿದ್ದೇ ಅಧಿಕಾರದ ಕುರ್ಚಿ ಕೈತಪ್ಪಿದಾಗ!

ಒಮ್ಮೆಲೇ ಆ ನಾಯಕರಿಗೆ ಹಠಾತ್ ಜ್ಞಾನೋದಯವಾಯಿತು:

"ಅಯ್ಯೋ! ಈ ಚುನಾವಣಾ ರಾಜಕಾರಣ ಎಷ್ಟು ಕಲುಷಿತಗೊಂಡಿದೆ ಗೊತ್ತಾ? ಜನರು ಹಿಂದೆ ನಮಗೆ ಹಣ ಕೊಟ್ಟು ಗೆಲ್ಲಿಸುತ್ತಿದ್ದರು, ಈಗ ನಾವೇ ಹಣ ಕೊಟ್ಟು ಗೆಲ್ಲಬೇಕಾಗಿದೆ! ಹಾಗಾಗಿ ನಾನ್‌ ಮುಂದಿನ ಎಲೆಕ್ಷನ್ನಲ್ಲಿ ಸ್ಪರ್ಧಿಸಲ್ಲಪ್ಪೋ..." ಎಂದು ವೈರಾಗ್ಯ ಪ್ರದರ್ಶನ ಮಾಡಿದರು.

ಅಷ್ಟೇ ಅಲ್ಲ, ಪತ್ರಿಕೆಯಲ್ಲಿ ದೊಡ್ಡದೊಂದು ಲೇಖನ ಬರೆದು, "ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶುದ್ಧೀಕರಿಸಲು ಎಲ್ಲರೂ ಒಟ್ಟಾಗಿ ಬನ್ನಿ" ಎಂದು ಕರೆಕೊಟ್ಟು ಕ್ರಾಂತಿಕಾರಿಯಾದರು.

ಅಭಾವ ವೈರಾಗ್ಯದ ಸಿದ್ಧಾಂತ!

ನಮ್ಮ ಹಿರಿಯರು ಮನುಷ್ಯನ ಜೀವನದಲ್ಲಿ ಮೂರು ರೀತಿಯ ವೈರಾಗ್ಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ಹಾಗೂ ಅಭಾವ ವೈರಾಗ್ಯ.

ಆ ಹಿರಿಯ ನಾಯಕರಿಗೆ ಈಗ ಬಂದಿರುವುದು "ಅಭಾವ ವೈರಾಗ್ಯ" – ಅಂದರೆ ಒಂದು ಭೋಗದ ವಸ್ತು ಸಿಕ್ಕಾಗ ಅನುಭವಿಸಿ, ಅದು ಸಿಗದಂತಾದಾಗ "ಅಯ್ಯೋ, ಅದೆಲ್ಲಾ ಮಾಯೆ, ಪಾಪ, ನಶ್ವರ!" ಎಂದು ತತ್ತ್ವಜ್ಞಾನ ಹೇಳುವುದು.

ಕುರ್ಚಿ ಇದ್ದಾಗ: ರಾಜಕೀಯ ಅಂದರೆ ತಂತ್ರಗಾರಿಕೆ, ಭಾಗ್ಯ, ಗ್ಯಾರಂಟಿ, ವೋಟ್ ಬ್ಯಾಂಕ್, ಅಧಿಕಾರದ ಪವರ್, ಕುರ್ಚಿ!

ಕುರ್ಚಿ ಹೋದಾಗ: ರಾಜಕೀಯ ಅಂದರೆ ಕಲುಷಿತ, ಹಣದ ಹೊಳೆ, ಪ್ರಜಾಪ್ರಭುತ್ವದ ಅಧಃಪತನ!

ಎರಡೆರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ, ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಾಗ, ಮಂತ್ರಿಗಿರಿ ಹಂಚುವಾಗ ನೆನಪಾಗದ "ಚುನಾವಣಾ ಸುಧಾರಣೆ", ಅಧಿಕಾರ ಕಳೆದುಕೊಂಡ ಮೇಲೆಯೇ ನೆನಪಾಗಬೇಕೇ?

ಕೈಯಲ್ಲಿ ಅಧಿಕಾರವಿದ್ದಾಗ ಸಿಸ್ಟಮ್‌ ಬಗೆಗೆ ತುಟಿಪಿಟಕ್ ಅನ್ನದೆ, ಅಧಿಕಾರ ಕಳೆದುಕೊಂಡ ಮೇಲೆ "ವ್ಯವಸ್ಥೆ ಕೆಟ್ಟಿದೆ" ಎಂದು ಪ್ರವಚನ ಮಾಡುವುದು ಆತ್ಮಾವಲೋಕನವಲ್ಲ; ಅದು ಅಧಿಕಾರ ಕಳೆದುಕೊಂಡವರ ಆತ್ಮಸಾಂತ್ವನ!

ಈ ಅಭಾವ ವೈರಾಗ್ಯಕ್ಕೆ, ಅನಿವಾರ್ಯ ಸನ್ಯಾಸತ್ವಕ್ಕೆ ಜನಸಾಮಾನ್ಯರ ಸಣ್ಣ ಪ್ರಶ್ನೆ:

❓ನಾಲ್ಕು ದಶಕಗಳ ಕಾಲ ಸಿಸ್ಟಮ್‌ ಒಳಗಿದ್ದು, ಸಿಸ್ಟಮ್ ಸುಧಾರಿಸಲು ಏನು ಮಾಡಿದ್ದೀರಿ?

❓ನಾಲ್ವತ್ತು ವರ್ಷ ಅಧಿಕಾರದಲ್ಲಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಕೈಯಲ್ಲಿದ್ದ ಅಧಿಕಾರ ಬಳಸದೆ, ಈಗ ದೊಡ್ಡ 'ವಿಚಾರವಾದಿ'ಯಂತೆ ಉಪದೇಶ ಕೊಡುವುದು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ?

ದ್ರಾಕ್ಷಿ ಹಣ್ಣು ಕೈಗೆ ಸಿಕ್ಕುವವರೆಗೂ ಸಿಹಿ, ಸಿಗದಂತಾದಾಗ "ಅಯ್ಯೋ, ಆ ದ್ರಾಕ್ಷಿ ಹುಳಿ!" ಎನ್ನುವ ಕಥೆ ನಮಗೆಲ್ಲಾ ಗೊತ್ತಿದೆ.

ರಾಜಕೀಯದಲ್ಲೂ ಅಷ್ಟೇ... ಅಧಿಕಾರ ಸಿಗುವವರೆಗೂ ರಾಜಕಾರಣ "ಸೇವೆ", ಸಿಗದಂತಾದ ಮೇಲೆ ಅದೇ ರಾಜಕಾರಣ "ಕಲುಷಿತ"!

Scroll to load tweet…